ಜಾರಕಿಹೊಳಿ ನಮ್ಮೊಂದಿಗೇ ಇದ್ದಾರೆ: ಸಿಎಂ ಕುಮಾರಸ್ವಾಮಿ ಹೇಳಿಕೆ

7

ಜಾರಕಿಹೊಳಿ ನಮ್ಮೊಂದಿಗೇ ಇದ್ದಾರೆ: ಸಿಎಂ ಕುಮಾರಸ್ವಾಮಿ ಹೇಳಿಕೆ

Published:
Updated:

ಬೆಳಗಾವಿ: ‘ನಮ್ಮ ಸರ್ಕಾರ ಸುಭದ್ರವಾಗಿದೆ. ಸಚಿವ ರಮೇಶ ಜಾರಕಿಹೊಳಿ ಎಲ್ಲೂ ಹೋಗಿಲ್ಲ. ನನ್ನ ಜೊತೆಗಿದ್ದಾರೆ. ಈ ವಿಷಯದಲ್ಲಿ ಯಾವ ಅನುಮಾನವೂ ಬೇಡ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇಲ್ಲಿ ಶನಿವಾರ ಹೇಳಿದರು.

‘ನನ್ನನ್ನು ಸ್ವಾಗತಿಸಿದ ಅವರು, ಪೂರ್ವ ನಿಯೋಜಿತ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ಎಂದು ತಿಳಿಸಿ ಹೋದರು. ಅವರು ನನ್ನೊಂದಿಗೆ ಬರಲಿಲ್ಲ ಎನ್ನುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಶಕ್ತಿ ಇದ್ದರೆ ಸರ್ಕಾರ ಉಳಿಸಿಕೊಳ್ಳಿ ಎಂಬ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಗರಂ ಆದ ಅವರು, ‘ಅವರಿಗೆ ಶಕ್ತಿ ಇದ್ದರೆ ಸರ್ಕಾರ ಉರುಳಿಸಿ ತೋರಿಸಲಿ’ ಎಂದು ಸವಾಲು ಹಾಕಿದರು.

ಆಪರೇಷನ್ ಕಮಲ ನಡೆಯುತ್ತಿದೆಯಂತಲ್ಲಾ ಎಂಬ ಪ್ರಶ್ನೆಗೆ, ‘ಯಾವ ಕಮಲ ಅದು’ ಎಂದು ಮರುಪ್ರಶ್ನಿಸಿದರು. ‘ಸರ್ವ ಕಾಲಕ್ಕೂ ಆಪರೇಷನ್ ಕಮಲ ಮದ್ದಲ್ಲ. ಅದಕ್ಕೆ ಜಯವೂ ಸಿಗುವುದಿಲ್ಲ. ಬಿಜೆಪಿಯವರು ರಾಜಕೀಯ ಮಾಡುವುದೇ ಹಿಂಬಾಗಿಲಿನಿಂದ. ಅವರು ಯಾವಾಗಲಾದರೂ ಸೆಡ್ಡು ಹೊಡೆದು ರಾಜಕೀಯ ಮಾಡಿದ್ದಾರೆಯೇ’ ಎಂದು ಲೇವಡಿ ಮಾಡಿದರು.

‘ಸಮ್ಮಿಶ್ರ ಸರ್ಕಾರವನ್ನು ಅಷ್ಟು ಸುಲಭವಾಗಿ ಯಾರೂ ಅಭದ್ರಗೊಳಿಸಲು ಸಾಧ್ಯವಿಲ್ಲ. ನಾನು ಕಿಂಗ್‌ಪಿನ್ ಎಂದು ಶುಕ್ರವಾರ ಹೇಳಿಕೆ ನೀಡಿದ್ದೆ. ಆದರೆ, ಅವರಿಗೇಕೆ (ಬಿಜೆಪಿಯವರು) ಭಯ ಶುರುವಾಗಿದೆ. ನಾನು ಯಾರ ಹೆಸರನ್ನೂ ಹೇಳಿಲ್ಲವಲ್ಲಾ. ಸಾಮ್ರಾಟ್ ಒಬ್ಬರು ಶುಕ್ರವಾರ ಕೊಟ್ಟ ಹೇಳಿಕೆ ಗಮನಿಸಿದ್ದೇನೆ. ಬೆಂಗಳೂರಿನ ಸಾಮ್ರಾಟ ಅವರು. ನನಗಿಂತ ಹೆಚ್ಚು ಮಾಹಿತಿ ಅವರ ಬಳಿಯೇ ಇದೆ. ಅವರು ಗೃಹಸಚಿವರಾಗಿದ್ದವರು; ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದವರು. ಅವರು ಕಿಂಗ್‌ಗಳನ್ನು ಇಟ್ಟುಕೊಂಡೇ ರಾಜಕೀಯ ಮಾಡುತ್ತಾರೆ. ಅವರು ಹೇಳುತ್ತಿರುವ ಕಿಂಗ್‌ಗಳೆಲ್ಲ ಒಂದು ವಾರದಿಂದ ಯಾವ ರೀತಿ ವಸೂಲಿ ಮಾಡುತ್ತಿದ್ದಾರೆ ಗೊತ್ತಾ? ಅವರಿಗೆ ಅಂಥವರೇ  ಬೇಕು’ ಎಂದು ಪರೋಕ್ಷಾವಾಗಿ ಆರ್‌. ಅಶೋಕ್‌ ವಿರುದ್ಧ ವಾಗ್ದಾಳಿ ನಡೆಸಿದರು. ವಸೂಲಿ ಮಾಡುತ್ತಿರುವವರು ಯಾರು ಎಂದು ವಿವರ ನೀಡಲಿಲ್ಲ.

‘ಬಿಜೆಪಿ ನಾಯಕರು ಸರ್ಕಾರ ಅತಂತ್ರಗೊಳಿಸಲು ಹಣ ಸಂಗ್ರಹ ಮಾಡುತ್ತಿದ್ದಾರೆ. ಅವರ ಹಿಂದೆ ಇರುವವರು ಯಾರೆಂದು ನನಗೆ ಗೊತ್ತಿದೆ. ನನ್ನ ಬಳಿಯೂ ಅಧಿಕಾರಿಗಳ ವರ್ಗ ಇದೆ. ಗುಪ್ತಚರ ವಿಭಾಗವೂ ಇದೆ ಎನ್ನುವುದನ್ನು ಮರೆಯಬೇಡಿ’ ಎಂದು ಮಾರ್ಮಿಕವಾಗಿ ಹೇಳಿದರು.

‘ಬೆಳಗಾವಿಯ ಎಲ್ಲಾ ಕಾಂಗ್ರೆಸ್ ಶಾಸಕರೂ ನನ್ನೊಂದಿಗೆ ಇದ್ದರು. ಜನತಾದರ್ಶನದಲ್ಲೂ ಭಾಗವಹಿಸಿದ್ದರು. ಇದಕ್ಕಿಂತ ಬೆಂಬಲ ಇನ್ನೇನು ಬೇಕು?’ ಎಂದು ಕೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !