ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸಕರ ಅನರ್ಹತೆ: ಜನರೇ ವಿಶ್ಲೇಷಿಸಲಿ’

ಕಾಂಗ್ರೆಸ್ ಸದಸ್ಯತ್ವ ಪಡೆದ ರಮೇಶ್ ಕುಮಾರ್
Last Updated 31 ಜುಲೈ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಆಪರೇಷನ್ ಕಮಲಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಸದಸ್ಯತ್ವವನ್ನು ಅನರ್ಹಗೊಳಿಸಿ ನ್ಯಾಯಬದ್ಧವಾಗಿತೀರ್ಪು ನೀಡಿದ್ದೇನೆ. ಈ ತೀರ್ಪಿನ ವಿಶ್ಲೇಷಣೆಯನ್ನು ಜನರಿಗೆ ಬಿಟ್ಟಿದ್ದೇನೆ’ ಎಂದು ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪಕ್ಷದ ಸದಸ್ಯತ್ವ ಸ್ವೀಕರಿಸಿ ಮಾತನಾಡಿದರು. ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈಗ ಸಭಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಹೊಸದಾಗಿ ಸದಸ್ಯತ್ವ ಪಡೆದುಕೊಂಡರು.

‘ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದ್ದು, ನಾವು ಪಕ್ಷಕ್ಕೆ ಏನು ಕೊಡುತ್ತೇವೆ ಎಂಬುದು ಮುಖ್ಯವಾಗಬೇಕು. ಪ್ರಧಾನಿ ಹುದ್ದೆಯನ್ನೇಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತಿದ್ದರಿಂದ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದಾರೆ’ ಎಂದು ನೆನಪಿಸಿಕೊಂಡರು.

‘ವೈಯಕ್ತಿಕ ಕಾರಣಕ್ಕೆ ನಾವು ಕಿತ್ತಾಡುತ್ತಿದ್ದು,ಕಾರ್ಯಕರ್ತರಲ್ಲಿ ನೈತಿಕತೆ ಕುಸಿದಿದೆ. ವೈಯಕ್ತಿಕ ವಿಚಾರಗಳನ್ನು ಮರೆತು ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪಕ್ಷ ತೊರೆದು ಸ್ವಾರ್ಥ ರಾಜಕಾರಣ ಮಾಡಿದ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಮೂಲಕ ರಮೇಶ್ ಕುಮಾರ್ ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದರಿಂದಾಗಿ ಪಕ್ಷ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಿದಂತಾಗಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಮಹಾರಾಷ್ಟ್ರ, ಗುಜರಾತ್, ಗೋವಾ, ಉತ್ತರ ಪ್ರದೇಶದಲ್ಲಿ ವಿವಿಧ ಪಕ್ಷಗಳ ಶಾಸಕರಿಗೆ ಹಣ, ಅಧಿಕಾರದ ಆಸೆ ತೋರಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆಮಿಷಕ್ಕೆ ಬಗ್ಗದಿದ್ದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ತೋರಿಸಿ ಬೆದರಿಸಲಾಗುತ್ತಿದೆ. ಈಗ ಸುಪ್ರೀಂಕೋರ್ಟ್, ಚುನಾವಣೆ ಆಯೋಗಕ್ಕೂ ಕೈಹಾಕಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ನಾಶಮಾಡುತ್ತಿದ್ದಾರೆ. ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಕೋಮುವಾದಿಗಳನ್ನು ಎದುರಿಸಲು ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ಎಲ್ಲವೂ ಕೇಸರೀಕರಣವಾದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಭಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ರಮೇಶ್ ಕುಮಾರ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದು, ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT