ಅತ್ಯಾಚಾರ ಸಂತ್ರಸ್ತೆಗೆ ₹ 3 ಲಕ್ಷ ಪರಿಹಾರ

7

ಅತ್ಯಾಚಾರ ಸಂತ್ರಸ್ತೆಗೆ ₹ 3 ಲಕ್ಷ ಪರಿಹಾರ

Published:
Updated:
Prajavani

ಬೆಂಗಳೂರು: ಅತ್ಯಾಚಾರಕ್ಕೆ ಈಡಾಗಿ ಗರ್ಭಿಣಿಯಾಗಿರುವ ಸಂತ್ರಸ್ತೆಗೆ ‘ಕರ್ನಾಟಕ ಸಂತ್ರಸ್ತರ ಪರಿಹಾರ ನಿಧಿ’ ಯಿಂದ ₹ 3 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಒಂದುವೇಳೆ ಸಂತ್ರಸ್ತೆಯ ಕುಟುಂಬದವರು ಹುಟ್ಟಲಿರುವ ಮಗುವಿನ ಪಾಲನೆ, ಪೋಷಣೆಗೆ ನಿರಾಕರಿಸಿದರೆ ಸಕ್ಷಮ ಪ್ರಾಧಿಕಾರವು ಆ ಮಗುವಿನ ದೇಖರೇಖಿಯನ್ನೂ ನಿರ್ವಹಿಸಬೇಕು’ ಎಂದು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆ, ಗರ್ಭವತಿಯಾದ ವಿಷಯವನ್ನು ಭೀತಿಯಿಂದ ಮನೆಯವರಿಗೆ ತಿಳಿಸಿರಲಿಲ್ಲ.ಆಕೆ ಮನೆಯವರಿಗೆ ಈ ವಿಷಯ ತಿಳಿಸುವ ವೇಳೆಗೆ ಗರ್ಭವತಿಯಾಗಿ 21 ವಾರ ಕಳೆದಿತ್ತು. ಕುಟುಂಬ ಸದಸ್ಯರು ಗರ್ಭಪಾತ ಮಾಡಿಸಲು ಮುಂದಾದಾಗ ವೈದ್ಯರು ನಿರಾಕರಿಸಿದ್ದರು.

‘ಮಗಳ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಪೋಷಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತಂತೆ ಹೈಕೋರ್ಟ್‌ ಮಾನಸಿಕ ಮತ್ತು ದೈಹಿಕ ತಜ್ಞ ವೈದ್ಯರ ತಂಡಕ್ಕೆ ನಿರ್ದೇಶಿಸಿತ್ತು. ಈಕೆ ಗರ್ಭಪಾತಕ್ಕೆ ಒಳಗಾಗಬಹುದೇ ಹೇಗೆ ಎಂಬುದರ ಸಮಗ್ರ ವರದಿ ನೀಡುವಂತೆ ಸೂಚಿಸಿತ್ತು.

ಅಷ್ಟೊತ್ತಿಗಾಗಲೇ ಬಾಲಕಿ 31 ವಾರಗಳ ಗರ್ಭಿಣಿಯಾಗಿದ್ದಳು. ಈ ಹಂತದಲ್ಲಿ ಗರ್ಭಪಾತ ಸಾಧ್ಯವಿಲ್ಲ ಎಂಬ ತಜ್ಞ ವೈದ್ಯರ ತಂಡ ನೀಡಿದ ವರದಿಯನ್ನು ಅನುಸರಿಸಿ ನ್ಯಾಯಪೀಠ, ಆಕೆಗೆ ಆರ್ಥಿಕ ನೆರವು ನೀಡುವಂತೆ ಆದೇಶಿಸಿದೆ. 2014ರ ಸರ್ಕಾರಿ ಆದೇಶದ ಅನುಸಾರ ಆಕೆ ವಾಸಿಸುತ್ತಿರುವ ಪ್ರದೇಶ ವ್ಯಾಪ್ತಿಯ ಜಿಲ್ಲಾಧಿಕಾರಿ ಮೂರು ವಾರಗಳ ಒಳಗೆ ₹ 75 ಸಾವಿರ ನೀಡಬೇಕು ಎಂದೂ ತಾಕೀತು ಮಾಡಿದೆ.

ಸರ್ಕಾರವೇ ವೆಚ್ಚ ಭರಿಸಲಿ: ‘ಸಂತ್ರಸ್ತೆಯ ಸೂಕ್ತ ಆರೈಕೆಗೆ ಸ್ಥಳೀಯ ಜಿಲ್ಲಾ ಆಸ್ಪತ್ರೆ ಕ್ರಮ ಕೈಗೊಳ್ಳಬೇಕು. ಪ್ರಸವಪೂರ್ವ ಮತ್ತು ಪ್ರಸವೋತ್ತರ ಅವಧಿಯಲ್ಲಿ ಕಾಲಕಾಲಕ್ಕೆ ಆಕೆಯ ಚಿಕಿತ್ಸಾ ಅಗತ್ಯಗಳನ್ನು ಜಿಲ್ಲಾಡಳಿತ ನಿರ್ವಹಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಒಂದು ವೇಳೆ ಸಂತ್ರಸ್ತೆಯ ಪೋಷಕರು ಮಗು ತಮಗೆ ಬೇಡವೆಂದರೆ ದತ್ತು ಸ್ವೀಕಾರ ಕೇಂದ್ರ ಅಥವಾ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ವಶಕ್ಕೆ ಒಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಎಲ್ಲಾ ಖರ್ಚು ವೆಚ್ಚಗಳನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭರಿಸಬೇಕು’ ಎಂದು ತಿಳಿಸಲಾಗಿದೆ.

‘ಒಂದಿಷ್ಟಾದರೂ ಆತ್ಮವಿಶ್ವಾಸ ತುಂಬಬಲ್ಲದು’

‘ಈ ಪ್ರಕರಣದಲ್ಲಿ ಬಾಲಕಿ ನತದೃಷ್ಟೆ. ಆಕೆಯ ಮಾನಸಿಕ ಆಘಾತ ಮತ್ತು ಅನಪೇಕ್ಷಿತ ಗರ್ಭಧಾರಣೆಯ, ನೋವನ್ನು ಕಿಂಚಿತ್‌ ಆರ್ಥಿಕ ನೆರವು ದೂರಮಾಡಿ ಆತ್ಮವಿಶ್ವಾಸ ತುಂಬಬಲ್ಲದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಸಂವಿಧಾನದ 21ನೇ ವಿಧಿಯ ಪ್ರಕಾರ ಘನತೆಯಿಂದ ಬಾಳುವ ಹಕ್ಕನ್ನು ಮಾನವ ಹಕ್ಕುಗಳು ಮೂಲವೆಂದು ಈಗಾಗಲೇ 1948ರ ವಿಶ್ವ ಮಾನವ ಹಕ್ಕುಗಳ ಘೋಷಣೆಯಲ್ಲಿ ಒಪ್ಪಿಕೊಳ್ಳಲಾಗಿದೆ’ ಎಂದು ವಿವರಿಸಲಾಗಿದೆ.

ಗರ್ಭಪಾತಕ್ಕೆ ಸಂಬಂಧಿಸಿದ ವೈದ್ಯಕೀಯ ಕಾಯ್ದೆ–1971ರ ಅನುಸಾರ 20 ವಾರಗಳ ನಂತರದ ಗರ್ಭಪಾತ ಕಾನೂನು ಬಾಹಿರ.

* ಅತ್ಯಾಚಾರ ಸಂತ್ರಸ್ತರನ್ನು ಸಮಾಜ ಗೌರವದಿಂದ ನಡೆಸಿಕೊಳ್ಳಬೇಕು. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಘನತೆಯಿಂದ ಬಾಳುವ ಹಕ್ಕನ್ನು ಕೊಡಮಾಡಿದೆ.

- ಅಲೋಕ್‌ ಅರಾಧೆ, ನ್ಯಾಯಮೂರ್ತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !