‘ರೇಪ್‌’ ಹೇಳಿಕೆ: ರಮೇಶ್‌ ಕುಮಾರ್‌ ಕ್ಷಮೆಯಾಚನೆ

7

‘ರೇಪ್‌’ ಹೇಳಿಕೆ: ರಮೇಶ್‌ ಕುಮಾರ್‌ ಕ್ಷಮೆಯಾಚನೆ

Published:
Updated:
Prajavani

ಬೆಂಗಳೂರು: ‘ನನ್ನ ಸ್ಥಿತಿ ರೇಪ್ ಆದಂತಾಗಿದೆ’ ಎಂಬ ಹೇಳಿಕೆಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಸದನದಲ್ಲಿ ಬುಧವಾರ ಕ್ಷಮೆಯಾಚಿಸಿದರು.

'ಆಡಿಯೊ ಪ್ರಕರಣದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿ ಒಂದು ಬಾರಿ ಸಂತ್ರಸ್ತನಾಗಿದ್ದೇನೆ. ಸದನದಲ್ಲಿ ಎರಡು ದಿನ ಇದನ್ನೇ ಚರ್ಚೆ ಮಾಡುವ ಮೂಲಕ ನೂರಾರು ಬಾರಿ ಸಂತ್ರಸ್ತರನ್ನಾಗಿ ಮಾಡುತ್ತಿದ್ದೀರಿ’ ಎಂದು ರಮೇಶ್‌ ಕುಮಾರ್‌ ಅವರು ಸದನದಲ್ಲಿ ಮಂಗಳವಾರ ಹೇಳಿದ್ದರು. ಈ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕಟು ಆಕ್ರೋಶ ವ್ಯಕ್ತವಾಗಿತ್ತು. 

ಈ ಬೆಳವಣಿಗೆಗಳ ಬೆನ್ನಲ್ಲೇ, ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ, ರೂಪಕಲಾ ಶಶಿಧರ್‌, ಲಕ್ಷ್ಮಿ ಹೆಬ್ಬಾಳಕರ, ಖನ್ನೀಸಾ ಫಾತಿಮಾ, ಸೌಮ್ಯಾ ರೆಡ್ಡಿ ಹಾಗೂ ವಿನಿಶಾ ನಿರೋ ಅವರು ಸಭಾಧ್ಯಕ್ಷರನ್ನು ಭೇಟಿ ಮಾಡಿ, ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ತಮ್ಮ ಭಾವನೆ ತೋಡಿಕೊಂಡರು. ಬುಧವಾರ ಸಂಜೆ ಕಲಾಪ ಪುನರಾರಂಭವಾಗುತ್ತಿದ್ದಂತೆ ರಮೇಶ್‌ ಕುಮಾರ್‌, ‘ನಾನು ಸಾಂದರ್ಭಿಕವಾಗಿ ಈ ಮಾತು ಹೇಳಿದ್ದೆ. ಮಹಿಳೆಯರನ್ನು ನೋಯಿಸುವ ಉದ್ದೇಶ ಇರಲಿಲ್ಲ. ಮಾಧ್ಯಮಗಳು ಮಸಾಲೆ ಬೆರೆಸಿ ಈ ಸುದ್ದಿ ಪ್ರಸಾರ ಮಾಡಿದವು. ನನ್ನ ಮಾತುಗಳನ್ನು ದಾಖಲೆಗಳಿಂದ ತೆಗೆಸುವಂತೆ ಸಚಿವಾಲಯದ ಸಿಬ್ಬಂದಿಗೆ ನಿರ್ದೇಶಿಸಿದ್ದೇನೆ’ ಎಂದರು.

ಸಾಮಾಜಿಕ ವಲಯದಲ್ಲಿ ಚರ್ಚೆ: ರಮೇಶ್ ಕುಮಾರ್‌ ಹಾಸ್ಯಮಿಶ್ರಿತ ಧಾಟಿಯಲ್ಲಿ ನೀಡಿದ ಹೇಳಿಕೆ ಸಾರ್ವಜನಿಕ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

‘ಸಭಾಧ್ಯಕ್ಷರ ಈ ಹೇಳಿಕೆ ತೀವ್ರ ಆಕ್ಷೇಪಣಾರ್ಹ’ ಎಂದು ಮಹಿಳಾ ಸಂಘಟನೆಗಳು ಪ್ರತಿಕ್ರಿಯಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಶಾಸಕರೂ ಸಭಾಧ್ಯಕ್ಷರ ಹೇಳಿಕೆಯು ಅನಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯ ರೂ‍ಪಾಲಿ ನಾಯಕ್‌ (ಕಾರವಾರ) ಮತ್ತು ಶಶಿಕಲಾ ಜೊಲ್ಲೆ (ನಿಪ್ಪಾಣಿ) ‘ಈ ಹೇಳಿಕೆ ಕೆಟ್ಟ ಅಭಿರುಚಿಯಿಂದ ಕೂಡಿದ್ದು’ ಎಂದು ಹೇಳಿದರೆ, ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳಕರ (ಬೆಳಗಾವಿ ಗ್ರಾಮೀಣ) ಮತ್ತು ಸೌಮ್ಯ ರೆಡ್ಡಿ (ಜಯನಗರ) ಅವರು ಸಭಾಧ್ಯಕ್ಷರ ಹೇಳಿಕೆ, ‘ಉದ್ದೇಶಪೂರ್ವಕ ಅಲ್ಲ’ ಎಂದು ಸಮರ್ಥಿಸಿದರು.

‘ಇಂಥ ಹೇಳಿಕೆಯನ್ನು ಸಭಾಧ್ಯಕ್ಷರು ನೀಡಬಾರದಿತ್ತು. ಇದು ಅತ್ಯಂತ ಸಂವೇದನಾರಹಿತ ಹೇಳಿಕೆ. ಈ ಬಗ್ಗೆ ಧ್ವನಿ ಎತ್ತಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಸಾಧ್ಯವಾಗಲಿಲ್ಲ’ ಎಂದು ಜೊಲ್ಲೆ ಹೇಳಿದರು.

‘ಸಭಾಧ್ಯಕ್ಷರು ಈ ಹೇಳಿಕೆ ನೀಡುವ ಸಂದರ್ಭದಲ್ಲಿ ನಾನು ಸದನದಲ್ಲಿ ಇರಲಿಲ್ಲ. ಆದರೆ, ಅವರ ಮಾತು ಆಲಿಸಿದರೆ ಅದು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆ ಎಂದೆನಿಸುವುದಿಲ್ಲ’ ಎಂದು ವಿಧಾನಸಭೆಯ ನಾಮನಿರ್ದೇಶಿತ ಸದಸ್ಯೆ ವಿನಿಶಾ ನಿರೊ ಹೇಳಿದರು.

‘ಸದನದಲ್ಲಿ ಇಂಥ ಹೇಳಿಕೆ ನೀಡಬಾರದಿತ್ತು ನಿಜ. ಆದರೆ, ಇನ್ನೊಬ್ಬರ ಭಾವನೆಗಳಿಗೆ ನೋವು ತರುವ ಉದ್ದೇಶದಿಂದ ಖಂಡಿತಾ ಅವರು ಈ ಹೇಳಿಕೆ ನೀಡಿಲ್ಲ. ಆಡಿಯೊ ಪ್ರಕರಣದಲ್ಲಿ ತಮಗಾದ ನೋವನ್ನು ಆ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ ಅಷ್ಟೆ’ ಎಂದು ಹೆಬ್ಬಾಳಕರ ಹೇಳಿದರು. ಅವರ ಮಾತಿಗೆ ಶಾಸಕಿ ಸೌಮ್ಯಾ ರೆಡ್ಡಿ ದನಿಗೂಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !