ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔತಣ ರಾಜಕೀಯ: ‘ಕೈ’ಗೆ ಇರಿಸುಮುರಿಸು

ಸಚಿವ ರಮೇಶ ಜಾರಕಿಹೊಳಿ–ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆ
Last Updated 20 ಡಿಸೆಂಬರ್ 2018, 19:37 IST
ಅಕ್ಷರ ಗಾತ್ರ

ಬೆಳಗಾವಿ: ತೀವ್ರ ಜ್ವರ, ಗಂಟಲು ನೋವು ಕಾರಣ ಹೇಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮತ್ತು ಸಚಿವ ಸಂಪುಟ ಸಭೆಗೆ ಗೈರಾಗಿದ್ದ ಸಚಿವ ರಮೇಶ ಜಾರಕಿಹೊಳಿ, ವಿಧಾನಪರಿಷತ್ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಔತಣ ಕೂಟದಲ್ಲಿ ಸಚಿವರಾದ ರಾಜಶೇಖರ ಪಾಟೀಲ, ಸಿ.ಪುಟ್ಟರಂಗ ಶೆಟ್ಟಿ, ಜಯಮಾಲಾ ಕೂಡ ಭಾಗಿಯಾಗಿದ್ದರು. ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ರಮೇಶ ಜಾರಕಿಹೊಳಿ ಪಾಲ್ಗೊಂಡಿರುವುದು ಕಾಂಗ್ರೆಸ್‌ ನಾಯಕರಿಗೆ ಇರಿಸುಮುರಿಸು ಉಂಟುಮಾಡಿದೆ.

ಸಚಿವ ಸಂಪುಟ ವಿಸ್ತರಣೆಯ ಗೊಂದಲ ಮತ್ತು ‘ಆಪರೇಷನ್‌ ಕಮಲ’ ಭೀತಿಯಲ್ಲಿರುವ ಕಾಂಗ್ರೆಸ್‌ ನಾಯಕರಿಗೆ ರಮೇಶ ಜಾರಕಿಹೊಳಿಯ ಈ ನಡೆ ಇರಿಸುಮುರಿಸು ಉಂಟು ಮಾಡಿದೆ.

ಬಾದಾಮಿಯಿಂದ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಗುರುವಾರ ಇಲ್ಲಿನ ಸರ್ಕೀಟ್‌ ಹೌಸ್‌ಗೆ ರಮೇಶ ಜಾರಕಿಹೊಳಿ‌ ಅವರನ್ನು ಕರೆಸಿಕೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೆಲಹೊತ್ತು ಮಾತುಕತೆ ನಡೆಸಿದರು.

‘ಕವಟಗಿಮಠ ನಮ್ಮ ಜಿಲ್ಲೆಯವರು. ಎಲ್ಲರನ್ನೂ ಅವರು ಊಟಕ್ಕೆ ಕರೆದಿದ್ದರು. ಹೀಗಾಗಿ ನಾನೂ ಹೋಗಿದ್ದೆ’ ಎಂದು ರಮೇಶ ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗದಂತೆ ರಮೇಶಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದೂ ಗೊತ್ತಾಗಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಹಾಗೂ ಸಚಿವೆ ಜಯಮಾಲಾ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜಯಮಾಲಾ, ‘ಸ್ನೇಹಿತರು‌ ಕರೆದಿದ್ದರು. ಹೀಗಾಗಿ, ಹೋಗಿದ್ದೆವು ಅಷ್ಟೇ. ಇದರಲ್ಲಿ ಬೇರೇನೂ ತಪ್ಪು ತಿಳಿಯುವುದು ಬೇಡ. ಇನ್ನು ಮುಂದೆ ಕರೆದರೆ ಬರೋಲ್ಲ ಅಂತ ಹೇಳುತ್ತೇನೆ’ ಎಂದು ನಕ್ಕರು.

ಸಚಿವ ಆರ್.ವಿ. ದೇಶಪಾಂಡೆ, ‘ಊಟಕ್ಕೆ ಹೋಗುವುದು, ಬರುವುದು ಒಂದು ಸಂಪ್ರದಾಯ. ಯಾವುದೇ ನಾಯಕರ ಮದುವೆ, ಸಮಾರಂಭಗಳು ಇದ್ದಾಗ ಬೇರೆ ಪಕ್ಷದವರು ಹೋಗುತ್ತಾರೆ. ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ಪ್ರೀತಿ, ವಿಶ್ವಾಸದಿಂದ ಕರೆದಾಗ ಹೋಗಬೇಕಾಗುತ್ತದೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಸಚಿವ ಡಿ.ಕೆ. ಶಿವಕುಮಾರ್‌ ಏರ್ಪಡಿಸಿದ ಔತಣ ಕೂಟಕ್ಕೆ ರಮೇಶ ಜಾರಕಿಹೊಳಿ ಗೈರಾದ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಿ’ ಎಂದು ದೇಶಪಾಂಡೆ ಪ್ರತಿಕ್ರಿಯಿಸಿದರು.

ಪ್ರೀತಿ– ವಿಶ್ವಾಸದಿಂದ ಬಂದಿರಬೇಕು: ‘ಅವರು ಯಾವ ಕಾರಣಕ್ಕೆ ಭಾಗವಹಿಸಿದ್ದರೋ ಗೊತ್ತಿಲ್ಲ. ಬಹುಶಃ ಪ್ರೀತಿ, ವಿಶ್ವಾಸದ ಕಾರಣಕ್ಕೆ ಬಂದಿರಬಹುದು’ ಎಂದು ಆರ್‌. ಅಶೋಕ ಹೇಳಿದರು.

‘ರಮೇಶ ಜಾರಕಿಹೊಳಿ‌ ಮತ್ತು ಡಿ.ಕೆ.‌ ಶಿವಕುಮಾರ್‌ಗೆ ಎಣ್ಣೆ ಸೀಗೇಕಾಯಿ ಸಂಬಂಧ ಅನ್ನೋದು ಎಲ್ಲರಿಗೂ ಗೊತ್ತಿದೆ. ಬೆಳಗಾವಿಯನ್ನು ಶಿವಕುಮಾರ್‌ ಎರಡು ಭಾಗ ಮಾಡಿದ್ದಾರೆ. ಹೀಗಾಗಿ ಅವರು ಕರೆದಿದ್ದ ಔತಣಕೂಟಕ್ಕೆ ಜಾರಕಿಹೊಳಿ‌ ಹೋಗಲು ಇಷ್ಟಪಟ್ಟಿಲ್ಲ’ ಎಂದರು.

‘ಈಗಾಗಲೇ ಒಬ್ಬರು ಮುಖ್ಯಮಂತ್ರಿ ಇದ್ದಾರೆ. ಆದರೆ ಇದೀಗ, ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಲಾಖ್ ತಲಾಖ್ ತಲಾಖ್ ರೀತಿಯಲ್ಲಿ ಕುಮಾರಸ್ವಾಮಿಗೆ ಕಾಂಗ್ರೆಸ್ ಶೀಘ್ರ ತಲಾಖ್ ಕೊಡಲಿದೆ’ ಎಂದು ವ್ಯಂಗ್ಯವಾಡಿದರು.

**

ಪಾಟೀಲರಿಗೆ ಬಿಜೆಪಿ ನಾಯಕರ ಸಾಂತ್ವನ!

ಸಭಾಪತಿ ಸ್ಥಾನ ಕೈ ತಪ್ಪಿದ ಎಸ್‌. ಆರ್‌. ಪಾಟೀಲ ಅವರನ್ನು ಬಿಜೆಪಿ ನಾಯಕರು ಸಮಾಧಾನಪಡಿಸಿದ ಪ್ರಸಂಗ ನಡೆಯಿತು.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದ ಹೋಟೆಲ್‌ಗೆ ಉಪಾಹಾರ ಸೇವಿಸಲು ಬಂದಿದ್ದ ಪಾಟೀಲರನ್ನು ಮುತ್ತಿಕೊಂಡ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಆರ್. ಅಶೋಕ, ರವಿಕುಮಾರ್‌, ‘ನಿಮಗೆ ಸಭಾಪತಿ ಸ್ಥಾನ ಕೊಡಬೇಕಿತ್ತು. ಕಾಂಗ್ರೆಸ್‌ನಿಂದ ದೊಡ್ಡ ಅನ್ಯಾಯವಾಗಿದೆ. ಸಿದ್ದರಾಮಯ್ಯ ಅವರೂ ನಿಮ್ಮ ಕೈ ಹಿಡಿಯಲಿಲ್ಲ. ಮುಂದೆ ಭವಿಷ್ಯವಿದೆ, ಚಿಂತಿಸಬೇಡಿ’ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ, ‘ಸಭಾಪತಿ ಸ್ಥಾನ ಕೈ ತಪ್ಪಿದಕ್ಕೆ ಬಿಜೆಪಿಯ ಹಲವು ಶಾಸಕರು ನನ್ನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಹಾಗಂತ, ನಾನು ಬಿಜೆಪಿ ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದೆ ಎನ್ನುವುದು ಸರಿಯಲ್ಲ’ ಎಂದರು.

‘ಆತ್ಮವಂಚನೆ ಮಾಡಿಕೊಳ್ಳಲ್ಲ’

‘ಉತ್ತರ ಕರ್ನಾಟಕಕ್ಕೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ. ಈ ಸರ್ಕಾರದಲ್ಲಿ ನಮ್ಮ ಭಾಗಕ್ಕೆ ಅನ್ಯಾಯ ಆಗುತ್ತಿರುವುದು ನಿಜ’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಎಸ್‌. ಆರ್‌. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ‘ಈ ವಿಚಾರದಲ್ಲಿ ನಾನು ಸರ್ಕಾರವನ್ನು ಸಮರ್ಥಿಸಿಕೊಂಡು ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ’ ಎಂದು ಖಾರವಾಗಿ ಹೇಳಿದರು.

**

ಆತ್ಮವಂಚನೆ ಮಾಡಿಕೊಳ್ಳಲ್ಲ: ಎಸ್‌.ಆರ್. ಪಾಟೀಲ

‘ಉತ್ತರ ಕರ್ನಾಟಕಕ್ಕೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ. ಈ ಸರ್ಕಾರದಲ್ಲಿ ನಮ್ಮ ಭಾಗಕ್ಕೆ ಅನ್ಯಾಯ ಆಗುತ್ತಿರುವುದು ನಿಜ’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಎಸ್‌. ಆರ್‌. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಈ ವಿಚಾರದಲ್ಲಿ ನಾನು ಸರ್ಕಾರವನ್ನು ಸಮರ್ಥಿಸಿಕೊಂಡು ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ’ ಎಂದು ಖಾರವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT