ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾರ್ಯಕರ್ತಗೆ ‘ರಾಜ್ಯೋತ್ಸವ ಗೌರವ’

3 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟ ಗಾಂಧಿ ಅನುಯಾಯಿ
Last Updated 28 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಸರ್ಕಾರ ನೀಡುವ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಇಲ್ಲಿನ ಪರಿಸರ ಕಾರ್ಯಕರ್ತ ಶಿವಾಜಿ ಕಾಗಣಿಕರ ಭಾಜನರಾಗಿದ್ದಾರೆ.

‘ಪರಿಸರ’ ಸಂರಕ್ಷಣೆಗೆ ನೀಡಿದ ಗಣನೀಯ ಕೊಡುಗೆ ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಹೋದ ವರ್ಷ ಡಿ.ದೇವರಾಜ ಅರಸು ಪ್ರಶಸ್ತಿ ಅವರ ಪಾಲಾಗಿತ್ತು.

ಖಾದಿ ಚೆಡ್ಡಿ–ಅಂಗಿ‌, ತಲೆಗೆ ಗಾಂಧಿ ಟೋಪಿ, ಬಗಲಲ್ಲಿ ಬಟ್ಟೆ ಚೀಲ ತೂಗು ಹಾಕಿಕೊಂಡು, ಗ್ರಾಮ ಸ್ವರಾಜ್ಯದ ಕನಸು ತುಂಬಿಕೊಂಡು ಕಾಲ್ಬಲದಿಂದಲೇ ಓಡಾಡುತ್ತಾರೆ. ‘ಹಳ್ಳಿಗರದ್ದೇ ಸರ್ಕಾರ ಆಗಬೇಕು’ ಎನ್ನುತ್ತಾ ಊರೂರು ಸುತ್ತುತ್ತಾರೆ; ಸಂಘಟಿಸುತ್ತಾರೆ. ಅಕ್ಷರಶಃ ಗಾಂಧಿ ಮಾರ್ಗದಲ್ಲಿ ಸಾಗುತ್ತಿದ್ದಾರೆ.

ಇಲ್ಲಿ ಕನ್ನಡ ಶಾಲೆಗಳು ಇಲ್ಲದ ಕಾಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಠಾಠಿಯಲ್ಲಿ ಕಲಿತ ಅವರು, ಕನ್ನಡವನ್ನೂ ಬಲ್ಲರು. ಸಮಾಜಕ್ಕೆಂದೇ ತಮ್ಮನ್ನು ಸಮರ್ಪಿಸಿಕೊಂಡಿರುವ ಅವರದ್ದು ಸರಳ ಹಾಗೂ ಸುಸ್ಥಿರ ಜೀವನ.

ಸಾಮಾಜಿಕ ಸೇವೆಗೆ:

ಬಿ.ಎಸ್ಸಿ. ಕಲಿಕೆ ಮೊಟಕುಗೊಳಿಸಿ ಸಾನೇ ಗುರೂಜಿ, ಜಯಪ್ರಕಾಶ ನಾರಾಯಣ, ವಸಂತ ಪಾಳಸೇಕರ, ಅಣ್ಣಾ ಹಜಾರೆ, ಮೋಹನ ಹೀರಾಬಾಯಿ ಹೀರಾಲಾಲ ಮೊದಲಾದವರ ಸಾಮಾಜಿಕ ಚಳವಳಿ ಮತ್ತು ಚಿಂತನೆಗಳ ಪ್ರಭಾವದಿಂದ ಸೇವೆಗೆ ಮುಂದಾದವರು.

1968–69ರಲ್ಲಿ ಸರ್ವೋದಯ ಗೆಳೆಯರ ಬಳಗ, ಜನ ಜಾಗರಣ ಸಂಸ್ಥೆ ಮೂಲಕ ರಾತ್ರಿ ಶಾಲೆಗಳನ್ನು ಆರಂಭಿಸಿದರು. ಬೇಡ, ಮರಾಠ ಹಾಗೂ ಕುರುಬ ಸಮುದಾಯದವರು ಹೆಚ್ಚಿರುವ ಅರಣ್ಯ ಪ್ರದೇಶದ ಹಳ್ಳಿಗಳಲ್ಲಿ ವಾಸ ಮಾಡಿ, ಬೈಸಿಕಲ್‌ನಲ್ಲಿ ಸುತ್ತಾಡುತ್ತಾ ಶೈಕ್ಷಣಿಕ ಜಾಗೃತಿ ಮೂಡಿಸಿದವರು. ಗ್ರಾಮೀಣ ಮಹಿಳೆಯರಿಗೆ ರಾತ್ರಿ ಶಾಲೆಗಳನ್ನು ಸತತ 10 ವರ್ಷಗಳವರೆಗೆ ನಡೆಸಿದರು. ‘ವಿಚಾರದ ದೀಪ’ ಪ್ರಜ್ವಲಿಸಿದವರು.

ಅಡುಗೆಗೆ ಕಟ್ಟಿಗೆಗಳನ್ನು ಬಳಸುತ್ತಿದ್ದುದು ಕಾಡು ನಾಶಕ್ಕೆ ಕಾರಣವಾಗುತ್ತಿತ್ತು. ಅಲ್ಲದೇ, ಮಹಿಳೆಯರು ವಿವಿಧ ಕಾಯಿಲೆಗಳಿಗೆ ಒಳಗಾಗುತ್ತಿದ್ದರು. ಇದನ್ನು ಅರಿತ ಶಿವಾಜಿ, ಹೊಗೆಮುಕ್ತ ಅಡುಗೆಯತ್ತ ಜಾಗೃತಿಗೆ ಮುಂದಾದರು. ಹೊಗೆರಹಿತ ಒಲೆಗೆ ಗೋಬರ್ ಗ್ಯಾಸ್ ಉತ್ತಮ ಪರಿಹಾರವೆಂದು ಅರಿತು ಸಮಾಜಕ್ಕೆ ತಿಳಿಸಿದವರು. ಎನ್‌ಜಿಒ ಜೊತೆ ಒಡಬಂಡಿಕೆ ಮಾಡಿಕೊಂಡು ‘ದೀನಬಂಧು’ ಎಂಬ ಸರಳ ಗೋಬರ್ ಘಟಕಗಳನ್ನು 14 ಸಾವಿರಕ್ಕೂ ಹೆಚ್ಚಿನ ಜನರಿಗೆ ತಲುಪಿಸಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ.

ಸಸಿಗಳ ಪೋಷಣೆ:ಜನಧನ ಸಂಸ್ಥೆ ಹಾಗೂ ಗ್ರೀನ್ ಸೇವಿಯರ್ಸ್‌ ಸಹಯೋಗದಲ್ಲಿ ಕೆರೆಗಳ ಸುತ್ತ ಹಾಗೂ ಒಡ್ಡುಗಳ ಮೇಲೆ ಸಸಿಗಳನ್ನು ನೆಡುವ, ಪೋಷಿಸುವ ಕೆಲಸ ಮಾಡಿದ್ದಾರೆ. ಅರಣ್ಯ, ರೈತರ ಜಮೀನು ಹಾಗೂ ಖಾಲಿ ಜಾಗಗಳಲ್ಲಿ 3 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಕಾರ್ಮಿಕರ ಚಳವಳಿಯನ್ನಾಗಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಕೂಲಿಕಾರರು, ಗ್ರಾಮೀಣರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುತ್ತಿರುವವರಲ್ಲಿ ಪ್ರಮುಖರು. ಸಾವಯವ ಕೃಷಿ ಮಹತ್ವವನ್ನೂ ಸಾರುತ್ತಿದ್ದಾರೆ. 2009–10ರಲ್ಲಿ ಜೀವನ ಶಿಕ್ಷಣ ಪ್ರತಿಷ್ಠಾನ ಸಂಸ್ಥೆ ಸ್ಥಾಪಿಸಿ ರೈತರು ಹಾಗೂ ಕೂಲಿಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 14 ಶಿಕ್ಷಣ ಪಾಲನಾ ಕೇಂದ್ರಗಳನ್ನು ನಡೆಸಿದ್ದರು. ಅವರ ನೇತೃತ್ವದಲ್ಲಿ ಕಟ್ಟಣಬಾವಿ, ಬೋರಾಮಟ್ಟಿ ಹಾಗೂ ಕಾಕತಿ ಮೊದಲಾದ ಕಡೆಗಳಲ್ಲಿ ಹೊಸದಾಗಿ ಕರೆ ಅಭಿವೃದ್ಧಿಪಡಿದ್ದಾರೆ. ವಿವಿಧೆಡೆ 12 ಕೆರೆಗಳ ಹೂಳೆತ್ತುವಲ್ಲಿ ಕೈಜೋಡಿಸಿದ್ದಾರೆ.

ತಿರುಗಾಟ ಅವರಿಗೆ ಅಚ್ಚುಮೆಚ್ಚು. ದೂರದ ಊರಿಗೆ ಬಸ್ಸಿನಲ್ಲೇ ಹೋಗುತ್ತಾರೆ. ಮೊಬೈಲ್‌ ಫೋನ್‌ ಬಳಸುವುದಿಲ್ಲ.

‘ಪರಿಸರ ಸಂರಕ್ಷಕ, ಕೆರೆಗಳನ್ನು ಕಾಪಾಡಿದ ಮತ್ತು ಪ್ರಚಾರವನ್ನೇ ಬಯಸದ ಕಾಗಣಿಕರ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಉತ್ತಮವಾಗಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT