ಪಾಕ್‌ ಪರ ಪೋಸ್ಟ್‌; ರಾಮದುರ್ಗ ಪ್ರಕ್ಷುಬ್ಧ

ಬುಧವಾರ, ಮಾರ್ಚ್ 20, 2019
27 °C
ಕಲ್ಲು ತೂರಾಟ, ಬೃಹತ್‌ ಪ್ರತಿಭಟನೆ;

ಪಾಕ್‌ ಪರ ಪೋಸ್ಟ್‌; ರಾಮದುರ್ಗ ಪ್ರಕ್ಷುಬ್ಧ

Published:
Updated:
Prajavani

ಬೆಳಗಾವಿ: ಪಾಕಿಸ್ತಾನದ ಪರ ಘೋಷಣೆಗಳನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಕಾರ್ಯಕರ್ತನನ್ನು ಬಂಧಿಸಬೇಕೆಂದು ಒತ್ತಾಯಿಸಿ ರಾಮದುರ್ಗದಲ್ಲಿ ಶನಿವಾರ ವಿವಿಧ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದವು.

ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಚಮನಶಾವಲಿ ದರ್ಗಾ ಬಳಿ ಕಟ್ಟಿದ್ದ ಧ್ವಜವನ್ನು ಕಿತ್ತೆಸೆದರು. ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದರು. ಸದ್ಯಕ್ಕೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಪ್ರತಿಭಟನೆಯಲ್ಲಿ ಬಿಜೆಪಿ, ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಹಾಗೂ ಶ್ರೀರಾಮ ಸೇನೆ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಶಾಸಕ, ಬಿಜೆಪಿಯ ಮಹಾದೇವಪ್ಪ ಯಾದವಾಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜಿ.ಜಿ. ಪಾಟೀಲ, ಬಜರಂಗ ದಳದ ತಾಲ್ಲೂಕು ಘಟಕದ ಸಂಚಾಲಕ ಚಂದ್ರಕಾಂತ ಹೊಸಮನಿ ಭಾಗವಹಿಸಿದ್ದರು.

ಮಾಜಿ ಶಾಸಕ ಪಟ್ಟಣ ಬೆಂಬಲಿಗ: ಕಾಂಗ್ರೆಸ್‌ ಕಾರ್ಯಕರ್ತ ಮಹಮ್ಮದ ಶಫಿ ಬೆಣ್ಣಿ ಅವರ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಪೋಸ್ಟ್‌ ಮಾಡಲಾಗಿದೆ. ಇವರು ಮಾಜಿ ಶಾಸಕ ಅಶೋಕ ಪಟ್ಟಣ ಅವರ ಕಟ್ಟಾ ಬೆಂಬಲಿಗ ಎನ್ನಲಾಗುತ್ತಿದೆ. ಇವರನ್ನು ಬಂಧಿಸಬೇಕೆಂದು ತಾಲ್ಲೂಕು ಬಿಜೆಪಿ ಘಟಕದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಂಗನಾಥ ಹೂಗಾರ ಶುಕ್ರವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರತಿದೂರು: ‘ಈ ಪೋಸ್ಟ್‌ಗಳನ್ನು ನಾನು ಹಾಕಿಲ್ಲ. ನನ್ನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಮಾಡಲಾಗಿದೆ’ ಎಂದು ಮಹಮ್ಮದ ಅವರು ಪೊಲೀಸರಿಗೆ ಪ್ರತಿದೂರು ಸಲ್ಲಿಸಿದ್ದಾರೆ.

ಕಲ್ಲು ತೂರಾಟ: ಮಹಮ್ಮದ ಅವರು ಪ್ರತಿದೂರು ಸಲ್ಲಿಸಿ ಠಾಣೆಯಿಂದ ಹೊರಬರುತ್ತಿದ್ದಂತೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು. ತಕ್ಷಣ ಧಾವಿಸಿ ಬಂದ ಪೊಲೀಸರು, ಉದ್ರಿಕ್ತ ಜನರನ್ನು ಚದುರಿಸಿದರು. ಕಲ್ಲು ತೂರಾಟದ ವೇಳೆ ಸಿದ್ಧಲಿಂಗೇಶ್ವರ ಸಿದ್ಧಿಬಾವಿ ಎಂಬುವರಿಗೆ ಗಾಯವಾಗಿದೆ.

ಸೈಬರ್‌ ಪೊಲೀಸರಿಂದ ತನಿಖೆ: ‘ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಮ್ಮದ ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಸೈಬರ್‌ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಫೋಟೊಗಳು ಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !