ಸೋಮವಾರ, ಫೆಬ್ರವರಿ 24, 2020
19 °C
ಸಿದ್ಧಗಂಗಾ ಮಠಕ್ಕೂ ಅಕ್ಕಿ, ಗೋಧಿ ವಿತರಣೆ ಸ್ಥಗಿತಗೊಂಡಿತ್ತು

ಸಂಘ, ಸಂಸ್ಥೆಗೆ ಮತ್ತೆ ಪಡಿತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನ್ನ ದಾಸೋಹ ಯೋಜನೆಯಲ್ಲಿ (ಕಲ್ಯಾಣ ಸಂಸ್ಥೆ ಯೋಜನೆ) ಸಂಘ, ಸಂಸ್ಥೆಗಳಿಗೆ ಉಚಿತ ವಾಗಿ ನೀಡುತ್ತಿದ್ದ ಅಕ್ಕಿ, ಗೋಧಿ ವಿತ ರಣೆ ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಳೆಯಿಂದಲೇ ಪಡಿತರ ವಿತರಣೆ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

‘ಸಿದ್ಧಗಂಗಾ ಮಠ ಸೇರಿದಂತೆ ವಸತಿ, ಶಿಕ್ಷಣ ನೀಡುತ್ತಿರುವ ಸಂಘ, ಸಂಸ್ಥೆಗಳಿಗೆ ಪಡಿತರ ನೀಡುವುದನ್ನು ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ನಿರಾಶ್ರಿತರು, ವೃದ್ಧರು, ಅಶಕ್ತರಿಗೆ ಆಹಾರ ಸಿಗದೆ ಬಳಲುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಮುಖಂಡ ವಿ.ಎಸ್.ಉಗ್ರಪ್ಪ ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಂಸ್ಥೆಯ ಪ್ರತಿಯೊಬ್ಬರಿಗೆ ತಲಾ 10 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿಯನ್ನು ಪ್ರತಿ ತಿಂಗಳು ವಿತರಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿತ್ತು. ಇದರಿಂದ ರಾಜ್ಯದ 454 ಸಂಸ್ಥೆಗಳ 6ರಿಂದ 7 ಸಾವಿರ ಮಂದಿಗೆ ಅನುಕೂಲವಾಗಿತ್ತು. ಸಿದ್ಧಗಂಗಾ ಮಠದ 7,359 ವಿದ್ಯಾರ್ಥಿಗಳಿಗೆ ಸಹಕಾರಿಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿತರಣೆ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದರು.

ದೊಡ್ಡವರು, ಶ್ರೀಮಂತರ ಯೋಜನೆಗಳಿಗೆ ಕಡಿವಾಣ ಹಾಕದೆ ಅನುದಾನ ಮುಂದುವರಿಸಲಾಗಿದೆ. ಆದರೆ ಬಡವರ ಕಾರ್ಯಕ್ರಮ ಗಳಿಗೆ ಹಣ ನೀಡಲು ಸರ್ಕಾರ ಹಿಂಜರಿಯುತ್ತಿದೆ. ಈ ಸರ್ಕಾರದಲ್ಲಿ ಮಾನವೀಯತೆ ಮರೆಯಾಗಿದ್ದು, ರಾಜಕಾರಣ ಬಿಟ್ಟು ಸಾಮಾನ್ಯರ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಡಿತರ ವಿತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಹಿಂದಿನಂತೆ ಗೋಧಿ, ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

‘ನಾನು ಸಚಿವೆಯಾಗುವುದಕ್ಕೂ ಮೊದಲೇ ಪಡಿತರ ವಿತರಣೆ ನಿಲ್ಲಿಸಲಾಗಿತ್ತು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

***

ಈ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡದಿದ್ದರೆ ರಾಜ್ಯ ಸರ್ಕಾರವೇ ಹಣ ಒದಗಿಸುವ ಮೂಲಕ ಬಡವರಿಗೆ ಅನ್ನ ನೀಡುವ ಕಾರ್ಯ ಮುಂದುವರಿಸಬೇಕು

– ಯು.ಟಿ.ಖಾದರ್, ಶಾಸಕ

ಉಚಿತವಾಗಿ ಅಕ್ಕಿ, ಗೋಧಿ ನೀಡುವುದರಿಂದ 351 ಸಂಘ, ಸಂಸ್ಥೆಗಳು, 37,700 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವರ್ಷಕ್ಕೆ ₹18 ಕೋಟಿ ಹಣ ಬೇಕಾಗುತ್ತದೆ

– ಜೆ.ಸಿ.ಮಾಧುಸ್ವಾಮಿ, ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು