ಭಾನುವಾರ, ಅಕ್ಟೋಬರ್ 20, 2019
27 °C

ಆತ್ಮಹತ್ಯೆಗೆ ಶರಣಾದ ರಮೇಶ್: ಹುಟ್ಟೂರಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ

Published:
Updated:

ರಾಮನಗರ: ಶನಿವಾರ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ರಮೇಶ್ (36)  ಅವರ ಅಂತ್ಯ ಸಂಸ್ಕಾರ ಹುಟ್ಟೂರಾದ ಮೆಳೇಹಳ್ಳಿ ಗ್ರಾಮದಲ್ಲಿ ನಡೆಯಲಿದೆ. 

ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಬಳಿ ಕಳೆದ ಎಂಟು ವರ್ಷಗಳಿಂದ ಆಪ್ತ ಸಹಾಯಕರಾಗಿದ್ದ ರಮೇಶ್ ಅವರು ಶಾಸಕರ ಬಲಗೈ ಬಂಟನಂತೆ ಇದ್ದರು.

ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಉಪ ಮುಖ್ಯಮಂತ್ರಿಗಳ ಸಹಾಯಕರಾಗಿ ದುಡಿದ ಅನುಭವ ಗಳಿಸಿದ ಅವರು ಗ್ರಾಮಕ್ಕೆ ವಾರಕ್ಕೆ ಒಮ್ಮೆ ಬಂದು ಹೋಗುತ್ತಿದ್ದರು. ಪತ್ನಿ ಸೌಮ್ಯಾ ಹಾಗೂ ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲೇ ವಾಸವಿದ್ದರು. ತಂದೆ ಸಂಪಂಗಯ್ಯ, ತಾಯಿ ಸಾವಿತ್ರಮ್ಮ ಊರಿನಲ್ಲೇ ಇದ್ದರು. ರಮೇಶ್  ಸಹೋದರ ಸತೀಶ್ ಶಾಸಕ ಸತೀಶ್ ಜಾರಕಿಹೊಳಿ ಬಳಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ದಶಕದ ಹಿಂದೆ ವಿಧಾನಸೌಧದ ಬಳಿ ಟೈಪಿಂಗ್ ಅಂಗಡಿ ತೆರೆದು ಜೀವನ ಮಾಡುತ್ತಿದ್ದ ರಮೇಶ್ ಮುಂದೆ ಕೆಪಿಸಿಸಿ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಸೇರಿದ್ದರು. ಅಲ್ಲಿ ಪರಮೇಶ್ವರ್ ಸಖ್ಯ ಬೆಳೆದು ಅವರಿಗೆ ಆಪ್ತ ಸಹಾಯಕರೂ ಆದರು.

ಚನ್ನಪಟ್ಟಣದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಿಸಿದ್ದ ರಮೇಶ್ ಈಚೆಗೆ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಖರೀದಿ‌ ಮಾಡಿದ್ದರು. ಇದಲ್ಲದೆ ಒಂದೆರಡು ನಿವೇಶನ ಸಹ ಖರೀದಿ‌ ಮಾಡಿದ್ದರು ಎನ್ನಲಾಗಿದೆ. 

ರಮೇಶ್ ನಿಧನದ ಸುದ್ದಿ ತಿಳಿಯುತ್ತಲೇ ಅವರ ನಿವಾಸದ ಎದುರು ಜನರು ಗುಂಪಾಗಿ ನೆರೆದು ಕಣ್ಣೀರಿಟ್ಟರು. ಸಂಬಂಧಿಕರೊಬ್ಬರ ತಿಥಿ ಕಾರ್ಯಕ್ಕೆಂದು ತೆರಳಿದ್ದ ಪೋಷಕರಿಗೆ ಮಗನ ಸುದ್ದಿ ತಿಳಿದು ಆಘಾತವೇ ಆಗಿತ್ತು. ತಂದೆ ಸಂಪಂಗಯ್ಯ ಸುದ್ದಿ ತಿಳಿದು ಮನೆಯಲ್ಲೇ ಕುಸಿದು ಬಿದ್ದಿದ್ದು, ಅಲ್ಲಿಯೇ ಆರೈಕೆ ಮಾಡಲಾಯಿತು. ಐ.ಟಿ. ಅಧಿಕಾರಿಗಳ ಭೀತಿಯಿಂದಲೇ ಗೆಳೆಯ ಆತ್ಯಹತ್ಯೆ ಹಾದಿ‌ ಹಿಡಿದ ಎಂದು ಅವರ ಸ್ನೇಹಿತರು ಅಳಲು ತೋಡಿಕೊಂಡರು. ಮೇಳೆಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದರು.

Post Comments (+)