ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರಲ್ಲಿ ಭಾರತೀಯ ಯೋಧರೇ ಅಧಿಕ

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಅಂತರರಾಷ್ಟ್ರೀಯ ದಿನಾಚರಣೆ: ಭದ್ರತಾ ಸಿಬ್ಬಂದಿಗೆ ಗೌರವ
Last Updated 30 ಮೇ 2018, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕಳೆದ 70 ವರ್ಷಗಳ ಅವಧಿಯಲ್ಲಿ ವಿಶ್ವಸಂಸ್ಥೆಯು ವಿವಿಧ ದೇಶಗಳಲ್ಲಿ ಕೈಗೊಂಡ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಮೃತಪಟ್ಟವರ ಪೈಕಿ ಭಾರತೀಯರ ಸಂಖ್ಯೆಯೇ ಅಧಿಕ. ಕರ್ತವ್ಯದ ವೇಳೆ ಭಾರತದ ಪೊಲೀಸರು ಹಾಗೂ ಯೋಧರು ಸೇರಿ 163 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

1948ರಿಂದ ಈವರೆಗೆ ವಿವಿಧ ದೇಶಗಳ ಒಟ್ಟು 3,737 ಸಿಬ್ಬಂದಿ ಮೃತಪಟ್ಟಿದ್ದಾರೆ. ಸೈಪ್ರಸ್, ಕಾಂಗೊ, ಹೈಟಿ, ಲೆಬನಾನ್, ಮಧ್ಯ‌ಪ್ರಾಚ್ಯ, ದಕ್ಷಿಣ ಸುಡಾನ್ ಹಾಗೂ ಪಶ್ಚಿಮ ಸಹಾರಾದಲ್ಲಿ ಸದ್ಯ ಭಾರತದ 6,693 ಮಂದಿ ಯೋಧರು ಕರ್ತವ್ಯ ನಿರತರಾಗಿದ್ದಾರೆ. ಶಾಂತಿಪಾಲನಾ ಪಡೆಗೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜಿಸಿದ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಂತರರಾಷ್ಟ್ರೀಯ ದಿನವನ್ನು ವಿಶ್ವಸಂಸ್ಥೆಯಲ್ಲಿ ಮಂಗಳವಾರ ಆಚರಿಸಲಾಯಿತು. ಅನುಪಮ ಸೇವೆ ಸಲ್ಲಿಸಿದ ಹಾಗೂ ಪ್ರಾಣತ್ಯಾಗ ಮಾಡಿದ ಸಿಬ್ಬಂದಿಯನ್ನು ಸ್ಮರಿಸಲಾಯಿತು.

124 ದೇಶಗಳ ಒಟ್ಟು 96 ಸಾವಿರ ಸಿಬ್ಬಂದಿ ವಿಶ್ವಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ 15 ಸಾವಿರ ನಾಗರಿಕ ಸಿಬ್ಬಂದಿ ಮತ್ತು 1600 ಸ್ವಯಂ ಸೇವಕರು ದುಡಿಯುತ್ತಿದ್ದಾರೆ.

2017ರ ಕಾರ್ಯಾಚರಣೆಗಳಲ್ಲಿ ಯಾವೊಬ್ಬ ಭಾರತೀಯರೂ ಮೃತಪಟ್ಟಿಲ್ಲ. 2016ರಲ್ಲಿ ಇಬ್ಬರು ಪ್ರಾಣ ತ್ಯಾಗ ಮಾಡಿದ್ದಾರೆ. ಕಾಂಗೊದಲ್ಲಿ ಶಾಂತಿಪಾಲನಾ ಪಡೆಯಲ್ಲಿದ್ದ ಬ್ರಿಜೇಶ್ ಥಾಪಾ ಮತ್ತು ಲೆಬನಾನ್‌ನಲ್ಲಿದ್ದ ರವಿ ಕುಮಾರ್ ಅವರು ಮೃತಪಟ್ಟಿದ್ದರು.

1948ರ ಮೇ 29ರಂದು ಮಧ್ಯಪ್ರಾಚ್ಯದಲ್ಲಿ ಮೊದಲ ಬಾರಿಗೆ ಶಾಂತಿಪಾಲನಾ ಪಡೆಯು ಕಾರ್ಯಾಚರಣೆಗೆ ಇಳಿದಿತ್ತು.

ಗುಟೆರಸ್ ಶ್ಲಾಘನೆ
‘ವಿಶ್ವಸಂಸ್ಥೆಯ ಪರವಾಗಿ ಕೆಲಸ ಮಾಡಿ, ಲೆಕ್ಕವಿಲ್ಲದಷ್ಟು ಜನರ ಪ್ರಾಣ ರಕ್ಷಿಸಿದ 10 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.

ಅಪ್ರತಿಮ ಸಾಧನೆ ಮಾಡಿದ 3,700 ಮಂದಿಗೆ ಗೌರವಪೂರ್ವಕವಾಗಿ ನೀಲಿ ಹೆಲ್ಮೆಟ್‌ಗಳನ್ನು ನೀಡಲಾಗಿದೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಿರುವ, ಸದ್ಯ ನಡೆಯುತ್ತಿರುವ 14 ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಯನ್ನೂ ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT