ಗುರುವಾರ , ನವೆಂಬರ್ 14, 2019
23 °C

ಐಎಂಎ ವಂಚನೆ ಪ್ರಕರಣ| ಐಎಎಸ್‌ ಅಧಿಕಾರಿ ಖತ್ರಿ ವಿಚಾರಣೆ

Published:
Updated:
Prajavani

ಬೆಂಗಳೂರು: ಐಎಂಎ ಸಮೂಹ ಕಂಪನಿ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ತನಿಖಾ ತಂಡ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ದಾಖಲಿಸಿಕೊಂಡಿತು.

ಇಲ್ಲಿನ ಸಿಬಿಐ ಕಚೇರಿಗೆ ಈಚೆಗೆ ಆಗಮಿಸಿದ ಖತ್ರಿ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದರು. ಈ ಹಿರಿಯ ಐಎಎಸ್‌ ಅಧಿಕಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಐಎಂಎ ವಂಚನೆ ಪ್ರಕರಣ ಬಯಲಾಯಿತು.

ಐಎಂಎ ಸಮೂಹ ಕಂಪನಿ ಪರ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಲು ಖತ್ರಿ ಅವರಿಗೆ ಹಣ ನೀಡಲಾಗಿತ್ತು ಎಂದು ಪ್ರಮುಖ ಆರೋಪಿ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ನೀಡಿದ್ದಾರೆನ್ನಲಾದ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ವಿಚಾರಣೆ ನಡೆಸಿತು. ಆದರೆ, ಅಧಿಕಾರಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್‌ ಹಾಗೂ ಬೆಂಗಳೂರು ಉತ್ತರ ವಲಯದ ಉಪ ವಿಭಾಗಾಧಿಕಾರಿ ಎಲ್‌.ಸಿ ನಾಗರಾಜ್‌ ಅವರು ನೀಡಿದ್ದ ‘ಕ್ಲೀನ್‌ ಚಿಟ್‌’ ಮೇಲೆ ಎನ್‌ಒಸಿ ಪಡೆಯಲು ಖಾನ್‌ ಯತ್ನಿಸಿದ್ದರು. ಆದರೆ, ಖತ್ರಿ ಎನ್‌ಒಸಿ ಕೊಡಲು ನಿರಾಕರಿ ಸಿದ್ದರು.

ಈ ಮಧ್ಯೆ, ಗುರುವಾರ ಇದೇ ಪ್ರಕರಣದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರನ್ನು ಪ್ರಶ್ನಿಸಲಾಗಿದೆ. ಅನೇಕ ರಾಜಕಾರಣಿಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)