ಸೋಮವಾರ, ಜೂಲೈ 6, 2020
27 °C

ಐಎಎಸ್ ಅಧಿಕಾರಿ ಮಣಿವಣ್ಣನ್ ಅವರಿಂದ ಕೆಟ್ಟ ಪರಂಪರೆ: ರಮೇಶ್ ಬಾಬು ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ವರ್ಗಾವಣೆ ರಾಜ್ಯದಲ್ಲಿ ಸದ್ದು ಮಾಡಿದೆ. ಯಾವುದೇ ಅಧಿಕಾರಿ ಸರ್ಕಾರ ನೀಡುವ ಇಲಾಖೆಯಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು. ಇದ್ದ ಸೀಮಿತ ಸಮಯದಲ್ಲಿ ಮಾನವೀಯತೆಗೆ ಆದ್ಯತೆ ನೀಡಬೇಕಿದ್ದ ಇಲಾಖೆಯನ್ನು ವ್ಯಾಪಾರಕ್ಕೆ ಒಳಪಡಿಸಿ ಗೊಂದಲ ನಿರ್ಮಿಸಿ ಬಿಜೆಪಿ ಪಕ್ಷ ರಾಜಕಾರಣಕ್ಕೆ ಅವಕಾಶ ನೀಡಿ ಈಗ ಫಲಾನುಭವಿಗಳ ಮೂಲಕ ಅನುಕಂಪದ ಹೇಳಿಕೆ ಕೊಡಿಸುತ್ತಿರುವ ಮಣಿವಣ್ಣನ್ ರಾಜ್ಯದಲ್ಲಿ ಕೆಟ್ಟ ಪರಂಪರೆಗೆ ಇಂಬು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಅವರು, 'ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಪಾರದರ್ಶಕ ಕಾಯಿದೆಯಿಂದ ವಿನಾಯತಿ ಪಡೆದುಕೊಂಡು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಜನಸಾಮಾನ್ಯರ ಜೀವ ಇಂದಿನ ಆದ್ಯತೆ. ಆದ್ದರಿಂದ ಎಲ್ಲರೂ ಅನುಮಾನ ಇಲ್ಲದೆ ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯಕ್ಕೆ ಬೆಂಬಲ ನೀಡಿದರು. ಕೊರೊನಾ ಅವಧಿಯಲ್ಲಿ ಕಾರ್ಮಿಕ ಇಲಾಖೆ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದೆ. ಈ ವೆಚ್ಚದಲ್ಲಿ ಎಷ್ಟು ಕಾರ್ಮಿಕರಿಗೆ ಯಾವ ರೀತಿ ಸಹಾಯವಾಗಿದೆ ಎಂಬುದನ್ನು ಸರ್ಕಾರವೇ ಜನರಿಗೆ ಹೇಳಬೇಕು' ಎಂದು ತಿಳಿಸಿದ್ದಾರೆ.

'ಮಣಿವಣ್ಣನ್ ಅವಧಿಯಲ್ಲಿ ಕಾರ್ಮಿಕ ಇಲಾಖೆ ಎಷ್ಟು ಹಣ ಯಾವ ಯಾವ ಬಾಬಿಗೆ ಖರ್ಚು ಮಾಡಿದೆ ಎಂಬುದನ್ನು ಅಂಕಿಅಂಶ ಸಮೇತ ಬಹಿರಂಗ ಪಡಿಸಲಿ. ಅದೇ ಸಮಯದಲ್ಲಿ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುವ ಕಾರ್ಖಾನೆ ಮಾಲೀಕರು ಕಾನೂನು ಉಲ್ಲಂಘನೆ ಮಾಡಿರುವ ಪ್ರಕರಣಗಳ ವಿವರವನ್ನು ನೀಡಲಿ. ಯಾರನ್ನೋ ಗುರಾಣಿ ಮಾಡಿಕೊಂಡು ತಪ್ಪು ಮಾಡಿ ತಪ್ಪಿಸಿಕೊಳ್ಳುವುದು ಬೇಡ. ಕೊರೊನಾ ಹೆಸರಿನಲ್ಲಿ ಹಣ ಮಾಡುವ ಯಾರನ್ನೇ ಆಗಲಿ ರಕ್ಷಣೆ ಮಾಡದೇ ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಲಿ' ಎಂದು ಸಲಹೆ ನೀಡಿದ್ದಾರೆ.

'ತಾಂತ್ರಿಕ, ಕೌಶಲ ತರಬೇತಿ ಪಡೆದ ಲಕ್ಷಾಂತರ ಯುವಕರು ಕೊರೊನಾ ಕಾರಣ ಉದ್ಯೋಗ ವಂಚಿತರಾಗಿದ್ದಾರೆ. ರಾಜ್ಯ ಸರಕಾರ ಪ್ಯಾಕೇಜ್ ಮೂಲಕ ನಿರುದ್ಯೋಗಿ ಯುವಕರಿಗೆ ಭತ್ಯೆ ಮತ್ತು ತಾತ್ಕಾಲಿಕ ಉದ್ಯೋಗ ನೀಡಲು ಯೋಜನೆ ಜಾರಿಗೆ ತರಲಿ. ಕಾರ್ಮಿಕ ಇಲಾಖೆ ಆದ್ಯತೆಯ ಮೇಲೆ ಇಂತಹ ಯುವಕರಿಗೆ ಆರ್ಥಿಕ ನೆರವು ನೀಡಿ ಯೋಜನೆ ರೂಪಿಸಬೇಕು. ಮಣಿವಣ್ಣನ್ ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯದ ಕಾರ್ಮಿಕರಿಗೆ, ಕೌಶಲಾಭಿವೃದ್ಧಿ ಯುವಕರಿಗೆ, ಮಹಿಳಾ ಕಾರ್ಮಿಕರಿಗೆ ಪೂರಕವಾಗುವ ಒಂದೇ ಒಂದು ಯೋಜನೆ ಜಾರಿಗೆ ತರಲಿಲ್ಲ. ಕಾರ್ಮಿಕ ಮಂಡಳಿಗಳ ಔಪಚಾರಿಕ ಸಭೆಗಳನ್ನೂ ನಡೆಸಲಿಲ್ಲ. ರಾಜ್ಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಯಾವುದೇ ಚಿಂತನೆ, ಚರ್ಚೆ, ಪ್ರಯತ್ನ ಆಗಲೇ ಇಲ್ಲ' ಎಂದು ಹೇಳಿದ್ದಾರೆ.

'ಕಾರ್ಮಿಕ ಇಲಾಖೆಯಲ್ಲಿ ಮಣಿವಣ್ಣನ್ರವರು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅವಧಿಯ ಸೆಸ್ ಸಂಗ್ರಹ ಮತ್ತು ವೆಚ್ಚ ಮಾಡಿರುವ ಹಣದ ವಿವರ ಶ್ವೇತ ಪತ್ರದ ಮೂಲಕ ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ. ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳಬೇಕಿದ್ದು ಕಷ್ಟದ ಸಮಯದಲ್ಲಿ ಹಣ ಪೋಲಾಗದಂತೆ ತಡೆಯಬೇಕಿದೆ. ತೆರಿಗೆ ಹಣದ ರಕ್ಷಣೆ ಜೊತೆಗೆ ಅಕ್ರಮ ತಡೆಯುವ ಜವಾಬ್ದಾರಿ ಸರ್ಕಾರದ ಕೆಲಸ. ಅವಶ್ಯಕತೆ ಬಂದರೆ ಶ್ವೇತ ಪತ್ರದ ಜೊತೆಗೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಲೆ ಬಂದಿರುವ ಅಕ್ರಮ ಆರೋಪದ ಮೇಲೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ಕೋರುತ್ತೇನೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು