ರಾಮನಗರ, ಜಮಖಂಡಿ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ

7
ದೇವೇಗೌಡರೊಂದಿಗೆ ವೇಣುಗೋಪಾಲ್‌ ಚರ್ಚೆ

ರಾಮನಗರ, ಜಮಖಂಡಿ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ

Published:
Updated:
Deccan Herald

ನವದೆಹಲಿ: ರಾಮನಗರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಗುರುವಾರ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದು, ಒಂದೊಮ್ಮೆ ಉಪ ಚುನಾವಣೆ ಘೋಷಣೆಯಾದಲ್ಲಿ ಸಚಿವ ಸಂಪುಟ ವಿಸ್ತರಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಸಂಪುಟ ವಿಸ್ತರಣೆ ಮಾಡಿದರೆ ಕೆಲವು ಆಕಾಂಕ್ಷಿಗಳಿಗೆ ಅಸಮಾಧಾನ ಆಗುವುದು ಸಹಜ. ಉಪ ಚುನಾವಣೆ ಫಲಿತಾಂಶದ ಮೇಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಕ್ರಿಯೆಯನ್ನು ಸದ್ಯದ ಮಟ್ಟಿಗೆ ಮುಂದೂಡುವುದು ಒಳಿತು ಎಂಬ ಅಭಿಪ್ರಾಯಕ್ಕೆ ಉಭಯ ಮುಖಂಡರೂ ಬಂದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಉಪ ಚುನಾವಣೆ ಬಳಿಕವೇ ಸಂಪುಟ ವಿಸ್ತರಣೆ ಮತ್ತು ನಿಗಮ, ಮಂಡಳಿಗಳ ನೇಮಕಕ್ಕೆ ಒಲವು ಹೊಂದಿದ್ದಾಗಿ ವೇಣುಗೋಪಾಲ್‌ ಅವರು ಚರ್ಚೆ ವೇಳೆ ತಿಳಿಸಿದರು. ಇದಕ್ಕೆ ದೇವೇಗೌಡರು ಸಮ್ಮತಿ ಸೂಚಿಸಿದರು ಎಂದು ತಿಳಿದುಬಂದಿದೆ.

ಮಹಾಮೈತ್ರಿಗೆ ಅಡ್ಡಿಯಾಗದು: ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಗೆ ಮುಂದಾಗದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ನಡೆಯು ರಾಷ್ಟ್ರಮಟ್ಟದ ಮಹಾಮೈತ್ರಿಗೆ ಅಡ್ಡಿಯಾಗದು ಎಂದು ದೇವೇಗೌಡ ಹೇಳಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಬೇಕು ಎಂಬುದು ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳದ್ದಾಗಿದೆ. ಈ ಕಾರಣದಿಂದಲೇ ಮಹಾಮೈತ್ರಿಗೆ ಆದ್ಯತೆ ದೊರೆತಿದೆ. ಆಯಾ ರಾಜ್ಯಗಳ ಸ್ಥಿತಿಗತಿ ಅರಿತು ಮೈತ್ರಿಗೆ ಮುಂದಾಗುವ ಸಾಧ್ಯತೆಗಳೇ ಹೆಚ್ಚಿದ್ದು, ಕಾಲವೇ ಇದಕ್ಕೆ ಉತ್ತರ ನೀಡಲಿದೆ ಎಂದರು.

**

ಕರ್ನಾಟಕ ಸರ್ಕಾರದ ಮಾದರಿಯನ್ನೇ ಅನುಸರಿಸಿರುವ ಕೇಂದ್ರ ಸರ್ಕಾರ ಪ್ರತಿ ಲೀಟರ್‌ಗೆ ₹ 2.50 ಕಡಿಮೆ ಮಾಡಿದೆ. ಕರ್ನಾಟಕ ಸರ್ಕಾರ ಮತ್ತೆ ದರ ಇಳಿಸುವ ಗೋಜಿಗೆ ಹೋಗುವುದಿಲ್ಲ
- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !