ಆರ್‌ಸಿಯು: ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಪದವಿ ಅಂಕಪಟ್ಟಿ!

7

ಆರ್‌ಸಿಯು: ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಪದವಿ ಅಂಕಪಟ್ಟಿ!

Published:
Updated:

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಧೀನದ ಪದವಿ ತರಗತಿಗಳ ಅಂತಿಮ ವರ್ಷದ ಅಂಕಪಟ್ಟಿ ಸಿಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. 5ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದು 7– 8 ತಿಂಗಳು ಹಾಗೂ 6ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದು 3 ತಿಂಗಳು ಕಳೆದಿದ್ದರೂ ಅಂಕಪಟ್ಟಿ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ.

ಬಿ.ಎ, ಬಿ.ಕಾಂ ಹಾಗೂ ಬಿಎಸ್ಸಿ ಪದವಿಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲವು ಬಾರಿ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದರೂ, ಇದುವರೆಗೆ ಪ್ರಮಾಣಪತ್ರ ದೊರೆತಿಲ್ಲ. ನಾಳೆ ನೀಡುತ್ತೇವೆ, ಮುಂದಿನ ವಾರ ನೀಡುತ್ತೇವೆ ಎಂದು ಮೌಲ್ಯಮಾಪನದ ಸಿಬ್ಬಂದಿ ಸಬೂಬು ಹೇಳುತ್ತಿದ್ದಾರೆ.

ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಹಲವು ತಿಂಗಳು ಕಳೆದಿದ್ದರೂ ಅಂಕಪಟ್ಟಿ ದೊರೆಕುತ್ತಿಲ್ಲ. ಪ್ರೊವಿಷನಲ್‌ ಅಂಕಪಟ್ಟಿಯನ್ನು ವಿಶ್ವವಿದ್ಯಾಲಯ ನೀಡುತ್ತಿದೆಯಾದರೂ, ಕೆಲವು ಕಂಪನಿಗಳು ಮೂಲ ಅಂಕಪಟ್ಟಿಯನ್ನು ಕೇಳುತ್ತಿವೆ. ಹೀಗಾಗಿ ಉದ್ಯೋಗ ಅರಸಿ ಹೊರಟ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮುದ್ರಣ ವಿಳಂಬ:
ಅಂಕಪಟ್ಟಿ ಮುದ್ರಣ ಮಾಡುವ ಕೆಲಸದ ಟೆಂಡರ್‌ ನೀಡಲು ವಿಳಂಬವಾಗಿದ್ದರಿಂದ ಅಂಕಪಟ್ಟಿಗಳು ಇದುವರೆಗೆ ಸಿದ್ಧವಾಗಿಲ್ಲ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ಏಪ್ರಿಲ್‌– ಮೇ ತಿಂಗಳಿನಲ್ಲಿ 6ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದಿದ್ದವು. ಆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಚಾಲ್ತಿಯಲ್ಲಿತ್ತು. ಅಂತಹ ಸಮಯದಲ್ಲಿ ಅಂಕಪಟ್ಟಿ ಮುದ್ರಿಸುವ ಕಾರ್ಯದ ಟೆಂಡರ್‌ ಕರೆಯಲು ಅವಕಾಶವಿರಲಿಲ್ಲ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿಯುವವರೆಗೆ ಕಾಯಬೇಕಾಯಿತು. ನಂತರ ಜೂನ್‌ ವೇಳೆಗೆ ಅಂಕಪಟ್ಟಿ ಮುದ್ರಣ ಮಾಡುವ ಕೆಲಸವನ್ನು ಟೆಂಡರ್‌ ನೀಡಲಾಯಿತು. ಟೆಂಡರ್‌ ನೀಡಲು ವಿಳಂಬವಾಗಿದ್ದರಿಂದ ಅಂಕಪಟ್ಟಿ ಮುದ್ರಣ ಕೆಲಸ ಇನ್ನೂ ಮುಗಿದಿಲ್ಲ. ಈ ವಾರದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅವು ತಿಳಿಸಿವೆ.

ಶೀಘ್ರವೇ ವಿತರಣೆ:
‘ಪದವಿ ತರಗತಿಗಳ ಪರೀಕ್ಷೆಗಳನ್ನು ಹಾಗೂ ಮೌಲ್ಯಮಾಪನವನ್ನು ನಿಗದಿತ ಸಮಯದಲ್ಲಿಯೇ ಮಾಡಲಾಗಿದೆ. ಫಲಿತಾಂಶವನ್ನು ಕೂಡ ನಿಗದಿತ ಸಮಯದಲ್ಲಿಯೇ ಪ್ರಕಟಿಸಲಾಗಿದೆ. ಆದರೆ ಕೆಲವು ಕಾರಣಗಳಿಂದಾಗಿ ಅಂಕಪಟ್ಟಿ ಮುದ್ರಣ ವಿಳಂಬವಾಗಿತ್ತು. ಈಗ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಅಂಕಪಟ್ಟಿಗಳನ್ನು ಒಂದು ವಾರದೊಳಗೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು’ ಎಂದು ಆರ್‌ಸಿಯು ಕುಲಸಚಿವ (ಮೌಲ್ಯಮಾಪನ) ರಂಗರಾಜ ವನದುರ್ಗ ಹೇಳಿದರು.

ಎಂಬಿಎ ಪದವಿಯ ಮೂರು ಪರೀಕ್ಷೆಗಳಿಗೆ ಮರುಪರೀಕ್ಷೆ ಪೂರ್ಣಗೊಂಡಿದೆ. ಅವುಗಳ ಮೌಲ್ಯಮಾಪನ ನಡೆದಿದ್ದು, ಸದ್ಯದಲ್ಲಿಯೇ ಇವುಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !