‘ರಂಗ’ನ ಸಾವು; ವೇಗ ನಿಯಂತ್ರಣಕ್ಕೆ ಸಕಾಲ

7
ಭವಿಷ್ಯದ ದಸರಾ ಮಹೋತ್ಸವದಲ್ಲಿ ಭಾಗವಹಿಸಬೇಕಿದ್ದ ಆನೆ

‘ರಂಗ’ನ ಸಾವು; ವೇಗ ನಿಯಂತ್ರಣಕ್ಕೆ ಸಕಾಲ

Published:
Updated:

ಮೈಸೂರು: ರಸ್ತೆ ಅಪ‍ಘಾತದಲ್ಲಿ ಮತ್ತಿಗೋಡು ಶಿಬಿರದ ಬಳಿ ಸೋಮವಾರ ಸಾಕಾನೆ ‘ರಂಗ’ ಮೃತಪಟ್ಟ ನಂತರ ಕೇರಳ– ವಿರಾಜಪೇಟೆ– ಹುಣಸೂರು ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು ಎಂಬ ಕೂಗಿಗೆ ಮರು ಜೀವ ಬಂದಿದೆ.

ಕೇರಳ ಮತ್ತು ರಾಜ್ಯಕ್ಕೆ ಸಂಪರ್ಕ ಬೆಸೆಯುವ ಈ ರಸ್ತೆಯಲ್ಲಿ ಮಾತ್ರ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಇದೆ. ಬಂಡೀಪುರದ ಮಾರ್ಗ ರಾತ್ರಿ 9ಕ್ಕೆ ಹಾಗೂ ಮಾನಂದವಾಡಿ ಮಾರ್ಗವು ಸಂಜೆ 6ಕ್ಕೆ ಬಂದ್ ಆಗುತ್ತದೆ. ಇನ್ನುಳಿದ ರಸ್ತೆಗಳು ತೀರಾ ಬಳಸು ಹಾದಿಯವು. ಹೀಗಾಗಿ, ಬಹಳಷ್ಟು ವಾಹನಗಳು ವಿರಾಜಪೇಟೆ ಮಾರ್ಗವನ್ನೇ ಅವಲಂಬಿಸಿವೆ.

ಇದರಿಂದ ಸಹಜವಾಗಿಯೇ ವಿರಾಜಪೇಟೆ ಮಾರ್ಗದಲ್ಲಿ ಹೆಚ್ಚಿನ ವಾಹನಗಳು ಕೇರಳದಿಂದ ರಾಜ್ಯಕ್ಕೆ ಬರುತ್ತವೆ. ಯಾವುದೇ ವೇಗನಿಯಂತ್ರಕಗಳು ಇಲ್ಲದೇ ಇರುವುದು ಅಪಘಾತಕ್ಕೆ ಕಾರಣವಾಗಿದೆ.

ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ತೀರಾ ಇಳಿಜಾರಿನಲ್ಲಿದೆ. ಸಹಜವಾಗಿಯೇ ವಾಹನಗಳ ವೇಗವೂ ಇಲ್ಲಿ ಅಧಿಕವಾಗುತ್ತದೆ. ಸದ್ಯ, ಇಲ್ಲಿ ಮೊದಲು ವೇಗ ನಿಯಂತ್ರಕಗಳನ್ನು ಅಳವಡಿಸಬೇಕು ಎಂದು ವನ್ಯಜೀವಿ ಪ್ರಿಯರು ಆಗ್ರಹಿಸುತ್ತಾರೆ.

ಅಪಾಯದ ತೂಗುಗತ್ತಿ: ಈ ಭಾಗದಲ್ಲಿ ರಸ್ತೆ ಅಪಘಾತಕ್ಕೆ ವನ್ಯಜೀವಿಗಳು ಬಲಿಯಾಗಿರುವುದು ಇದೇ ಮೊದೆಲೇನಲ್ಲ. 2015ರಲ್ಲಿ ಕಾಡೆಮ್ಮೆಯೊಂದು ಖಾಸಗಿ ಬಸ್‌ಗೆ ಸಿಲುಕಿ ಸಾವನ್ನಪ್ಪಿತ್ತು. ಇದರಿಂದ ಬಸ್‌ ಸಹ ಪಲ್ಟಿಯಾಗಿ ಹಲವು ಮಂದಿ ಗಾಯಗೊಂಡಿದ್ದರು. ಮೂಲೆಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಮರಿಯಾನೆಯೊಂದು ಲಾರಿಗೆ ಸಿಲುಕಿ ಮೃತಪಟ್ಟಿತ್ತು. ಹೀಗೆ, ಕೇರಳ– ಗೋಣಿಕೊಪ್ಪ– ಹುಣಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸರಣಿ ಮುಂದುವರೆದಿದೆ.

ದಸರೆಯಲ್ಲಿ ಭಾಗವಹಿಸುವ ಅಭಿಮನ್ಯು, ದ್ರೋಣ ಸೇರಿದಂತೆ ಒಟ್ಟು 24 ಆನೆಗಳು ಮತ್ತಿಗೋಡು ಶಿಬಿರದಲ್ಲೇ ಇಲ್ಲಿವೆ. ಇವುಗಳ ಸುರಕ್ಷತೆಯ ಮೇಲೂ ತೂಗುಗತ್ತಿ ತೂಗಲಾರಂಭಿಸಿದೆ. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವಾದ ಬಳಿಕ ಈ ಭಾಗದಲ್ಲಿ ಹೆಚ್ಚುತ್ತಿರುವ ವಾಹನ ಸಂದಣಿ ಅರಣ್ಯ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ರಾತ್ರಿ ಸಂಚಾರ ನಿಷೇಧಕ್ಕೆ ಒತ್ತಾಯ

ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ಹೇರಿದ ಬಳಿಕ ರಸ್ತೆ ಅಪಘಾತದಲ್ಲಿ ವನ್ಯಜೀವಿಗಳು ಸಾವನ್ನಪ್ಪುವ ಪ್ರಕರಣಗಳು ಕಡಿಮೆಯಾಗಿವೆ. ಹೀಗಾಗಿ, ಕೇರಳ– ಗೋಣಿಕೊಪ್ಪ– ಹುಣಸೂರು ಹೆದ್ದಾರಿಯಲ್ಲೂ ರಾತ್ರಿ ವೇಳೆ ಸಂಚಾರವನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಸಂರಕ್ಷಣಾ ಫೌಂಡೇಷನ್‌ನ ಡಿ.ರಾಜಕುಮಾರ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !