ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಏಕೆ: ರಾಮಲಿಂಗಾ ರೆಡ್ಡಿ

Last Updated 23 ಡಿಸೆಂಬರ್ 2018, 17:46 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿರಿಯರು ಎಂಬ ಕಾರಣಕ್ಕೆ ಸಂಪುಟದಿಂದ ನನ್ನನ್ನು ಹೊರಗಿಡಲಾಗಿದೆ. ಆದರೆ, ಆರ್‌.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್ ಹಿರಿಯರಲ್ಲವೇ. ಒಂದಕ್ಕಿಂತ ಹೆಚ್ಚು ಬಾರಿ ಅವರೂ ಸಚಿವರಾಗಿದ್ದಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಏಕೆ’ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಅವರು, ‘ನನ್ನ ಮಗಳು (ಸೌಮ್ಯಾ ರೆಡ್ಡಿ) ಸಂಸದೀಯ ಕಾರ್ಯದರ್ಶಿ ಸ್ಥಾನ ತಿರಸ್ಕರಿಸಿದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ, ಮಗಳಿಗೆ ಸ್ಥಾನ ಕೊಡಿಸಿದರು ಎಂದು ನಮ್ಮ ಪಕ್ಷದವರೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದರು’ ಎಂದರು.

‘ಮೊದಲಿನಿಂದಲೂ ಪಕ್ಷ ಸಂಘಟನೆ ಮಾಡಿದ್ದೇನೆ. ಮಗು ಅಳದೆ ಇದ್ದರೂ ಹಾಲು ಕುಡಿಸಬೇಕಾದುದು ತಾಯಿಯ ಕರ್ತವ್ಯ. ಪಕ್ಷದ ವರಿಷ್ಠರು ಸೌಜನ್ಯಕ್ಕಾದರೂ ನಮ್ಮನ್ನು ಕರೆದು ಮಾತನಾಡಿಸಬೇಕಾಗಿತ್ತು’ ಎಂದರು.

ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ರೆಡ್ಡಿ, ‘ಸರ್ಕಾರದ ಜವಾಬ್ದಾರಿ ಹೊತ್ತವರು ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದರು.

‘ಸಂಪುಟ ಪುನಾರಚನೆ ಬಳಿಕ ನಮ್ಮ ಪಕ್ಷದವರೇ ನನ್ನನ್ನು ಮಾತನಾಡಿಸಿಲ್ಲ. ಇನ್ನು ಬೇರೆ ಪಕ್ಷದವರು ಮಾತನಾಡಿಸುತ್ತಾರಾ. ನಾನು ಕಟ್ಟಾ ಕಾಂಗ್ರೆಸ್ಸಿಗ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿಲ್ಲ: ‘ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಬಿಟ್ಟರೆ ಪಕ್ಷದಿಂದ ಒಕ್ಕಲಿಗ ಸಮುದಾಯದ ಸಚಿವರು ಸಂಪುಟದಲ್ಲಿ ಬೇರೆ ಯಾರೂ ಇಲ್ಲ. ಪುನಾರಚನೆ ಸಂದರ್ಭದಲ್ಲಿ ಒಂದು ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕಿತ್ತು. ಆದರೆ, ಈ ವಿಷಯದಲ್ಲಿ ಶಿವಕುಮಾರ್‌ ಮೌನ ವಹಿಸಿದ್ದಾರೆ’ ಎಂದು ಡಾ.ಕೆ. ಸುಧಾಕರ್ ಹೇಳಿದರು.

ಸುಧಾಕರ್ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ತೃಪ್ತಿಪಡಿಸಲಾಗಿದೆ.

‘ಪಕ್ಷದಲ್ಲಿ ಹೆಚ್ಚು ಸಂಖ್ಯೆಯ ಒಕ್ಕಲಿಗ ಶಾಸಕರಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ. ಸಮುದಾಯದ ಎಲ್ಲ ಶಾಸಕರು ಸೇರಿ ಈ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದರು.

‘ಒಂದು ಜಿಲ್ಲೆಗೇ (ವಿಜಯಪುರ) ಮೂರು ಸಚಿವ ಸ್ಥಾನ ನೀಡಲಾಗಿದೆ. ಪುನಾರಚನೆ ವೇಳೆ ಸಮತೋಲನ ಕಾಪಾಡಿಲ್ಲ. ವಿಜಯಪುರಕ್ಕೆ ಕೊಡುವ ಬದಲು ಹಾವೇರಿ, ದಾವಣಗೆರೆಗೆ ಜಿಲ್ಲೆಗೆ ಒಂದು ಸ್ಥಾನ ಕೊಡಬಹುದಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT