ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಬೆಳಗಾವಿಯಲ್ಲಿ ಆರ್‌ಡಿಪಿಆರ್‌ ಕಚೇರಿಗಳ ಸ್ಥಾಪನೆ: ಸಚಿವ ಕೆ.ಎಸ್. ಈಶ್ವರಪ್ಪ

Published:
Updated:
Prajavani

ಬೆಳಗಾವಿ: ‘ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಗೆ ಸಂಬಂಧಿಸಿದ ಕಚೇರಿಗಳನ್ನೂ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೂ ಆರಂಭಿಸಲಾಗುವುದು’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

‘ಬೆಂಗಳೂರಿನಲ್ಲಿರುವಂತೆ ಇಲ್ಲಿಯೂ 5 ವಿವಿಧ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿಗೆ ವರ್ಗಾಯಿಸಲಾಗುವ ಅಧಿಕಾರಿಗಳಿಗೆ ಆಡಳಿತಾತ್ಮಕ ಮತ್ತು ಆರ್ಥಿಕವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನೂ ನೀಡಲಾಗುವುದು' ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕು. ಸುವರ್ಣ ವಿಧಾನಸೌಧದಲ್ಲಿ ಕೊಠಡಿಗಳನ್ನು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರೊಂದಿಗೆ ಚರ್ಚಿಸಬೇಕಾಗುತ್ತದೆ.  ಹೀಗಾಗಿ, ಕಚೇರಿಗಳನ್ನು ಯಾವಾಗ ಆರಂಭಿಸುತ್ತೇವೆ ಎನ್ನುವುದನ್ನು ಈಗಲೇ ಹೇಳಲಾಗದು. ಶೀಘ್ರದಲ್ಲೇ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು’ ಎಂದರು.

‘ಸುವರ್ಣ ವಿಧಾನಸೌಧವನ್ನು ಭೂತಬಂಗಲೆಯಂತೆ ಬಿಡುವುದಕ್ಕಿಂತ, ಸರ್ಕಾರಿ ಕಚೇರಿಗಳನ್ನು ಆರಂಭಿಸಲು ವಿಧಾನಸಭೆ ಸಚಿವಾಲಯ ಅವಕಾಶ ಮಾಡಿಕೊಡುತ್ತಾದೆ ಎನ್ನುವ ವಿಶ್ವಾಸವಿದೆ. ಉತ್ತರ ಕರ್ನಾಟಕದ ಜನರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ರವಾನಿಸಬೇಕಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಪ್ರತಿ ಹಳ್ಳಿಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಸಭೆ: ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸಿಇಒಗಳೊಂದಿಗೆ ಇಡೀ ದಿನ ‘ಸಮಾಲೋಚನೆ– ಚಿಂತನ ಮಂಥನ ಸಭೆ’ ನಡೆಸಿದ ಸಚಿವರು, ಕುಂದುಕೊರತೆಗಳನ್ನು ಆಲಿಸಿದರು. ಸಲಹೆಗಳನ್ನು ಸ್ವೀಕರಿಸಿದರು.

ಗ್ರಾಮ ಪಂಚಾಯ್ತಿಗಳಿಗೆ ವಿವಿಧ 6 ಯೋಜನೆಗಳಿಗೆ ಬಜೆಟ್‌ನಲ್ಲಿ ದೊರೆತಿರುವ ಅನುದಾನವೆಷ್ಟು ಎನ್ನುವ ಮಾಹಿತಿ ಕ್ರೋಢೀಕರಿಸಿ ಸಿದ್ಧಪಡಿಸಿದ ಪುಸ್ತಕವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬಿಡುಗಡೆ ಮಾಡಿದರು.

‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ಪಂಚಾಯ್ತಿಗಳ ಖರ್ಚು–ವೆಚ್ಚದ ಮಾಹಿತಿ ಪ್ರಕಟಿಸಿ ಪಾರದರ್ಶಕ ಕ್ರಮ ಅನುಸರಿಸಲಾಗುತ್ತಿದೆ’ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Post Comments (+)