ಭುಗಿಲೆದ್ದ ಆಕ್ರೋಶ: ಬೀದಿಗಿಳಿದು ಹೋರಾಟ

7
ಮಾಲೂರು ವಿದ್ಯಾರ್ಥಿನಿ ಅತ್ಯಾಚಾರ– ಕೊಲೆ ಪ್ರಕರಣ

ಭುಗಿಲೆದ್ದ ಆಕ್ರೋಶ: ಬೀದಿಗಿಳಿದು ಹೋರಾಟ

Published:
Updated:
Deccan Herald

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಬೀದಿಗಿಳಿದು ಬೃಹತ್‌ ಹೋರಾಟ ನಡೆಸಿದರು.

ಮಾಲೂರು ಪಟ್ಟಣದಲ್ಲಿ ಬೆಳಿಗ್ಗೆ ಅಂಗಡಿಗಳನ್ನು ಮುಚ್ಚಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌, ಆಟೊಗಳು ಕೆಲ ಹೊತ್ತು ರಸ್ತೆಗಿಳಿಯಲಿಲ್ಲ. ಪಟ್ಟಣದಲ್ಲಿ ಅಘೋಷಿತ ಬಂದ್‌ ವಾತಾವರಣವಿತ್ತು.

ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಕ್ರೀಡಾಂಗಣದ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮಾರಿಕಾಂಭ ವೃತ್ತದವರೆಗೆ ಮೆರವಣಿಗೆ ಬಂದು ರಸ್ತೆ ತಡೆ ಮಾಡಿದರು.

‘ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸಬೇಕು. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು’ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪೊಲೀಸರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು. ಪ್ರತಿಭಟನಾಕಾರರ ಮತ್ತೊಂದು ಗುಂಪು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿತು.

ಜಿಲ್ಲಾ ಕೇಂದ್ರ, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಬಂಗಾರಪೇಟೆಯಲ್ಲೂ ರೈತ ಸಂಘ ಮತ್ತು ಹಸಿರು ಸೇನೆ, ಜನಾಧಿಕಾರ ಸಂಘಟನೆ, ಭಾರತ ವಿದ್ಯಾರ್ಥಿ ಒಕ್ಕೂಟ, ಕುಂಬಾರರ ಕ್ಷೇಮಾಭಿವೃದ್ಧಿ ಸಂಘ, ದಲಿತ ರೈತ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜನವಾದಿ ಮಹಿಳಾ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು.

ನೀಲಗಿರಿ ತೋಪಿನಲ್ಲಿ ದುಷ್ಕೃತ್ಯ
ವಿದ್ಯಾರ್ಥಿನಿಯು ಬುಧವಾರ (ಆ.1) ಸಂಜೆ ಶಾಲೆ ಮುಗಿದ ನಂತರ ಸ್ನೇಹಿತೆಯ ಜತೆ ರೈಲ್ವೆ ಕೆಳ ಸೇತುವೆ ಮಾರ್ಗದ ಕಾಲುದಾರಿಯಲ್ಲಿ ಮನೆಗೆ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿ ಅವರನ್ನು ಅಡ್ಡಗಟ್ಟಿದ್ದ. ಇದರಿಂದ ಗಾಬರಿಯಾದ ಸಂತ್ರಸ್ತೆಯ ಸ್ನೇಹಿತೆಯು ಆತನಿಂದ ತಪ್ಪಿಸಿಕೊಂಡು ಹೋಗಿ ವಿದ್ಯಾರ್ಥಿನಿಯ ಪೋಷಕರಿಗೆ ವಿಷಯ ತಿಳಿಸಿದ್ದಳು.

ಪೋಷಕರು ಸ್ಥಳಕ್ಕೆ ಬರುವಷ್ಟರಲ್ಲಿ ದುಷ್ಕರ್ಮಿಯು ವಿದ್ಯಾರ್ಥಿನಿಯನ್ನು ಸಮೀಪದ ನೀಲಗಿರಿ ತೋಪಿಗೆ ಎಳೆದೊಯ್ದು ಅತ್ಯಾಚಾರ ಎಸಗಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಸಂತ್ರಸ್ತ ವಿದ್ಯಾರ್ಥಿನಿಯು ಪೋಷಕರೊಂದಿಗೆ ಮಾಲೂರು ಹೊರವಲಯದ ಬಡಾವಣೆಯಲ್ಲಿ ವಾಸವಿದ್ದಳು.

ಪೋಷಕರು ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳಾಗಿದ್ದ ಸಂತ್ರಸ್ತೆಯು ಮಾಲೂರಿನ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು.

***

ಸುತ್ತಮುತ್ತಲಿನ ಸಿ.ಸಿ ಟಿವಿಗಳ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲನೆ ಮಾಡುತ್ತಿದ್ದೇವೆ. ತನಿಖೆಗೆ ವಿಶೇಷ ತಂಡ ರಚಿಸಿದ್ದೇವೆ. ಆರೋಪಿ ಬಗ್ಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.
– ಎಂ.ರಾಜೀವ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 3

    Angry

Comments:

0 comments

Write the first review for this !