ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಜಕೀಯ: ಜಾತಿಗಳ ನಿಷ್ಠೆ ಬದಲು; ಪಕ್ಷಗಳಿಗೆ ಪರ್ಯಾಯ ಗೆಲುವು

Last Updated 21 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಭಾರತದ ಹೆಚ್ಚಿನ ರಾಜ್ಯಗಳ ಹಾಗೆಯೇ ರಾಜಸ್ಥಾನದ ರಾಜಕಾರಣದಲ್ಲಿಯೂ ಜಾತಿ ಲೆಕ್ಕಾಚಾರವೇ ಮುಖ್ಯವಾದುದು. ಈ ರಾಜ್ಯದಲ್ಲಿ 1993ರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿವೆ. ಪ್ರತಿ ಚುನಾವಣೆಯಲ್ಲಿಯೂ ಕೆಲವು ಜಾತಿಗಳ ನಿಷ್ಠೆ ಬದಲಾವಣೆ ಈ ಪರ್ಯಾಯ ಗೆಲುವಿನ ಹಿಂದೆ ಕೆಲಸ ಮಾಡಿದೆ.

ರಜಪೂತ ಸಮುದಾಯದ ಜನರ ಪ್ರಮಾಣ ಶೇ 8ರಷ್ಟು ಮಾತ್ರ ಇದೆ. ಆದರೆ ಸುಮಾರು 50 ಕ್ಷೇತ್ರಗಳಲ್ಲಿ ಈ ಜಾತಿ ನಿರ್ಣಾಯಕ. ಜೋಧಪುರ, ಜೈಸಲ್ಮೇರ್‌, ನಾಗೌರ್‌, ಜಾಲೌರ್‌ ಮತ್ತು ಸೀಕರ್‌ ಪ್ರದೇಶಗಳನ್ನು ಒಳಗೊಂಡ ಮಾರ್‌ವಾಡ ಪ್ರಾಂತ್ಯದಲ್ಲಿ ರಜಪೂತರ ಪ್ರಭಾವ ಹೆಚ್ಚು. ಜಾಟ್‌ ಮತ್ತು ಬಿಷ್ಣೋಯಿ ಸಮುದಾಯದ ಜನರ ಪ್ರಮಾಣ ಶೇ 18ರಷ್ಟಿದೆ. ಬೇಸಾಯವೇ ಕುಲಕಸುಬಾಗಿರುವ ಈ ಸಮುದಾಯಗಳ ಪ್ರಭಾವ ಇಡೀ ರಾಜ್ಯಕ್ಕೆ ವ್ಯಾಪಿಸಿದೆ.

ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸುವಲ್ಲಿ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳೂ (ಎಸ್‌.ಟಿ) ನಿರ್ಣಾಯಕ. ರಾಜ್ಯದಲ್ಲಿ 34 ಎಸ್‌.ಸಿ. ಮೀಸಲು ಮತ್ತು 25 ಎಸ್‌.ಟಿ. ಮೀಸಲು ಕ್ಷೇತ್ರಗಳಿವೆ.

ರಜಪೂತ ಮತ್ತು ಜಾಟ್‌ ಸಮುದಾಯದ ನಡುವೆ ಬಹುದೊಡ್ಡ ಸಂಘರ್ಷ ಇದೆ. ಈ ಎರಡೂ ಜಾತಿಗಳು ಒಂದೇ ಪಕ್ಷಕ್ಕೆ ಮತ ಹಾಕಿದ್ದು ಒಂದೆರಡು ಬಾರಿ ಮಾತ್ರ. ಈ ಸಮುದಾಯಗಳ ನಡುವಣ ವೈರತ್ವಕ್ಕೆ ಐತಿಹಾಸಿಕ ಕಾರಣವೂ ಇದೆ. ರಜಪೂತರು ಭೂಮಾಲೀಕರು. ಈ ಭೂಮಿಯನ್ನು ಗೇಣಿಗೆ ಪಡೆದು ಉಳುತ್ತಿದ್ದವರು ಜಾಟರು.

ಸ್ವಾತಂತ್ರ್ಯ‍ಪೂರ್ವದಲ್ಲಿಯೇ ಇದ್ದ ವೈರತ್ವ, ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದ ನಂತರ ಇನ್ನಷ್ಟು ತೀವ್ರಗೊಂಡಿತು. ಜಾಟ್‌ ನಾಯಕ ಮತ್ತು ಸಮಾಜ ಸುಧಾರಕ ಬಲದೇವ್‌ ಮಿರ್ಧಾ ಅವರು 1946ರಲ್ಲಿಯೇ ಜಾಟರನ್ನು ಒಗ್ಗೂಡಿಸಿ ಮಾರ್‌ವಾಡ ಕಿಸಾನ್‌ ಸಭಾ ಎಂಬ ಸಂಘಟನೆ ಕಟ್ಟಿದರು.

1951ರ ಮೊದಲ ವಿಧಾನಸಭಾ ಚುನಾವಣೆಗೂ ಮೊದಲೇ ಮಾರ್‌ವಾಡ ಕಿಸಾನ್‌ ಸಭಾವನ್ನು ಕಾಂಗ್ರೆಸ್ ಜತೆಗೆ ವಿಲೀನ ಮಾಡಲು ಮಿರ್ಧಾ ಒಪ್ಪಿದರು. ಉಳುವವನೇ ಹೊಲದೊಡೆಯ ಎಂಬ ಕಾನೂನು ತರಬೇಕು ಎಂಬುದು ವಿಲೀನಕ್ಕೆ ಮಿರ್ಧಾ ಅವರು ಹಾಕಿದ ಷರತ್ತಾಗಿತ್ತು. 1955ರಲ್ಲಿ ಈ ಬೇಡಿಕೆಯನ್ನು ಕಾಂಗ್ರೆಸ್‌ ಸರ್ಕಾರವು ಈಡೇರಿಸಿತು.

ಭೂ ಸುಧಾರಣೆ ಜಾರಿಯೊಂದಿಗೆ ಜಾಟ್‌ ಸಮುದಾಯಕ್ಕೂ ಭೂ ಮಾಲೀಕತ್ವ ದಕ್ಕಿತು. ರಾಜಕೀಯವಾಗಿ ಇದು ಹಲವು ಪರಿಣಾಮಗಳಿಗೆ ಕಾರಣವಾಯಿತು. ಜಾಟ್‌ ಸಮುದಾಯ ಕಾಂಗ್ರೆಸ್‌ ಜತೆಗೆ ಗಟ್ಟಿಯಾಗಿ ನಿಂತಿತು. ತಮ್ಮ ಹಿತಾಸಕ್ತಿಯ ಪರವಾಗಿ ಕಾಂಗ್ರೆಸ್‌ ಪಕ್ಷ ಇಲ್ಲ ಎಂದು ಭಾವಿಸಿದ ರಜಪೂತ, ಬ್ರಾಹ್ಮಣ ಮತ್ತು ವೈಶ್ಯ ಸಮುದಾಯಗಳು ಸ್ವತಂತ್ರ ಪಾರ್ಟಿ, ಭಾರತೀಯ ಜನಸಂಘ, ನಂತರ ಬಿಜೆಪಿಯ ಬೆಂಬಲಕ್ಕೆ ನಿಂತವು.

ಪರಂಪರಾಗತವಾಗಿ ಕಾಂಗ್ರೆಸ್‌ ಜತೆಗೇ ಇದ್ದ ದಲಿತ ಸಮುದಾಯದ ನಿಷ್ಠೆ ಈಗ ಮೊದಲಿನಷ್ಟೇ ಗಟ್ಟಿಯಾಗಿದೆ ಎಂದು ಹೇಳುವಂತಿಲ್ಲ. ಆದರೆಕಳೆದ ಎರಡು ವರ್ಷಗಳಲ್ಲಿ ದಲಿತರು ಹಲವು ಬಾರಿ ವಿವಿಧ ಕಾರಣಗಳಿಗಾಗಿ ಪ್ರತಿಭಟನೆ ನಡೆಸಿದ್ದಾರೆ. ಹಲವು ಪ್ರತಿಭಟನೆಗಳು ಹಿಂಸೆಗೆ ತಿರುಗಿವೆ. ಪೊಲೀಸ್‌ ಗೋಲಿಬಾರ್‌ ಕೂಡ ನಡೆದಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ‘ದುರ್ಬಲ’ಗೊಳಿಸಿದೆ ಎಂಬುದರ ವಿರುದ್ಧವೂ ಪ್ರತಿಭಟನೆ ನಡೆದಿದೆ. ಸುಪ್ರೀಂ ಕೋರ್ಟ್‌ ತೀರ್ಪು ಬಂದ ತಕ್ಷಣವೇ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ದಲಿತರಲ್ಲಿ ಇದೆ.

ಈ ಬಾರಿಯ ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳು ಸ್ವಲ್ಪ ಭಿನ್ನವಾಗಿರುವಂತೆ ಕಾಣಿಸುತ್ತಿವೆ. ರಜಪೂತ ಸಮುದಾಯದ ಗ್ಯಾಂಗ್‌ಸ್ಟರ್‌ ಆನಂದ್‌ ಪಾಲ್‌ ಸಿಂಗ್‌ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಸತ್ತಿದ್ದಾನೆ ಎಂಬ ಶಂಕೆ ರಜಪೂತ ಸಮುದಾಯಕ್ಕೆ ಇದೆ. ಇದು ವಸುಂಧರಾ ರಾಜೇ ಅವರ ಮೇಲೆ ರಜಪೂತರು ಮುನಿಸಿಕೊಳ್ಳುವಂತೆ ಮಾಡಿದೆ. ಬಿಜೆಪಿಯ ಹಿರಿಯ ನಾಯಕ ಭೈರೋನ್‌ ಸಿಂಗ್‌ ಶೆಖಾವತ್‌ ಅವರು ಅತ್ಯಂತ ಜತನದಿಂದ ರಜಪೂತರನ್ನು ತಮ್ಮ ಪಕ್ಷದ ಜತೆಗೆ ನಿಲ್ಲುವಂತೆ ನೋಡಿಕೊಂಡಿದ್ದರು. ಆದರೆ ವಸುಂಧರಾ ಅವರು ರಜಪೂತ ಸಮುದಾಯಕ್ಕೆ ಏನನ್ನೂ ಮಾಡಿಲ್ಲ ಎಂಬ ಸಿಟ್ಟು ಸಮುದಾಯದಲ್ಲಿ ಇದೆ.

ರಜಪೂತರ ನಾಯಕ ಜಸ್ವಂತ್‌ ಸಿಂಗ್‌ ಅವರನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂಬ ಬೇಸರ ಈ ಸಮುದಾಯವನ್ನು ಕಾಡುತ್ತಿದೆ. ಈ ಅತೃಪ್ತಿಯನ್ನು ಅನುಕೂಲಕರವಾಗಿ ಪರಿವರ್ತಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಜಸ್ವಂತ್‌ ಸಿಂಗ್‌ ಅವರ ಮಗ ಮಾನವೇಂದ್ರ ಸಿಂಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ರಜಪೂತರನ್ನು ಒಲಿಸಿಕೊಳ್ಳುವ ಕಾರ್ಯತಂತ್ರ ಆರಂಭಿಸಿದೆ.

ಜಾಟ್‌ ಸಮುದಾಯವು ನಿಷ್ಠೆ ಬದಲಿಸಿದ್ದನ್ನು 2003ರ ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಗಮನಿಸಬಹುದು. 1998ರ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಜಾಟ್‌ ನಾಯಕ ಪರಶುರಾಮ್‌ ಮದೇರ್ನಾ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಗಾಂಧಿ ಕುಟುಂಬಕ್ಕೆ ನಿಕಟವಾಗಿದ್ದ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿಯಾದರು. ಕೆರಳಿದ ಜಾಟ್‌ ಸಮುದಾಯ 2003ರ ಚುನಾವಣೆಯಲ್ಲಿ ಬಿಜೆಪಿಗೆ ಸಾರಾಸಗಟಗಾಗಿ ಮತ ಹಾಕಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 56 ಸ್ಥಾನಗಳನ್ನಷ್ಟೇ ಗೆದ್ದಿತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಜಾಟ್‌ ಮತಗಳು ಭಾರಿ ಪ್ರಮಾಣದಲ್ಲಿ ಬಿಜೆಪಿಗೆ ಸಿಕ್ಕಿವೆ. ಗೆಹ್ಲೋಟ್‌ ವಿರುದ್ಧದ ಸಿಟ್ಟಿನ ಜತೆಗೆ ವಸುಂಧರಾ ಅವರು ತಮ್ಮ ಸಮುದಾಯದ ಸೊಸೆ ಎಂಬ ಅಭಿಮಾನ ಜಾಟರಲ್ಲಿ ಇದೆ (ವಸುಂಧರಾ ಅವರ ಗಂಡ ಹೇಮಂತ್‌ ಸಿಂಗ್‌ ಜಾಟ್‌ ಸಮುದಾಯದವರು. ಈ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ).

2013ರ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ಬಳಿಕ ವಸುಂಧರಾ ಅವರು ಜಾಟ್‌ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಸಮುದಾಯ ಭಾವಿಸಿದೆ. ಕೃಷಿಯ ಮೇಲೆ ಅವಲಂಬಿತರಾಗಿರುವ ಜಾಟ್‌ ಜನರಿಗೆ ಕೃಷಿ ಕ್ಷೇತ್ರದ ಸಂಕಷ್ಟ ವಸುಂಧರಾ ಮೇಲೆ ಇನ್ನಷ್ಟು ಸಿಟ್ಟು ತರಿಸಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಈ ಜಾತಿಯ ಹಲವು ಮುಖಂಡರು ಕಾಂಗ್ರೆಸ್‌ ಪಕ್ಷ
ಸೇರಿಕೊಂಡಿದ್ದಾರೆ.

ರಜಪೂತ ಮತ್ತು ಜಾಟ್‌ ಸಮುದಾಯಗಳು ಒಟ್ಟಾಗಿ ಒಂದೇ ಪಕ್ಷಕ್ಕೆ ಮತ ಹಾಕಿದ್ದು ಬಹಳ ಕಡಿಮೆ. ರಜಪೂತರನ್ನು ಓಲೈಸಲು ಕಾಂಗ್ರೆಸ್‌ ಮುಂದಾದರೆ ಜಾಟ್ ಸಮುದಾಯದ ಬೆಂಬಲವನ್ನು ಕಾಂಗ್ರೆಸ್‌ ಕಳೆದುಕೊಳ್ಳಬಹುದೇ ಎಂಬ ಪ್ರಶ್ನೆ ಇದೆ. ಆದರೆ, ಜಾಟ್‌ ಸಮುದಾಯಕ್ಕೆ ಈಗ ಬಿಜೆಪಿ ಸರ್ಕಾರದ ಮೇಲೆ ಆಕ್ರೋಶ ಇದೆ. ಕಾಂಗ್ರೆಸ್‌ ಬಗೆಗಿನ ಆಕ್ರೋಶ ಕಮ್ಮಿಯಾಗಿದೆ. ಈ ಎರಡೂ ಸಮುದಾಯಗಳು ಯಾವ ರೀತಿ ಮತ ಹಾಕಲಿವೆ ಎಂಬುದರ ಮೇಲೆಯೇ ರಾಜಸ್ಥಾನ ವಿಧಾನಸಭೆ ಚುನಾವಣೆಯ ಫಲಿತಾಂಶ ನಿರ್ಧಾರವಾಗಲಿದೆ.

**

ರಜಪೂತ–ಜಾಟ್‌ ಒಟ್ಟಾದಾಗ...
ಭಾರಿ ರಾಜಕೀಯ ಅಲೆ ರಾಜ್ಯವನ್ನು ವ್ಯಾಪಿಸಿದ ಸಂದರ್ಭಗಳಲ್ಲಿ ಮಾತ್ರ ಜಾಟ್‌ ಮತ್ತು ರಜಪೂತ ಸಮುದಾಯಗಳು ಒಂದೇ ಪಕ್ಷಕ್ಕೆ ಮತ ಹಾಕಿವೆ. 1989ರ ಚುನಾವಣೆಯಲ್ಲಿ ಬಿಜೆಪಿಯ ಭೈರೋನ್‌ ಸಿಂಗ್ ಶೆಖಾವತ್‌ ಮತ್ತು ಚೌಧರಿ ದೇವಿಲಾಲ್‌ ಅವರು ಒಟ್ಟಾಗಿ ಕಾಂಗ್ರೆಸ್‌ ವಿರುದ್ಧ ಅಭಿಯಾನವನ್ನೇ ನಡೆಸಿದಾಗ ಎರಡೂ ಸಮುದಾಯಗಳು ಕಾಂಗ್ರೆಸ್ ವಿರುದ್ಧ ಮತ ಹಾಕಿದ್ದವು. ಆಗ ಬಿಜೆಪಿ ಮತ್ತು ವಿ.ಪಿ. ಸಿಂಗ್‌ ಅವರ ಜನತಾ ದಳದ ನಡುವೆ ಮೈತ್ರಿ ಆಗಿತ್ತು. 2013–14ರಲ್ಲಿ ಕೂಡ ನರೇಂದ್ರ ಮೋದಿ ಅಲೆ ಜಾತಿ ಲೆಕ್ಕಾಚಾರವನ್ನು ಮೀರಿ ಕೆಲಸ ಮಾಡಿತ್ತು.

**
ಜಾಟ್‌ ಸಮುದಾಯದ 40 ಶಾಸಕರು, ಎಂಟು ಲೋಕಸಭಾ ಸದಸ್ಯರು ಇದ್ದಾರೆ
ರಜಪೂತ ಸಮುದಾಯದ 26 ಶಾಸಕರಿದ್ದಾರೆ
ಗುಜ್ಜರ್‌ ಸಮುದಾಯದ ಭರವಸೆಯ ನಾಯಕ ಸಚಿನ್‌ ಪೈಲಟ್‌ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಆ ಜಾತಿಯ ಮತಗಳು ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆ ಹೆಚ್ಚು
1993ರ ನಂತರ ಯಾವುದೇ ಪಕ್ಷ ಎರಡನೇ ಅವಧಿಗೆ ಪುನರಾಯ್ಕೆ ಆಗಿಲ್ಲ ಎಂಬುದು ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು ತುಂಬಿದೆ
ವಸುಂಧರಾ ರಾಜೇ ಸರ್ಕಾರದ ವಿರುದ್ಧ ಭಾರಿ ಆಡಳಿತ ವಿರೋಧಿ ಅಲೆ ಇರುವಂತೆ ಕಾಣಿಸುತ್ತಿದೆ
ಜಾಟ್‌ ಸಮುದಾಯವನ್ನು ಒಲಿಸಿಕೊಳ್ಳಲು ಬೇಕಾದ ಕೆಲಸಗಳೆಲ್ಲವನ್ನೂ ಕಾಂಗ್ರೆಸ್‌ ಮಾಡುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT