ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಜಾರಕಿಹೊಳಿ ನನ್ನ ಶಿಷ್ಯನೂ ಅಲ್ಲ, ನಾನು ಗುರುನೂ ಅಲ್ಲ: ಸಿದ್ದರಾಮಯ್ಯ

ವಿಧಾನಸಭೆ ವಿರೋಧಪಕ್ಷದ ನಾಯಕ
Last Updated 11 ನವೆಂಬರ್ 2019, 14:50 IST
ಅಕ್ಷರ ಗಾತ್ರ

ಬೆಳಗಾವಿ: ‘ಅನರ್ಹ ಶಾಸಕ ರಮೇಶ ಜಾರಕಿಹೊಳಿ ನನ್ನ ಶಿಷ್ಯನಲ್ಲ; ನಾನು ಗುರುವೂ ಅಲ್ಲ. ಅವರು ಕಾಂಗ್ರೆಸ್‌ನಲ್ಲಿದ್ದರಷ್ಟೇ’ ಎಂದುವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ರಮೇಶ ಹೇಳಿಕೆಗೆ ಇಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಅವನೇನು ಹಾಲು ಕುಡಿಯುವ ಮಗುವೇ, ನಾನು ಹೋಗಬೇಡ ಎಂದು ಹೇಳಿದ ಮೇಲೂ ಮತ್ತೇಕೆ ಬಿಟ್ಟು ಹೋದರು’ ಎಂದು ಪ್ರಶ್ನಿಸಿದರು.

‘ರಾಜಕಾರಣ ಹಾಳಗುತ್ತಿರುವುದೇ ದೃಶ್ಯ ಮಾಧ್ಯಮದಿಂದ. ಬಿಜೆಪಿಯವರು ಹೇಳಿದರೆಂದು ನನ್ನ ವಿರುದ್ಧ ನೀವು (ದೃಶ್ಯಮಾಧ್ಯಮದವರು) ಪ್ರಚಾರ ಮಾಡುತ್ತೀರಲ್ಲಾ ಅದರಿಂದ ನೋವಾಗಿದೆ’ ಎಂದರು.

ಬಿಜೆಪಿಗೆ ಕುದುರೆ ವ್ಯಾಪಾರದ್ದೇ ಕೆಲಸ:

‘ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದವು. ಈಗ ಅವುಗಳ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಬಹುಮತ ಇಲ್ಲದಿರುವುದರಿಂದ ಸರ್ಕಾರ ರಚಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ. ಹೀಗಾಗಿ, ರಾಜ್ಯಪಾಲರು 2ನೇ ಅತಿ ದೊಡ್ಡ ಪಕ್ಷವಾದ ಶಿವಸೇನೆಯನ್ನು ಕರೆದಿದ್ದಾರೆ. ಎನ್‌ಸಿಪಿ ಮತ್ತು ಶಿವಸೇನೆಯು ಕಾಂಗ್ರೆಸ್‌ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿವೆ. ಬಿಜೆಪಿಯವರು ಶಿವಸೇನೆ ಶಾಸಕರನ್ನೇ ಕೊಂಡುಕೊಳ್ಳಲು ಶುರು ಮಾಡಿದರು.ಅವರು ಹೆದರಿ ಶಾಸಕರನ್ನು ಹೋಟೆಲ್‌ನಲ್ಲಿ ಇರಿಸಿದ್ದರು. ಬಿಜೆಪಿಯವರು ಆಪರೇಷನ್‌ ಕಮಲ, ಕುದುರೆ ವ್ಯಾಪಾರ ಆರಂಭಿಸಿದ್ದೇ ಅಲ್ಲಿನ ಈ ಬೆಳವಣಿಗೆಗೆ ಕಾರಣ’ ಎಂದು ಹೇಳಿದರು.

‘ಎಲ್ಲ ಕಡೆಯೂ ಬಿಜೆಪಿಯವರದು ಆಪರೇಷನ್‌ ಕಮಲದ್ದೇ ಕೆಲಸ. ಹಣ ಕೊಡುವುದು ಶಾಸಕರನ್ನು ಖರೀದಿಸುವುದು. ಈ ನೀಚ ಕೆಲಸದಿಂದ ಬಿಜೆಪಿಯವರು ಪ್ರಜಾಪ್ರಭುತ್ವ ಹಾಳು ಮಾಡುತ್ತಿದ್ದಾರೆ. ಹೀಗಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಅಯಾರಾಂ ಗಯಾರಾಂ ನಿಲ್ಲಬೇಕೆಂದು ತರಲಾದ ಕಾನೂನನ್ನೇ ಅವರು ವಿಫಲಗೊಳಿಸಲು ಹೊರಟಿದ್ದಾರೆ. ಸುಳ್ಳನ್ನು ನಿಜ ಮಾಡಲು, ನಿಜವನ್ನು ಸುಳ್ಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ಯಾಸಿಸ್ಟ್‌ಗಳು’ ಎಂದು ಟೀಕಿಸಿದರು.

‘ಯಡಿಯೂರಪ್ಪ ತಾನೇ ಮಾತಾಡಿದ್ದನ್ನೇ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಒಮ್ಮೆ ಮಾತಾಡಿದ್ದೇನೆ ಎಂದರೆ, ಇನ್ನೊಮ್ಮೆ ಇಲ್ಲ ಎನ್ನುತ್ತಾರೆ’ ಎಂದು ಕುಟುಕಿದರು.

‘ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಷಯ ಚರ್ಚಿಸುವಾಗ ಬಚ್ಚೇಗೌಡ ಇದ್ದರು. ಅವರ ಎದುರೇ ಒಪ್ಪಂದವಾಯಿತು. ಹೀಗಾಗಿ, ರಾಜೀನಾಮೆ ಕೊಟ್ಟಿದ್ದೇನೆ’ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್‌ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿಲ್ಲ ಎಂದು ವಾದಿಸುತ್ತಿದ್ದುದು ಸುಳ್ಳಾಯಿತಲ್ಲವೇ? ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಕೆಲಸ ಮಾಡುವುದೇ ಕಸುಬಾಗಿದೆ. ಸುಳ್ಳು ಹೇಳುವುದಕ್ಕೆ ಮಿತಿ ಇಲ್ಲವೇ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT