ಸೋಮವಾರ, ನವೆಂಬರ್ 18, 2019
24 °C
ರಮೇಶ್‌ ಅವರದ್ದು ಅಸಹಜ ಸಾವು: ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್‌ 

ರಮೇಶ್‌ ಆತ್ಮಹತ್ಯೆ: ಮೊಬೈಲ್‌ ಕರೆ ಬೆಂಬತ್ತಿದ ಪೊಲೀಸರು

Published:
Updated:

ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿಯಿಂದ ನೊಂದಿದ್ದರು ಎನ್ನಲಾದ ಕಾಂಗ್ರೆಸ್‌ ಶಾಸಕ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ಸಾವು ಅಸಹಜವಾದದ್ದು ಎಂಬುದಾಗಿ ಜ್ಞಾನಭಾರತಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ರಮೇಶ್ ಸಾವಿನ ಬಗ್ಗೆ ಸಹೋದರ ಸತೀಶ್ ಶನಿವಾರವೇ ದೂರು ನೀಡಿದ್ದಾರೆ. ಇದೊಂದು ಅಸಹಜ ಸಾವು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ತನಿಖೆಯಿಂದ ಯಾವುದಾದರೂ ಬೇರೆ ಅಂಶಗಳು ಗಮನಕ್ಕೆ ಬಂದರೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಸತ್ಯಾಂಶ ಏನು ಎಂಬುದನ್ನು ಪತ್ತೆ ಮಾಡಬೇಕಿದೆ. ತನಿಖೆಗಾಗಿ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಮಂಜುನಾಥ್ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ’ ಎಂದರು.

‘ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಮೃತದೇಹ ಸಿಕ್ಕಿದೆ. ಇದು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಆಗಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದರು.

‘ಪರಮೇಶ್ವರ ಅವರ ಮನೆಗೆ ಹೋಗಿಬರುವುದಾಗಿ ಪತ್ನಿ ಸೌಮ್ಯ ಅವರಿಗೆ ಹೇಳಿದ್ದ ರಮೇಶ್, ಶನಿವಾರ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದರು. ಅಲ್ಲಿಂದ ಕಾರಿನಲ್ಲಿ ಕ್ಯಾಂಪಸ್‌ಗೆ ಬಂದಿದ್ದರು. ಇದರ ನಡುವಿನ ಅವಧಿಯಲ್ಲಿ ಅವರ ಮೊಬೈಲ್‌ಗೆ ಯಾರೆಲ್ಲ ಕರೆ ಮಾಡಿದ್ದರು. ಅವರು ಬೇರೆ ಯಾರಿಗಾದರೂ ಕರೆ ಮಾಡಿದ್ದರಾ? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಮೊಬೈಲ್‌ಗಳ ಕರೆ ವಿವರ ನೀಡುವಂತೆ ಮೊಬೈಲ್ ಸೇವಾ ಕಂಪನಿಗಳಿಗೆ ಈಗಾಗಲೇ ಪತ್ರ ನೀಡಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಪರಮೇಶ್ವರ ಚಾಲಕನ ಹೇಳಿಕೆ ಸಂಗ್ರಹ:

ಪರಮೇಶ್ವರ ಅವರ ಕಾರು ಚಾಲಕ ಅನಿಲ್ ಅವರು ರಮೇಶ್ ಜೊತೆ ಹೆಚ್ಚು ಒಡನಾಟ ಹೊಂದಿದ್ದರು. ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಅನಿಲ್ ಅವರನ್ನು ವಿಚಾರಣೆಗೆ ಒಳಪಡಿಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ.

‘ಪರಮೇಶ್ವರ ಅವರ ಮನೆಯಲ್ಲಿದ್ದ ರಮೇಶ್, ಅಲ್ಲಿಂದ ತಮ್ಮ ಮನೆಗೆ ಹೋಗುವಾಗ ಅನಿಲ್ ಜೊತೆ ಮಾತನಾಡಿದ್ದರು ಎಂಬುದು ಗೊತ್ತಾಗಿತ್ತು. ಹೀಗಾಗಿ ಅವರ ಹೇಳಿಕೆ ಪಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ರಮೇಶ್‌ ಮನೆಯಿಂದ ಹೊರಟಿದ್ದಾಗ ಅವರನ್ನು ಮಾತನಾಡಿಸಿದ್ದ ಹಾಗೂ ನೋಡಿದ್ದ ವ್ಯಕ್ತಿಗಳ ಹೇಳಿಕೆಗಳನ್ನೂ ಸಂಗ್ರಹಿಸಲಾಗಿದೆ. ಸ್ನೇಹಿತರು, ಆಪ್ತರು ಹಾಗೂ ಸ್ಥಳೀಯ ನಿವಾಸಿಗಳಿಂದಲೂ ಮಾಹಿತಿ ಪಡೆಯಲಾಗಿದೆ. ಎಲ್ಲ ಮಾಹಿತಿಯೂ ಪರಿಶೀಲನೆ ಹಂತದಲ್ಲಿದೆ. ಸಾವಿಗೆ ನಿಖರ ಕಾರಣವೇನು ಎಂಬುದಕ್ಕೆ ಸ್ಪಷ್ಟ ಪುರಾವೆಗಳು ಇದುವರೆಗೂ ಸಿಕ್ಕಿಲ್ಲ’ ಎಂದರು.

ಕೈಬರಹ ಪರಿಶೀಲನೆ: ಮೃತದೇಹವಿದ್ದ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಸಿಕ್ಕ ಮರಣಪತ್ರ, ಚಪ್ಪಲಿ, ಮೊಬೈಲ್‌ ಹಾಗೂ ಕಾರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ರಮೇಶ್ ಬರೆದಿದ್ದಾರೆ ಎನ್ನಲಾದ ಮರಣಪತ್ರದಲ್ಲಿರುವ ಕೈಬರಹವನ್ನು ಪ್ರಯೋಗಾಲಯದ ತಜ್ಞರು ಪರಿಶೀಲಿಸುತ್ತಿದ್ದಾರೆ. ಆ ಕೈಬರಹ ಅವರದ್ದಾ? ಅಥವಾ ಬೇರೆಯವರದ್ದಾ? ಎಂಬುದು ವರದಿಯಿಂದಲೇ ಗೊತ್ತಾಗಬೇಕು’ ಎಂದು ಹಿರಿಯ ಅಧಿಕಾರಿ ಹೇಳಿದರು.

ಸುಳ್ಳು ಹೇಳುತ್ತಿರುವ ಐಟಿ ಅಧಿಕಾರಿಗಳು  

ರಾಮನಗರ: ನಿಗೂಢವಾಗಿ ಮೃತಪಟ್ಟ ರಮೇಶ್ ಅಂತ್ಯಕ್ರಿಯೆ ಹುಟ್ಟೂರಾದ ಮೆಳೇಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು.

ಗ್ರಾಮದ ಸಮೀಪದಲ್ಲೇ ಇರುವ ಜಮೀನಿನಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪುತ್ರ ಮೋಹಿತ್‌ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ. ಪತ್ನಿ ಸೌಮ್ಯ, ಪುತ್ರಿ ಶ್ರೇಯಾ, ಶಾಸಕರಾದ ಜಿ.ಪರಮೇಶ್ವರ, ಎ.ಮಂಜುನಾಥ್‌ ಹಾಜರಿದ್ದರು.

ಸುದ್ದಿಗಾರರ ಜೊತೆ ಮಾತನಾಡಿದ ಸಹೋದರ ಸತೀಶ್, ‘ಐ.ಟಿ. ಅಧಿಕಾರಿಗಳು ಸಹೋದರ ರಮೇಶ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆ ಆಗಿವೆ. ಅಷ್ಟಾದರೂ ಯಾವುದೇ ಪರಿಶೀಲನೆ ನಡೆಸಿಲ್ಲವೆಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಐ.ಟಿ ದಾಳಿ ಆದಾಗಿನಿಂದ ರಮೇಶ್ ನನ್ನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರ ಸಾವಿಗೆ ಐ.ಟಿ ಅಧಿಕಾರಿಗಳ ಕಿರುಕುಳವೇ ಕಾರಣ. ಈ ಬಗ್ಗೆ ದೂರು ದಾಖಲಿಸುತ್ತೇನೆ' ಎಂದು ಹೇಳಿದರು.

ಶಾಸಕ ಎ.ಮಂಜುನಾಥ್, ‘ರಮೇಶ್ ಇತರಿಗೆ ಧೈರ್ಯ ಹೇಳುತ್ತಿದ್ದ ವ್ಯಕ್ತಿ. ಈಗ ಆತನೇ ಆತ್ಮಹತ್ಯೆ ಹಾದಿ ಹಿಡಿದಿರುವುದು ಬೇಸರ ತಂದಿದೆ. ಅವರನ್ನು ವಿಚಾರಣೆ ಮಾಡಿಲ್ಲವೆಂದು ಐ.ಟಿ ಅಧಿಕಾರಿಗಳು ಹೇಳುತ್ತಿದ್ದು, ಈ ಬಗ್ಗೆ ನಿಷ್ಪಕ್ಷವಾದ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಐ.ಟಿ ಅಧಿಕಾರಿಗಳ ವಿಚಾರಣೆ ಸದ್ಯಕ್ಕಿಲ್ಲ’

‘ರಮೇಶ್ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಸ್ಪಷ್ಟ ಕಾರಣ ಹಾಗೂ ಪುರಾವೆಗಳು ಸಿಗಬೇಕಿದೆ. ಅಲ್ಲಿಯವರೆಗೂ ಐ.ಟಿ ಅಧಿಕಾರಿಗಳ ವಿಚಾರಣೆ ನಡೆಸುವುದಿಲ್ಲ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಐ.ಟಿ ಅಧಿಕಾರಿಗಳ ಕಿರುಕುಳವೇ ರಮೇಶ್ ಸಾವಿಗೆ ಕಾರಣವೆಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಅವರ ಆರೋಪದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ಪ್ರತಿಕ್ರಿಯಿಸಿ (+)