ಶುಕ್ರವಾರ, ನವೆಂಬರ್ 22, 2019
20 °C

ಆರ್‌ಸಿಇಪಿ ಒಪ್ಪಂದ: ಕಾಂಗ್ರೆಸ್‌ನಿಂದ ಜಾಗೃತಿ

Published:
Updated:

ಬೆಂಗಳೂರು: ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಳೆಯಿಂದ ರಾಜ್ಯದಾದ್ಯಂತ ಹೋರಾಟ ರೂಪಿಸಿದೆ.

ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕಿದರೆ ಮತ್ತಷ್ಟು ಹಿನ್ನಡೆ ಆಗಲಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಒಪ್ಪಂದ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

‘ದೇಶದ ಆರ್ಥಿಕ ವ್ಯವಸ್ಥೆ ಐಸಿಯುನಲ್ಲಿದ್ದು, ಆರ್ಥಿಕ ತುರ್ತು ಪರಿಸ್ಥಿತಿಗೆ ತಲುಪಿದೆ. ಉದ್ಯೋಗ ಸೃಷ್ಟಿ ಕೋಮಾವಸ್ಥೆಯಲ್ಲಿದ್ದು, ಉದ್ಯೋಗ ಸೃಷ್ಟಿಸುವ ಬದಲಿಗೆ ಇರುವ ಉದ್ಯೋಗ ಉಳಿಸಲು ಆಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹಿತ ಬಲಿಕೊಟ್ಟು ಒಪ್ಪಂದಕ್ಕೆ ಸಹಿ ಹಾಕಬಾರದು. ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಅವರು ಆಗ್ರಹಿಸಿದರು.

ನಾಳೆ ಮುಂಡಗೋಡಿನಲ್ಲಿ ಪ್ರತಿಭಟನೆ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಸೋಮವಾರ ಕಾಂಗ್ರೆಸ್ ಕಿಸಾನ್ ಸಂಘದ ನೇತೃತ್ವದಲ್ಲಿ ರೈಲು ತಡೆ ಚಳವಳಿ ನಡೆಯಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

‘ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಸ್ತಾಪಿಸಿರುವ ವಿಡಿಯೊ ಹೊರಬಂದಿದ್ದು, ಇದು ನನ್ನದಲ್ಲ ಎಂದು ಮುಖ್ಯಮಂತ್ರಿ ಅವರು ಎಲ್ಲಿಯೂ ಹೇಳಿಲ್ಲ. ಶಾಸಕರಿಂದ ರಾಜೀನಾಮೆ ಕೊಡಿಸಿ ಕಾನೂನು ಬಾಹಿರವಾಗಿ ಮೈತ್ರಿ ಸರ್ಕಾರ ಬೀಳಿಸಿರುವುದು ಇದರಿಂದ ತಿಳಿಯಲಿದೆ. ಅನರ್ಹ ಶಾಸಕರ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಗಮನಕ್ಕೆ ಈ ವಿಷಯವನ್ನು ತರುತ್ತೇವೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲೇ ಆಪರೇಷನ್ ಕಮಲ ನಡೆದಿರುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)