ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು ವನ್ಯಜೀವಿಧಾಮ: ಪುನಶ್ಚೇತನ, ಪ್ರವಾಸೋದ್ಯಮಕ್ಕೆ ಯತ್ನ

ಕೃಷ್ಣಮೃಗ ಸಂಖ್ಯೆ ಹೆಚ್ಚಳ; ನಶಿಸಿ ಹೋದ ಗ್ರೇಟ್‌ ಇಂಡಿಯನ್ ಬಸ್ಟರ್ಡ್‌
Last Updated 13 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಹಾವೇರಿ: ಅರಣ್ಯ ಸಚಿವ ಆರ್. ಶಂಕರ್ ಪ್ರತಿನಿಧಿಸುತ್ತಿರುವ ರಾಣೆಬೆನ್ನೂರಿನಲ್ಲಿರುವ ಕೃಷ್ಣಮೃಗ ವನ್ಯಜೀವಿಧಾಮವನ್ನು ‘ನಿಸರ್ಗ ಪ್ರವಾಸೋದ್ಯಮ’ ಮೂಲಕ ಸಂರಕ್ಷಿಸಲು ₹3.60 ಕೋಟಿಯ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಸರ್ಕಾರವು 1974ರ ಜೂನ್ 17ರಂದು ಹೊರಡಿಸಿದ ಅಧಿಸೂಚನೆ ಅನ್ವಯ ಜಿಲ್ಲೆಯ ರಾಣೆಬೆನ್ನೂರು, ಹಾವೇರಿ ಮತ್ತು ಬ್ಯಾಡಗಿ ತಾಲ್ಲೂಕುಗಳ 26 ಗ್ರಾಮಗಳನ್ನು ಒಳಗೊಂಡ 119 ಚದರ ಕಿ.ಮೀ. ಪ್ರದೇಶವನ್ನು ಕೃಷ್ಣಮೃಗ ಮತ್ತು ಗ್ರೇಟ್‌ ಇಂಡಿಯನ್ ಬಸ್ಟರ್ಡ್‌ ವನ್ಯಜೀವಿಧಾಮ (ಅಭಯಾರಣ್ಯ)ವಾಗಿ ಘೋಷಿಸಲಾಗಿತ್ತು. ಇವುಗಳಲ್ಲದೇ ಜಿಂಕೆ, ಚಿಗರೆ, ನರಿ, ಗುಳ್ಳೇನರಿ, ತೋಳ, ಕಾಡುಹಂದಿ, ಮೊಲ, ಮುಳ್ಳುಹಂದಿ, ನವಿಲು ಇತ್ಯಾದಿ ಪ್ರಾಣಿ–ಪಕ್ಷಿಗಳು ಹಾಗೂ ಹಾವುಗಳು ಇಲ್ಲಿವೆ.

ಆದರೆ, 2015ರ ಗಣತಿ ಪ್ರಕಾರ ಇಲ್ಲಿ 7,044 ಕೃಷ್ಣಮೃಗಗಳು ಕಂಡು ಬಂದರೆ, ಗ್ರೇಟ್‌ ಇಂಡಿಯನ್ ಬಸ್ಟರ್ಡ್‌ ಸಂಪೂರ್ಣ ನಶಿಸಿ ಹೋಗಿವೆ. ಹಲವೆಡೆ ಜಮೀನು ಒತ್ತುವರಿಯಾಗಿದ್ದು, ಕೃಷ್ಣಮೃಗಗಳು ಆಹಾರಕ್ಕಾಗಿ ರೈತರ ಹೊಲಕ್ಕೆ ಲಗ್ಗೆ ಇಡುತ್ತಿವೆ.

‘ವನ್ಯಜೀವಿಧಾಮದ ಸುತ್ತಳತೆಯು 116 ಕಿ.ಮೀ ಇದ್ದು, ಬೇಲಿ ಹಾಕಲು ಕೋಟ್ಯಂತರ ರೂಪಾಯಿ ಬೇಕು. ಅಲ್ಲದೇ, ಸೌರಶಕ್ತಿ ಬೇಲಿಯನ್ನು ಕೃಷ್ಣಮೃಗಗಳು ದಾಟಿ ಹೋಗುತ್ತವೆ. ಹೀಗಾಗಿ, ಆಂತರಿಕ ಅಭಿವೃದ್ಧಿ ಮತ್ತು ಒತ್ತುವರಿ ತೆರವು ಮೂಲಕವೇ ವನ್ಯಜೀವಿಧಾಮಕ್ಕೆ ಪುನಶ್ಚೇತನ ನೀಡಬೇಕಾಗಿದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಗಿರೀಶ್‌ ಎಚ್. ಸಿ.

ಈ ನಿಟ್ಟಿನಲ್ಲಿ ಸಚಿವರ ಸಲಹೆ ನೀಡಿದ್ದು, ನಿಸರ್ಗ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಏನೇನು: ಇಲ್ಲಿ ಪ್ರಾಣಿ– ಪಕ್ಷಿಗಳ ಪುನರ್ವಸತಿಗಾಗಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ₹25 ಲಕ್ಷ ವೆಚ್ಚದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್‌ ಪಕ್ಷಿಗಳ ಪುನರ್ವಸತಿ, ಭದ್ರತೆ ಹಾಗೂ ವೀಕ್ಷಣೆಗಾಗಿ ರಸ್ತೆ ನಿರ್ಮಾಣ, ಹುರುಳಿ ಮತ್ತು ಇತರ ಬೀಜಗಳ ಬಿತ್ತನೆ, ಹುಲ್ಲುಗಾವಲು ಅಭಿವೃದ್ಧಿ, ಮೂರು ದಿಕ್ಕುಗಳಲ್ಲಿ ಚೈನ್ ಲಿಂಕ್ ಮೆಷ್ ಕಾಮಗಾರಿಗಳನ್ನು ಯೋಜಿಸಲಾಗಿದೆ.

ಅಲ್ಲದೇ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ವಾಹನ ಖರೀದಿ, ತಂಗುದಾಣ, ಪರಿಸರ ಮಾಹಿತಿ ಕೇಂದ್ರ, ಪಾರಾಗೋಲಾ ವ್ಯವಸ್ಥೆ, ವನ್ಯಜೀವಿಗಳ ಪ್ರತಿಕೃತಿ ನಿರ್ಮಾಣ, ಪೀಠೋಪಕರಣ, ಆಕರ್ಷಕ ದ್ವಾರ, ನಾಮಫಲಕ, ಇಕೋಶಾಪ್, ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ರೈತರನ್ನೂ ಕಾಪಾಡಲಿ

ಜಿಲ್ಲೆಯಲ್ಲಿ ಕೃಷ್ಣಮೃಗಗಳ ಹಾವಳಿ ತೀವ್ರಗೊಂಡಿದ್ದು, ಅರಣ್ಯ ಇಲಾಖೆಯವರು ಅವುಗಳನ್ನು ವನ್ಯಜೀವಿಧಾಮ ಹಾಗೂ ಅರಣ್ಯ ಪ್ರದೇಶಕ್ಕೆ ಸೀಮಿತಗೊಳಿಸಿದರೆ ರೈತರು ನಿಟ್ಟುಸಿರು ಬಿಡಬಹುದು. ಅರಣ್ಯ ಸಚಿವರು, ಪ್ರಾಣಿ–ಪಕ್ಷಿಗಳ ಜೊತೆ ರೈತರನ್ನೂ ಕಾಪಾಡಬೇಕು ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.

* ಕೃಷ್ಣಮೃಗ ಮತ್ತು ಬಸ್ಟರ್ಡ್ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಜೊತೆ ವನ್ಯಜೀವಿಗಳ ಸಂಶೋಧನೆಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ

-ಗಿರೀಶ್ಎಚ್. ಸಿ, ಡಿಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT