ಸೋಮವಾರ, ಜುಲೈ 26, 2021
21 °C
ಸಂಘಟನೆಗೆ ಶ್ರಮಿಸಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕಿತ್ತು: ಉಭಯ ಪಕ್ಷಗಳಲ್ಲಿ ಚರ್ಚೆ

ರಾಜ್ಯಸಭೆ ಚುನಾವಣೆ | ಕುಟುಂಬ ರಾಜಕಾರಣದ ಸುತ್ತ ‘ಕೈ–ದಳ’ ಗಿರಕಿ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯಸಭೆ ಚುನಾವಣೆ ವೇಳೆ ಬಲಾಢ್ಯರು, ಕುಟುಂಬ ರಾಜಕಾರಣಕ್ಕೆ ಜೋತು ಬೀಳುವ ಚಾಳಿಗೆ ವಿದಾಯ ಹಾಡಿದ ಬಿಜೆಪಿಯ ನಡೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಹೊಸತೊಂದು ಚರ್ಚೆಗೆ ವೇದಿಕೆ ಕಲ್ಪಿಸಿದೆ.

ಕಾಂಗ್ರೆಸ್‌–ಜೆಡಿಎಸ್‌ಗೆ ದಕ್ಕಿದ ತಲಾ ಒಂದು ಸ್ಥಾನವನ್ನು ಆಯಾ ಪಕ್ಷಗಳ ಅತ್ಯಂತ ಹಿರೀಕರಿಗೆ ಹಾಗೂ ರಾಜಕೀಯವಾಗಿ ಪ್ರಭಾವಿಯಾಗಿರುವ ಕುಟುಂಬಗಳಿಗೆ ಎರಡೂ ಪಕ್ಷಗಳು ಧಾರೆ ಎರೆದಿರುವುದು ಈ ಜಿಜ್ಞಾಸೆಗೆ ಕಾರಣವಾಗಿದೆ. ಈಗಿನ ಚುನಾವಣೆ ನಾಲ್ಕು ಸದಸ್ಯರ ಅವಧಿ ಮುಗಿಯುವ ಕಾರಣಕ್ಕೆ ನಡೆಯುತ್ತಿದೆ. ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ–2, ಕಾಂಗ್ರೆಸ್‌ಗೆ ಒಂದು ಸ್ಥಾನ ಸಲೀಸಾಗಿ ಲಭಿಸುತ್ತಿತ್ತು. ಜೆಡಿಎಸ್‌ಗೆ ಸಂಖ್ಯಾಬಲ ಇಲ್ಲದೇ ಇದ್ದರೂ ಕಾಂಗ್ರೆಸ್‌ನ ಹೆಚ್ಚುವರಿ ಮತ ಪಡೆದು ಗೆಲ್ಲುವ ಅನುಕೂಲ ಇತ್ತು.

ಕನ್ನಡ ಧ್ವನಿ- ಪ್ರಜಾವಾಣಿ ಪಾಡ್‌ಕಾಸ್ಟ್ ಇಲ್ಲಿ ಕೇಳಿ:

ಬಿಜೆಪಿ ಬಳಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೂ ಮತ್ತಷ್ಟು ಮತಗಳು ಉಳಿಯುತ್ತಿದ್ದವು. ಆದರೆ, ಎಚ್‌.ಡಿ. ದೇವೇಗೌಡರು ಸ್ಪರ್ಧಿಸು ವುದಾದರೆ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ, ಮತ್ತೆ ಅವರನ್ನು ಸೋಲಿಸಬಾರದು ಎಂಬ ಉದ್ದೇಶದಿಂದ ಬಿಜೆಪಿ ಮತ್ತೊಬ್ಬ ಅಭ್ಯರ್ಥಿಯನ್ನು ಸ್ಪರ್ಧೆಗೆ ದೂಡುವ ಉಸಾಬರಿಗೆ ಹೋಗಲಿಲ್ಲ. ದೇವೇಗೌಡರು ಸ್ಪರ್ಧೆಗೆ ಆಸಕ್ತಿ ತೋರದೇ ಇದ್ದರೆ ಕಾಂಗ್ರೆಸ್‌ನ ಹೆಚ್ಚುವರಿ ಮತ ಹಾಗೂ ಜೆಡಿಎಸ್‌ನ ಕೆಲವು ಮತಗಳನ್ನು ಒಡೆದು ಮತ್ತೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವ ರಾಜಕಾರಣಕ್ಕೆ ಬಿಜೆಪಿ ಮುಂದಾಗುತ್ತಿತ್ತು. ಗೌಡರ ರಂಗಪ್ರವೇಶ ದಿಂದಾಗಿ ಈಗ ಮತದಾನ ನಡೆಯದೇ ಅವಿರೋಧ ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ಬಿಜೆಪಿಯಲ್ಲಿ ಈ ಬಾರಿ ಕೂಡ ಪ್ರಭಾವಿಗಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು. ಉಮೇಶ ಕತ್ತಿ ತಮ್ಮ ಸೋದರ ರಮೇಶ ಕತ್ತಿಗೆ ಟಿಕೆಟ್ ಬೇಕು ಎಂದು ಹಟ ಹಿಡಿದಿದ್ದರು. ಉದ್ಯಮಿ ಪ್ರಕಾಶ್ ಶೆಟ್ಟಿ, ಶಿಕ್ಷಣ ಕ್ಷೇತ್ರದ ಪ್ರಭಾಕರ ಕೋರೆ ಕೂಡ ಪೈಪೋಟಿ ನೀಡಿದ್ದರು. ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ಕೊಡಬೇಕು ಎಂಬ ಆಗ್ರಹವೂ ಇತ್ತು. ಆದರೆ, ಅದ್ಯಾವುದನ್ನೂ ಬಿಜೆಪಿ ಲೆಕ್ಕಿಸಲಿಲ್ಲ.

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ. ದೇವೇಗೌಡರು ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎರಡೂ ಪಕ್ಷಗಳಲ್ಲಿ ಅಸಮಾಧಾನದ ಹೊಗೆ ಶುರುವಾಗಿತ್ತು. ಬಿಜೆಪಿಯು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ ಬಳಿಕ ಖರ್ಗೆ ಹಾಗೂ ಗೌಡರು ಅಭ್ಯರ್ಥಿಯಾದ ಬಗ್ಗೆ ಅತೃಪ್ತಿಯ ಕಿಡಿ ಎದ್ದಿದೆ. ಆದರೆ, ಇಬ್ಬರೂ ಹಿರಿಯ ನಾಯಕರಾಗಿರುವುದರಿಂದಾಗಿ ಯಾರೊಬ್ಬರೂ ಬಹಿರಂಗ ವಾಗಿ ಸೊಲ್ಲೆತ್ತುವ ಧೈರ್ಯ ಮಾಡುತ್ತಿಲ್ಲ ಎಂದು ಆ ಪಕ್ಷಗಳ ಎರಡನೇ ಹಂತದ ನಾಯಕರೇ ಹೇಳುತ್ತಿದ್ದಾರೆ.

ದೇವೇಗೌಡರ ಮಕ್ಕಳಾದ ಎಚ್‌ಡಿ. ರೇವಣ್ಣ, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸೊಸೆ ಅನಿತಾ ಕುಮಾರಸ್ವಾಮಿ ಶಾಸಕರು. ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದ, ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಜಿಲ್ಲಾಪಂಚಾಯಿತಿ ಸದಸ್ಯೆ. ದೂರದಲ್ಲಿ ಬೀಗರಾದ ಡಿ.ಸಿ. ತಮ್ಮಣ್ಣ ಹಾಗೂ ಸಿ.ಎನ್‌. ಬಾಲಕೃಷ್ಣ ಶಾಸಕರು. ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಚುನಾವಣೆಗೆ ನಿಂತು ಸೋಲು ಕಂಡಿದ್ದಾರೆ.

‘ಲೋಕಸಭೆ ಅಧಿವೇಶನದಲ್ಲಿ 2 ನಿಮಿಷ ಸಮಯ ಕೊಡುತ್ತಾರೆ. ದೇಶದ ಬಗ್ಗೆ, ರೈತನ ಬಗ್ಗೆ ಮಾತನಾಡಲು ಮಾಜಿ ಪ್ರಧಾನಿಯಾದ ನನಗೆ ಸ್ವಲ್ಪ ಜಾಸ್ತಿ ಸಮಯ ಕೊಡಿ ಎಂದರೂ ಸ್ಪೀಕರ್ ಕೇಳುವುದಿಲ್ಲ. ಆ ಸೌಭಾಗ್ಯಕ್ಕೆ ಏತಕ್ಕಾಗಿ ಲೋಕಸಭೆಗೆ ಹೋಗಲಿ‘ ಎಂದು ಗೌಡರು ಸಂಸದರಾಗಿದ್ದಾಗ ಹೇಳುತ್ತಿದ್ದುದು ಉಂಟು. 

ದೇವೇಗೌಡರು ಸೋಲು–ಗೆಲುವು ಗಳೆಲ್ಲವನ್ನೂ ಅರಗಿಸಿಕೊಂಡು ಸುದೀರ್ಘ ವರ್ಷ ರಾಜಕಾರಣ ಮಾಡಿದವರು. ಅವರು ಈಗ 87 ವರ್ಷ ಪೂರೈಸಿದ್ದಾರೆ. ಈ ಹೊತ್ತಿನಲ್ಲಿ ರಾಜ್ಯಸಭೆಗೆ ಹೋಗಿ ಮಾಡುವುದೇನು ಎಂಬ ಪ್ರಶ್ನೆ ಆ ಪಕ್ಷದಲ್ಲಿ ಮುನ್ನೆಲೆಗೆ ಬಂದಿದೆ. ಅದರ ಬದಲು, ಪಕ್ಷಕ್ಕಾಗಿ ಅನೇಕ ವರ್ಷ ದುಡಿದವರಿಗೆ ಅವಕಾಶ ನೀಡಿದ್ದರೆ ಸಂಘಟನೆಗೆ ಅನುಕೂಲ ವಾಗುತ್ತಿತ್ತು. ಕಳೆದ ಬಾರಿ ಒಂದು ಸ್ಥಾನ ಸಿಕ್ಕಿದಾಗ ಕಾಂಗ್ರೆಸ್ ಹಿನ್ನೆಲೆಯ ಕುಪೇಂದ್ರ ರೆಡ್ಡಿಗೆ ಟಿಕೆಟ್ ಕೊಟ್ಟು ಗೆಲ್ಲಿಸಲಾಗಿತ್ತು. ಈಗ, ಅವರೇ ಕಣಕ್ಕೆ ಇಳಿದಿರುವುದರ ಔಚಿತ್ಯವೇನು ಎಂಬ ಪ್ರಶ್ನೆ ಪಕ್ಷದಲ್ಲಿ ಮುನ್ನೆಲೆಗೆ ಬಂದಿದೆ.


ಮಲ್ಲಿಕಾರ್ಜುನ ಖರ್ಗೆ

ಇತ್ತ ಕಾಂಗ್ರೆಸ್‌ನಿಂದ ಖರ್ಗೆ ಅವರಿಗೆ ಕೊಟ್ಟಿರುವುದಕ್ಕೆ ತೀವ್ರ ವಿರೋಧವಿಲ್ಲ. ಆದರೆ, ರಾಜ್ಯ–ಕೇಂದ್ರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ ಖರ್ಗೆ ಲೋಕಸಭೆ ಚುನಾವಣೆಯಲ್ಲಿ ಸೋತವರು. ಅವರ ಪುತ್ರ ಪ್ರಿಯಾಂಕ್ ಖರ್ಗೆ ಶಾಸಕ. ಸಚಿವರೂ ಆಗಿದ್ದವರು. ದೇಶದ ಮಟ್ಟದಲ್ಲಿ ಪಕ್ಷವನ್ನು ಸಮರ್ಥಿಸಲು ಖರ್ಗೆಯವರಂತಹ ಅನುಭವಿ ಹಾಗೂ ಉತ್ತಮ ಸಂಸದೀಯ ಪಟು ಅಗತ್ಯ ಎಂಬ ಲೆಕ್ಕದಲ್ಲಿ ಸರಿ ಇರಬಹುದು. ದಲಿತರಿಗೆ ಪ್ರಾತಿನಿಧ್ಯ ಕೊಡಬೇಕೆಂದಾದಲ್ಲಿ ಎಡಗೈ ಸಮುದಾಯಕ್ಕೆ ಇಲ್ಲಿಯವರೆಗೂ ಹೆಚ್ಚಿನ ಪ್ರಾತಿನಿಧ್ಯ ಪಕ್ಷದಲ್ಲಿ ಸಿಕ್ಕಿಲ್ಲ. ಈ ಹೊತ್ತಿನಲ್ಲಿ ಅದನ್ನು ಬಳಸಿಕೊಳ್ಳಬೇಕಿತ್ತು. ಕುರುಬ, ಈಡಿಗ ಬಿಟ್ಟು ಇಲ್ಲಿಯವರೆಗೂ ರಾಜಕೀಯ ಪ್ರಾತಿನಿಧ್ಯವೇ ಸಿಗದ ಹಿಂದುಳಿದ ಸಮುದಾಯಕ್ಕೆ ಕೊಟ್ಟಿದ್ದರೆ ಪಕ್ಷದ ವರ್ಚಸ್ಸು ಹೆಚ್ಚುತ್ತಿತ್ತು ಎಂಬ ಚರ್ಚೆ ಬಿರುಸುಗೊಳ್ಳುತ್ತಿದೆ. 

ಅದರ ಜತೆಗೆ, ಲೋಕಸಭೆಯಲ್ಲಿ ಸೋತ ಇಬ್ಬರನ್ನು ರಾಜ್ಯಸಭೆಗೆ ಕಳುಹಿಸುತ್ತಿರುವ ಧೋರಣೆಯ ಬಗ್ಗೆಯೂ ಚರ್ಚೆ ಶುರುವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು