ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಗೆ ದೇವೇಗೌಡ: ಸುಲಭದ ತುತ್ತಲ್ಲ

ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ * ಜೂನ್‌ನಲ್ಲಿ 4 ಸ್ಥಾನಗಳ ತೆರವು
Last Updated 28 ಮೇ 2020, 10:12 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಮ್ಮ ರಾಜಕೀಯ ಜೀವನದ ಕೊನೆಯ ಅವಕಾಶವಾಗಿ ರಾಜ್ಯಸಭೆ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಇಬ್ಬರ ‘ಕೃಪಾಶೀರ್ವಾದ’ ಇಲ್ಲದಿದ್ದರೆ ಅವರ ಪ್ರಯತ್ನ ಹೊಳೆಯಲ್ಲಿ ಹುಣಸೇ ಹಣ್ಣು ಹಿಂಡಿದಂತಾಗುತ್ತದೆ.

ಇದೇ ಜೂನ್‌ನಲ್ಲಿ ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳು ತೆರವಾಗಲಿವೆ. ಬಿಜೆಪಿಯ ಪ್ರಭಾಕರ ಕೋರೆ, ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ರಾಜೀವ್‌ಗೌಡ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರ ಅವಧಿ ಮುಗಿಯಲಿದೆ. ಈ ನಾಲ್ಕರಲ್ಲಿ ಬಿಜೆಪಿ 2 ಮತ್ತು ಕಾಂಗ್ರೆಸ್‌ 1 ಸ್ಥಾನವನ್ನು ಅನಾಯಾಸವಾಗಿ ಗೆಲ್ಲಬಹುದು. 34 ಶಾಸಕರ ಬಲ ಹೊಂದಿರುವ ಜೆಡಿಎಸ್‌ ನಾಲ್ಕನೇ ಸ್ಥಾನವನ್ನು ಸ್ವಂತ ಬಲದಲ್ಲಿ ಗೆಲ್ಲಲು ಸಾಧ್ಯವಿಲ್ಲ.

ದೇವೇಗೌಡರು ರಾಜ್ಯಸಭೆ ಪ್ರವೇಶಿಸಲು ಕಾಂಗ್ರೆಸ್‌ನ ಕೈ ಜೋಡಿಸಲೇಬೇಕಾಗಿದೆ. ಇದಕ್ಕಾಗಿ ಅವರು ನೇರವಾಗಿ ಸೋನಿಯಾಗಾಂಧಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ತನ್ನ 20 ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ಧಾರೆ ಎರೆದರೆ, ಗೌಡರ ಹಾದಿ ಸುಗಮ ಎಂಬುದು ಸಾಮಾನ್ಯ ಲೆಕ್ಕಾಚಾರ. ಒಂದು ವೇಳೆ ಮೂರನೇ ಸ್ಥಾನದ ಮೇಲೆ ಬಿಜೆಪಿ ಕಣ್ಣಿಟ್ಟು ‘ಪ್ರಭಾವಿ’ ವ್ಯಕ್ತಿಯನ್ನು ಕಣಕ್ಕಿಳಿಸಿದರೆ ದೇವೇಗೌಡರ ಲೆಕ್ಕಾಚಾರ ತಲೆಕೆಳಗಾಗಬಹುದು. ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಬಾರದು ಎಂದಾದರೆ ದೇವೇಗೌಡರು ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್‌ ಶಾ ಇಬ್ಬರ ಬೆಂಬಲವನ್ನು ಪಡೆಯುವುದು ಅಗತ್ಯ ಎಂಬುದಾಗಿ ವಿಶ್ಲೇಷಿಸಲಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೆ.ಸಿ.ರಾಮಮೂರ್ತಿ ಗೆಲುವಿಗೆ ಜೆಡಿಎಸ್‌ನ 7 ಶಾಸಕರಿಂದ ಅಡ್ಡ ಮತದಾನ ಮಾಡಿಸಿದ್ದೂ ಇದೆ. ರಾಜ್ಯಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಧಾವಂತದಲ್ಲಿರುವ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚು. ಆ ರೀತಿ ಕಣಕ್ಕಿಳಿಸಿದರೆ ಬಿಜೆಪಿಗೆ ಹೆಚ್ಚುವರಿ 11 ಮತಗಳು ಬೇಕಾಗುತ್ತದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಕಡೆಯಿಂದಲೂ ಶಾಸಕರ ಮತ ಸೆಳೆಯಬಹುದು ಎಂಬ ಲೆಕ್ಕಾಚಾರ ನಡೆದಿದೆ.

ಕೋರೆಗೆ ಕೋಕ್‌ ಸಾಧ್ಯತೆ

ಬಿಜೆಪಿಯಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆಯವರನ್ನು ಇನ್ನೊಂದು ಬಾರಿ ಮುಂದುವರಿಸುವ ಸಾಧ್ಯತೆ ಇಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಒಂದು ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದಿಂದ ಪ್ರೊ.ಎಂ.ನಾಗರಾಜ್‌ ಅವರ ಹೆಸರು ಕೇಳಿ ಬರುತ್ತಿದೆ. ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯಾಗಿರುವ ಇವರನ್ನು ರಾಜ್ಯಸಭೆಗೆ ಕಳಿಸಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದ ಇವರು ಸಂಘ, ಪಕ್ಷ ಮತ್ತು ಸಂಘಟನೆಗಾಗಿ ದುಡಿದಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇನ್ನೊಂದು ಸ್ಥಾನಕ್ಕೆ ದಕ್ಷಿಣ ಕರ್ನಾಟಕ ಭಾಗದಿಂದ ಆಯ್ಕೆ ಮಾಡಬೇಕಾಗಿದೆ. ಇದಕ್ಕೆ ಬಿ.ಎಸ್.ಯಡಿಯೂರಪ್ಪ ಅವರೇ ನಿರ್ಣಾಯಕರಾಗಲಿದ್ದಾರೆ. ಯಾವುದಾದರೂ ಒಂದು ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಘಪರಿವಾರದ ಹಿನ್ನೆಲೆಯವರಿಗೇ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮೂರನೇ ಸ್ಥಾನಕ್ಕೆ ಯಾರಾದರೂ ಉದ್ಯಮಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ನ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವ ಸಾಧ್ಯತೆ ಇದೆ. ಜೆಡಿಎಸ್‌ನಲ್ಲಿ ಸಾಕಷ್ಟು ಶಾಸಕರು ಪಕ್ಷದ ವರಿಷ್ಠರ ಬಗ್ಗೆ ವಿವಿಧ ಕಾರಣಗಳಿಗೆ ಅಸಮಾಧಾನಗೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಒಗ್ಗಟ್ಟು ಕಷ್ಟ. ಇದು ಬಿಜೆಪಿಗೆ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ವರವಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ಕಾಂಗ್ರೆಸ್‌ನಿಂದ ಒಂದು ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್‌ ಹೈಕಮಾಂಡ್‌ ಮೂಲಕ ಮತ್ತೊಮ್ಮೆ ಪ್ರಯತ್ನ ನಡೆಸಲಿದ್ದಾರೆ. ವಿ.ಎಸ್‌.ಉಗ್ರಪ್ಪ ಅವರನ್ನು ಆಯ್ಕೆ ಮಾಡಿ ಕಳಿಸಬೇಕು ಎಂಬ ಬಯಕೆ ಸಿದ್ದರಾಮಯ್ಯ ಅವರದು. ಇದರಿಂದ ಹಳೆ ಕಾಂಗ್ರೆಸ್ಸಿಗರು ಮತ್ತು ವಲಸಿಗರ ಕಾಂಗ್ರೆಸಿಗರು ಎಂಬ ತಿಕ್ಕಾಟಕ್ಕೆ ಕಾರಣವಾಗಲೂ ಬಹುದು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಪಕ್ಷಗಳ ಬಲಾಬಲ

ವಿಧಾನಸಭೆಯ ಒಟ್ಟು ಸ್ಥಾನಗಳು 224

ಸದ್ಯದ ಬಲ 222 (ಆಂಗ್ಲೋ ಇಂಡಿಯನ್‌ ಸೇರಿ 223)

ಬಿಜೆಪಿ–117

ಕಾಂಗ್ರೆಸ್‌–68

ಜೆಡಿಎಸ್‌–34

ಪಕ್ಷೇತರರು–2

ಬಿಎಸ್‌ಪಿ–1

ತೆರವಿರುವ ಸ್ಥಾನಗಳು–2

ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 48 ಶಾಸಕರ ಮತಗಳು ಬೇಕಾಗುತ್ತದೆ. ಜೆಡಿಎಸ್‌ 34 ಸ್ಥಾನಗಳನ್ನು ಹೊಂದಿದ್ದು, 12 ಮತಗಳು ಬೇಕಾಗುತ್ತವೆ. ಕಾಂಗ್ರೆಸ್‌ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ನೀಡಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT