ವಿಧಾನಸಭಾಧ್ಯಕ್ಷರ ಕಲಾಪ ಲಹರಿ

7
ಹೆಲಿಕಾಪ್ಟರ್‌ ಗೌಡ, ಯು.ಕೆ 27 ಎಂದು ರೇಗಿಸಿದ ರಮೇಶ್‌ ಕುಮಾರ್‌

ವಿಧಾನಸಭಾಧ್ಯಕ್ಷರ ಕಲಾಪ ಲಹರಿ

Published:
Updated:

ಬೆಳಗಾವಿ: ವ್ಯಂಗ್ಯಭರಿತ ಮಾತು ಹಾಗೂ ತಮಾಷೆಗಳ ಮೂಲಕ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಅವರು ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಕಾಲೆಳೆದರು.

ಸುರಪುರದ ಬಿಜೆಪಿ ಶಾಸಕ ನರಸಿಂಹ ನಾಯಕ (ರಾಜೂ ಗೌಡ) ಅವರನ್ನು ‘ಹೆಲಿಕಾಪ್ಟರ್‌ ಗೌಡ’ ಎಂದು, ಹುಕ್ಕೇರಿಯ ಉಮೇಶ್‌ ಕತ್ತಿ
ಅವರನ್ನು ‘ಯು.ಕೆ 27’ ಎಂದು ರೇಗಿಸಿದರು. ಪ್ರಶ್ನೆ ಕೇಳಲು ತಡಬಡಾಯಿಸಿದ ಎಚ್‌.ಡಿ.ಕೋಟೆಯ ಅನಿಲ್‌ ಕುಮಾರ್ ಸಿ. ಅವರಿಗೆ ಪ್ರಶ್ನೆ ಕೇಳುವ ಬಗೆಯನ್ನು ಹೇಳಿಕೊಟ್ಟರು. ಪ್ರಶ್ನೆ ಕೇಳಿದ ಬಳಿಕ ‘ವೆರಿ ಗುಡ್’ ಎಂದೂ ಬೆನ್ನು ತಟ್ಟಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್‌ ಅವರು ಅಬಕಾರಿ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ ಪ್ರಶ್ನಿಸಿದರು. ಮದ್ಯ ನಿಷೇಧ ಮಾಡಲು ಸರ್ಕಾರ ಚಿಂತನೆ ನಡೆಸಿದೆಯಾ ಎಂದೂ ಕೇಳಿದರು.

ಆಗ ರಮೇಶ್‌ ಕುಮಾರ್‌, ‘ನಿಮ್ಮ ಮೊದಲ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ. ಎರಡನೇ ಪ್ರಶ್ನೆ ಬಗ್ಗೆ ಸಂಜೆ ಕುಳಿತು ಚರ್ಚೆ ನಡೆಸಿ ತೀರ್ಮಾನಿಸೋಣ’ ಎಂದು ಚಟಾಕಿ ಹಾರಿಸಿದರು. ಚರ್ಚೆಯಲ್ಲಿ ಯಾರೆಲ್ಲ ಹಾಜರಿರಬೇಕು ಎಂದು ಬಿಜೆಪಿಯ ಸಿ.ಟಿ.ರವಿ ಕೇಳಿದರು. ನೀನೂ ಬಾ ಮಾರಾಯ ಎಂದು ರಮೇಶ್‌ ಕುಮಾರ್ ಹೇಳಿದರು. 

ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಗೆ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಅವರ ಜಟಾಪಟಿ ಮುಕ್ತಾಯವಾಗುತ್ತಿದ್ದಂತೆ, ‘ನಾನು ನಿಂತು ಗಲಾಟೆಯನ್ನು ನಿಲ್ಲಿಸಬಹುದಿತ್ತು. ಬೆಲ್‌ ಬಾರಿಸಬಹುದಿತ್ತು. ಗಲಾಟೆ ಮಾಡುವವರು ಸುಸ್ತಾಗಲಿ ಎಂಬ ಕಾರಣಕ್ಕೆ ಸುಮ್ಮನಿದ್ದೆ. ಇಲ್ಲಿ ಮಾಧ್ಯಮದವರು ಇದ್ದಾರೆ. ಅವರಿಗೆ ಆಹಾರವಾಗಬೇಕು ಎಂಬುದು ನಿಮ್ಮ ಆಸೆ’ ಎಂದು ಚುಚ್ಚಿದರು. ‘ಸಿದ್ದರಾಮಯ್ಯ ಬಂದ ಕೂಡಲೇ ಸಂಪುಟ ವಿಸ್ತರಣೆ ಮುಗಿಸಿ ಬಿಸಾಕಿ’ ಎಂದು ವ್ಯಂಗ್ಯವಾಗಿ ಹೇಳಿದರು.

ಬಿಜೆಪಿಯ ಕೆ.ಶಿವನಗೌಡ ನಾಯಕ್‌ ಅವರು ಅಪೌಷ್ಟಿಕತೆ ಬಗ್ಗೆ ಪ್ರಶ್ನಿಸಿದರು. ಸಚಿವೆ ಜಯಮಾಲಾ ಉತ್ತರಿಸಿದರು. ಆಗ ರಮೇಶ್‌ ಕುಮಾರ್‌ ಅವರು, ‘ಎಲ್ಲ ಸರಿಯಪ್ಪ. ಇಬ್ಬರೂ ದ‍ಪ್ಪಗಿದ್ದೀರಿ. ನಿಮಗ್ಯಾಕೆ ಅಪೌಷ್ಟಿಕತೆ’ ಎಂದು ಚಟಾಕಿ ಹಾರಿಸಿದರು.

‘ಕುಮಾರಸ್ವಾಮಿ ಅವರೇ, ನಿಮ್ಮ ಎಲ್ಲ ಮನ್ನಾ ಯೋಜನೆಗಳು ಪೂರ್ಣಗೊಂಡ ಬಳಿಕ ಹೆಲಿಕಾಪ್ಟರ್‌ ಗೌಡರ ಬೇಡಿಕೆಯನ್ನೂ ಈಡೇರಿಸಿಬಿಡಿ’ ಎಂದು ಛೇಡಿಸಿದರು. ಕುಮಾರಸ್ವಾಮಿ ಜೋರಾಗಿ ನಕ್ಕರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !