ಯಾವುದೇ ತನಿಖೆಗೆ ಸಿದ್ಧ: ಸಚಿವ ಪುಟ್ಟರಂಗಶೆಟ್ಟಿ

7

ಯಾವುದೇ ತನಿಖೆಗೆ ಸಿದ್ಧ: ಸಚಿವ ಪುಟ್ಟರಂಗಶೆಟ್ಟಿ

Published:
Updated:
Prajavani

ಯಳಂದೂರು: ‘ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಿಬ್ಬಂದಿ ಬಳಿ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಯಾವುದೇ ತನಿಖೆಗೂ ಸಿದ್ಧ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಹೇಳಿದರು.

ತಾಲ್ಲೂಕಿನ ಉಪ್ಪಿನ ಮೋಳೆಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನ್ನನ್ನು ಸಿಲುಕಿಸಲು ಪಿತೂರಿ ನಡೆದಿದೆ. ವಿಧಾನಸೌಧದಲ್ಲಿ ಅತ್ಯಂತ ಹೆಚ್ಚು ಬಿಗಿ ಪೊಲೀಸ್‌ ಭದ್ರತೆ ಇದೆ. ಸಿ.ಸಿ ಟಿ.ವಿ ವ್ಯವಸ್ಥೆ ಕೂಡ ಇದೆ. ಹೀಗಿದ್ದರೂ ವಿಧಾನಸೌಧದ ಒಳ ಭಾಗಕ್ಕೆ ಹಣ ಕೊಂಡೊಯ್ಯಲು ಹೇಗೆ ಸಾಧ್ಯ‘ ಎಂದರು.

‘ಹಣದ ಸಮೇತ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿರುವ ಮೋಹನ್‌ ನನ್ನ ಆಪ್ತ ಸಹಾಯಕ ಅಲ್ಲ. ಆತ ಟೈಪಿಸ್ಟ್. ಆತನ ಮುಖವನ್ನು ನಾನು ನೋಡಿಲ್ಲ’ ಎಂದು ತಿಳಿಸಿದರು.

ಗಾರ್ಡ್‌ ಆಗಿದ್ದ ಮೋಹನ್‌

‘ಮೋಹನ್, ಈ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಗಾರ್ಡ್ ಆಗಿದ್ದರು. ಉದ್ಯಾನದ ಗೆಸ್ಟ್‌ಹೌಸ್‌ಗಳಿಗೆ ಬರುತ್ತಿದ್ದ ಸಚಿವರು ಹಾಗೂ ಅವರ ಆಪ್ತರನ್ನು ಪರಿಚಯ ಮಾಡಿಕೊಂಡಿದ್ದರು. ಟೈಪಿಂಗ್‌ ಬರುತ್ತದೆ ಎಂದು ಹೇಳಿ ಗುತ್ತಿಗೆ ಆಧಾರದಲ್ಲಿ ವಿಧಾನಸೌಧ ಸಚಿವಾಲಯ ಸೇರಿದ್ದರು’ ಎಂದು ಮೂಲಗಳು ಹೇಳಿವೆ.

‘ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್, ಈ ಹಿಂದೆ ಸಚಿವರಾಗಿದ್ದ ಸಿ.ಚನ್ನಿಗಪ್ಪ, ಸಿ.ಸಿ.ಪಾಟೀಲ, ಉಮಾಶ್ರೀ, ರೋಷನ್ ಬೇಗ್ ಅವರ ಕಚೇರಿಯಲ್ಲೂ ಕೆಲಸ ಮಾಡಿದ್ದರು. ಸದ್ಯ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿದ್ದರು’ ಎಂದು ತಿಳಿಸಿವೆ.

ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

ತಮ್ಮ ಕಚೇರಿಯ ಟೈಪಿಸ್ಟ್‌  ಬಳಿ ಹಣ ಪತ್ತೆಯಾದ ಪ್ರಕರಣದ ನೈತಿಕ ಹೊಣೆ ಹೊತ್ತು ಪುಟ್ಟರಂಗ ಶೆಟ್ಟಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾನುವಾರ (ಇದೇ 6) ರಾಜ್ಯದಾದ್ಯಂತ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ‘ವಿಧಾನಸೌಧದಲ್ಲಿ ದಂಧೆ ನಡೆಯುವುದನ್ನು ತಡೆಯುತ್ತೇನೆ’ ಎಂದು ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಸೌಧಕ್ಕೆ ಪ್ರವೇಶವನ್ನೇ ನಿರ್ಬಂಧಿಸಿದ್ದರು. ಈಗ ಸಚಿವರ ಆಪ್ತನ ಬಳಿಯೇ ದೊಡ್ಡ ಮೊತ್ತದ ನಗದು ಪತ್ತೆಯಾಗಿದೆ. ಶಕ್ತಿಸೌಧ ದುರ್ಬಳಕೆಯಾಗುತ್ತಿರುವುದಕ್ಕೆ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿರುವುದಕ್ಕೆ ಇದಕ್ಕಿಂತ  ನಿದರ್ಶನ ಬೇಕೆ’ ಎಂದು ಪ್ರಶ್ನಿಸಿದರು.

ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದೂ ಅವರು ಹೇಳಿದರು.

‘ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕು’ ಎಂದು ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ  ಆಗ್ರಹಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !