ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಲಕ್ಷ ಕೋಟಿ ಪ್ಯಾಕೇಜ್‌ಗೆ ಬೇಡಿಕೆ: ರೈತರಿಂದ ಪ್ರತಿಭಟನಾ ರ್‍ಯಾಲಿ

ಕೇಂದ್ರ ಸರ್ಕಾರಕ್ಕೆ ನೆರೆ–ಬರ ಸಂತ್ರಸ್ತರ ಅಧಿವೇಶನದಲ್ಲಿ ಒತ್ತಾಯ
Last Updated 14 ಅಕ್ಟೋಬರ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೋಮವಾರ ಅಧಿವೇಶನ ನಡೆಸಿದ ನೆರೆ ಮತ್ತು ಬರ ಸಂತ್ರಸ್ತರು ₹1 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡ ನೂರಾರು ಸಂತ್ರಸ್ತರು ಮತ್ತು ರೈತರು, ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಾಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಡಾ.ಎಚ್.ವಿ.ವಾಸು, ‘ಕರ್ನಾಟಕದಿಂದ ಕೇಂದ್ರಕ್ಕೆ ₹1.10 ಲಕ್ಷ ಕೋಟಿ ನೇರ ತೆರಿಗೆ ಸಂದಾಯವಾಗುತ್ತಿದೆ. ಜಿಎಸ್‌ಟಿ ರೂಪದಲ್ಲಿ ವರ್ಷಕ್ಕೆ ₹33 ಸಾವಿರ ಕೋಟಿ ನೀಡಲಾಗುತ್ತಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ನೀಡುವ ಅನುದಾನ ಶೇ 40ರಷ್ಟು (₹56 ಸಾವಿರ ಕೋಟಿ) ಮಾತ್ರ. ನಮ್ಮ ರಾಜ್ಯದಿಂದ ಸಂಗ್ರಹಿಸುವ ತೆರಿಗೆಯನ್ನು (ಒಟ್ಟು ₹1.40 ಲಕ್ಷ ಕೋಟಿ) ಈ ವರ್ಷ ನಮಗೇ ನೀಡಬೇಕು’ ಎಂದರು.

ದುಡ್ಡು ಎಲ್ಲಿದೆ?:ಸ್ಥಳಕ್ಕೆ ಬಂದ ವಸತಿ ಸಚಿವ ವಿ.ಸೋಮಣ್ಣ,‘ನೆರೆ–ಬರದಿಂದ ಹಾನಿಗೀಡಾದ ಸಂತ್ರಸ್ತರಿಗೆ, ಯಾವ ಪ್ರಮಾಣದ ಹಾನಿಗೆ ಎಷ್ಟು ಪರಿಹಾರ ನೀಡಬೇಕು ಎಂಬ ಬಗ್ಗೆ ಎಂಟು–ಹತ್ತು ದಿನಗಳಲ್ಲಿ ನಿರ್ಧರಿಸಲಾಗುವುದು. ಎಲ್ಲರಿಗೂ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಪರಿಹಾರ ನೀಡಲು ರಾಜ್ಯದಲ್ಲಿ ದುಡ್ಡು ಎಲ್ಲಿದೆ?’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವೇದಿಕೆಯಲ್ಲೇ ಸೋಮಣ್ಣ ಅವರನ್ನು ಪ್ರಶ್ನಿಸಿದರು. ಇದರಿಂದ ಮುಜುಗರಕ್ಕೀಡಾದ ಸಚಿವ, ‘ಕೊಡಗಿನಲ್ಲಿ ಭೂ ಕುಸಿತದಿಂದ ಸಂತ್ರಸ್ತರಾದವರಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ನೀವು ನಮಗೆ ಮಾತ್ರ ಕಿವಿ ಹಿಂಡುತ್ತೀರಿ. ಇನ್ನೊಬ್ಬರಿಗೆ (ವಿರೋಧ ಪಕ್ಷಗಳಿಗೆ) ಏನೂ ಹೇಳುವುದಿಲ್ಲ. ಅದೇಕೋ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪನವರು ನೆರೆ ಸಂತ್ರಸ್ತರಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ಬಳಿ ದುಡ್ಡಿಲ್ಲ. ಅವರನ್ನು ನಾನು ಬೈಯುತ್ತಿಲ್ಲ. ಅವರ ಅಸಹಾಯಕ ಸ್ಥಿತಿಯನ್ನು ಹೇಳುತ್ತಿದ್ದೇನೆ. ರಾಜ್ಯದಲ್ಲಿನ ಕೇಂದ್ರ ಸಚಿವರು ಹೊಣೆಗೇಡಿಗಳಂತೆ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷಗಳು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ವಿರುದ್ಧ ವಿರೋಧ ಪಕ್ಷಗಳುದೆಹಲಿಯಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಿತ್ತು’ ಎಂದೂ ದೊರೆಸ್ವಾಮಿ ಹೇಳಿದರು.

ನೆರೆ– ಬರ ಸಂತ್ರಸ್ತರ ಪ್ರಮುಖ ಹಕ್ಕೊತ್ತಾಯ

*ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪುನರ್‌ ಪರಿಶೀಲಿಸಿ ವಾಸ್ತವಿಕ–ವೈಜ್ಞಾನಿಕ ಮಾನದಂಡ ರೂಪಿಸಬೇಕು

*ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು

*ಪ್ರವಾಹ ಪೀಡಿತ– ಬರ ಪ್ರದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು

*ಪ್ರವಾಹ ಪ್ರದೇಶದ ಪರಿಸ್ಥಿತಿ ಬಗ್ಗೆ ಪುನರ್‌ ಸಮೀಕ್ಷೆ ನಡೆಸಬೇಕು

*ಹೈನುಗಾರಿಕೆ ಕ್ಷೇತ್ರಕ್ಕೆ ಮಾರಕವಾಗಿರುವ ಆರ್.ಸಿ.ಇ.ಪಿ ಒಪ್ಪಂದಕ್ಕೆ ಸಹಿ ಹಾಕಬಾರದು

*
ಶೀಘ್ರದಲ್ಲಿಯೇ ರೈತ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು. ಎಲ್ಲ 26 ಹಕ್ಕೊತ್ತಾಯಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು
-ಆರ್.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT