ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಆಕ್ರೋಶ: ಮಣಿದ 'ಕೈ'

ಎಚ್ಚರಿಕೆ ಬೆನ್ನಲ್ಲೇ ಕ್ಷಮೆಯಾಚನೆ
Last Updated 28 ಜನವರಿ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರ ರಚಿಸಲು ‘ಕೈ’ ಜೋಡಿಸಿದ ಶಾಸಕರು ತಮ್ಮನ್ನು ಟೀಕಿಸಿದ ಕಾರಣಕ್ಕೆ ಕೆಂಡಾಮಂಡಲರಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ನನ್ನ ಕಾರ್ಯವೈಖರಿ ಇಷ್ಟವಾಗದಿದ್ದರೆ ಹುದ್ದೆ ತೊರೆಯಲು ಸಿದ್ಧ’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಎಚ್ಚರಿಕೆ ಬೆನ್ನಲ್ಲೇ ದಿಗಿಲುಗೊಂಡ ಕಾಂಗ್ರೆಸ್‌ ಹೈಕಮಾಂಡ್‌, ಮುಖ್ಯಮಂತ್ರಿ ವಿರುದ್ಧ ಯಾರೂ ಮಾತನಾಡಬಾರದು. ಲಕ್ಷ್ಮಣ ರೇಖೆ ದಾಟುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಸಂದೇಶ ರವಾನಿಸಿದೆ. ಕುಮಾರಸ್ವಾಮಿ ಅವರನ್ನು ಟೀಕಿಸಿದ್ದ ಶಾಸಕ ಎಸ್‌.ಟಿ. ಸೋಮಶೇಖರ್‌ ಕ್ಷಮೆಯಾಚಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ್ದ ಬಿಡಿಎ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಸೋಮಶೇಖರ್‌, ‘ಸಮ್ಮಿಶ್ರ ಸರ್ಕಾರ ಏಳು ತಿಂಗಳ ಅವಧಿಯಲ್ಲಿ ಏನೂ ಮಾಡಿಲ್ಲ’ ಎಂದು ದೂರಿದ್ದರು. ಅಲ್ಲದೆ, ‘ಸಿದ್ದರಾಮಯ್ಯ ನಮ್ಮ ನಾಯಕ’ ಎಂದಿದ್ದರು.

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಮತ್ತು ಎಂಟಿಬಿ ನಾಗರಾಜು, ‘ಸಿದ್ದರಾಮಯ್ಯನವರೇ ನಮಗೆ ಮುಖ್ಯಮಂತ್ರಿ’ ಎಂದು ಗುಣಗಾನ ಮಾಡಿದ್ದರು.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸೋಮವಾರ ಕೇಳಿದ ಪ್ರಶ್ನೆಗೆ ಗರಂ ಆದ ಕುಮಾರಸ್ವಾಮಿ, ‘ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ನಾನು ಕಾರ್ಯನಿರ್ವಹಿಸುವ ಶೈಲಿಯೇ ಹೀಗೆ’ ಎಂದರು.

‘ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ನಾನು ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಜೊತೆಯಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿದೆ‌. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮಗೆ ಶಾಸಕರ ಬೆಂಬಲವೂ ಬೇಕಿದೆ’ ಎಂದರು.

ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಮೈತ್ರಿ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಇದು ಆಕ್ಷೇಪಾರ್ಹ ಮತ್ತು ಶಿಸ್ತು ಮೀರಿದ ಹೇಳಿಕೆ. ಇದನ್ನು ಖಂಡಿಸುತ್ತೇನೆ. ಅವರಿಗೆ ಷೋಕಾಸ್‌ ನೋಟಿಸ್ ನೀಡುತ್ತೇನೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದರು.

ತಮ್ಮ ಹೇಳಿಕೆ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಗೊತ್ತಾಗುತ್ತಲೇ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿದ ಸೋಮಶೇಖರ್‌, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.

ತಮ್ಮ ಹೇಳಿಕೆಯನ್ನೇ ಬದಲಿಸಿದ ಸೋಮಶೇಖರ್‌, ‘ಕಳೆದ ಏಳು ತಿಂಗಳಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ನನ್ನ ಕ್ಷೇತ್ರದ ರಸ್ತೆ ಕ್ರಿಯಾ ಯೋಜನೆ ಆಗಿಲ್ಲ ಎಂದು ನಾನು ಹೇಳಿದ್ದೆ. ಆದರೆ, ಮಾತನಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಸರು ಎಲ್ಲೂ ಹೇಳಿಲ್ಲ’ ಎಂದರು.

‘ಕೆಲವರು ಮಗ, ಸೊಸೆಯನ್ನು ಗೆಲ್ಲಿಸುತ್ತಾರೆ’ ಎಂದೂ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಉದ್ದೇಶಿಸಿ ಸೋಮಶೇಖರ್ ಹೇಳಿದ್ದರು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸೋಮಶೇಖರ್‌, ‘ನಾನು ಎಲ್ಲೂ ದೇವೇಗೌಡರ ಹೆಸರು ಪ್ರಸ್ತಾಪ ಮಾಡಿಲ್ಲ. ದೇವೇಗೌಡರು ಹಿರಿಯರು ಅವರು ಎಲ್ಲಿ, ನಾನು ಎಲ್ಲಿ. ಎರಡನೇ ಬಾರಿ ನಾನು ಆಯ್ಕೆಯಾಗಿದ್ದೇನೆ. ನಮ್ಮ ಪಕ್ಷದಲ್ಲಿ ಕೆಲವರು ಇದ್ದಾರೆ ಎಂದು ಹೇಳಿಕೆ ನೀಡಿದ್ದೆ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿಲ್ಲ’ ಎಂದೂ ಮಾತು ಬದಲಿದ್ದಾರೆ.

ಪಕ್ಷದ ಶಾಸಕನ ಹೇಳಿಕೆ ವಿವಾದ ಸೃಷ್ಟಿ ಮಾಡುತ್ತಿದ್ದಂತೆ ಟ್ವೀಟ್‌ ಮಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ‘ಹೇಳಿಕೆಗೆ ಕುರಿತಂತೆ ವಿವರಣೆ ಕೇಳಿ ಸೋಮಶೇಖರ್‌ಗೆ ಷೋಕಾಸ್ ನೋಟಿಸ್ ನೀಡಲು ದಿನೇಶ್ ಗುಂಡೂರಾವ್‌ಗೆ ಸೂಚಿಸಿದ್ದೇನೆ. ಸಮರ್ಪಕ ಉತ್ತರ ನೀಡದಿದ್ದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಅಶಿಸ್ತು ಸಹಿಸುವುದಿಲ್ಲ’ ಎಂದೂ ಹೇಳಿದ್ದರು.

ಬಿಜೆಪಿ ಸವಾಲು: ಸಮ್ಮಿಶ್ರ ಸರ್ಕಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ‘ಆಪರೇಷನ್ ಕಮಲ’ದ ಆರೋಪ ಮಾಡುತ್ತಿದ್ದ ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‍ನ ನಿಜಬಣ್ಣ ಈಗಲಾದರೂ ಅರ್ಥವಾಗಿರುವುದು ಸಂತೋಷ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಕಾಂಗ್ರೆಸ್‌ಗಿಂತ ಬಿಜೆಪಿ ಮೇಲು’:ಅಧಿಕಾರಕ್ಕಾಗಿ ಹಾಗೂ ಮುಖ್ಯಮಂತ್ರಿ ಕುರ್ಚಿಗಾಗಿ ಜೆಡಿಎಸ್‌ ನಾಯಕರು ಯಾರ ಮನೆಯ ಬಾಗಿಲಿಗೂ ಹೋಗಲಿಲ್ಲ ಎಂಬುದನ್ನು ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ವಾಗ್ದಾಳಿ ನಡೆಸಿದರು.

‘ಈಗ ಮುಖ್ಯಮಂತ್ರಿ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಕುಮಾರಸ್ವಾಮಿ ಅವರು ನಮ್ಮ ರಕ್ತದ ಕಣಕಣಗಳಲ್ಲಿದ್ದಾರೆ. ಅವರು ನಮ್ಮ ಮುಖ್ಯಮಂತ್ರಿ’ ಎಂದರು.

ಬಿಜೆಪಿ ಜತೆಗೆ ಜೆಡಿಸ್‌ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ನಮ್ಮ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು.

‘ಸಿ.ಎಂ ಆಗಲ್ಲ’

ಮೈಸೂರು: ‘ಜೆಡಿಎಸ್‌ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ ಆ ಪಕ್ಷದವರಿಗೇ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಹೀಗಾಗಿ, ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ನಮ್ಮ ಶಾಸಕರನ್ನು ನಾವು ನಿಯಂತ್ರಿಸಬೇಕೇ ಹೊರತು, ಜೆಡಿಎಸ್‌ ಪಕ್ಷದವರು ನಿಯಂತ್ರಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದ ಅವರು, ‘ಈ ವಿಚಾರದ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ. ಸರ್ಕಾರದಲ್ಲಿ ಗೊಂದಲ ಇಲ್ಲ’ ಎಂದರು.

***

ಹುದ್ದೆ ತೊರೆಯಲು ಸಿದ್ಧವೆಂಬ ಕುಮಾರಸ್ವಾಮಿ ಹೇಳಿಕೆ ಜೆಡಿಎಸ್‌– ಕಾಂಗ್ರೆಸ್‌ ಒಳಜಗಳವನ್ನು ಎತ್ತಿ ತೋರಿಸುತ್ತದೆ. ಇದು ಕುಮಾರಸ್ವಾಮಿಯವರ ಬ್ಯಾಕ್‌ಮೇಲ್‌ ತಂತ್ರವೂ ಹೌದು
ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಮೈತ್ರಿ ಸರ್ಕಾರದ ಲಕ್ಷಣ ರೇಖೆ ಯಾರು ಮೀರಬಾರದು. ಸರ್ಕಾರದ ವಿರುದ್ಧ ಮುಂದೆ ಶಾಸಕರು, ಮಂತ್ರಿಗಳು ಮಾತನಾಡಬಾರದು. ಪಕ್ಷದ ಶಿಸ್ತು ಎಲ್ಲರೂ ಪಾಲಿಸಬೇಕು.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಕಾರಿ ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು
ವೈಎಸ್‌.ವಿ. ದತ್ತ, ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT