ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವೇದಿಕೆ ಕಲ್ಪಿಸಲು ಸಿದ್ಧ

7

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವೇದಿಕೆ ಕಲ್ಪಿಸಲು ಸಿದ್ಧ

Published:
Updated:

ಧಾರವಾಡ: ‘ಶಿಕ್ಷಕರ ಸಮಸ್ಯೆಗಳು ಹಾಗೂ ಶಿಕ್ಷಕರ ಸಂಘದ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು, ಚುನಾಯಿತರು, ಶಿಕ್ಷಣ ತಜ್ಞರು ಹಾಗೂ ಸಂಘದ ಪದಾಧಿಕಾರಿಗಳು ಒಟ್ಟಿಗೆ ಕುಳಿತು ಕಾನೂನು ಚೌಕಟ್ಟಿನಲ್ಲಿ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಲು ಬದ್ಧ’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಜಾಸ್ನೇಹಿ ಆಡಳಿತ, ಆಡಳಿತದಲ್ಲಿ ದಕ್ಷತೆ, ಗುಣಾತ್ಮಕ ಶಿಕ್ಷಣ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ಅವರಿಗೆ ಶಿಕ್ಷಕರ ಸಂಘ ನೀಡಿದ 32 ಬೇಡಿಕೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.

‘ಕಾನೂನು ಚೌಕಟ್ಟಿನಲ್ಲಿ ಬೇಡಿಕೆ ಈಡೇರಿಕೆ ಸಾಧ್ಯವಿದ್ದರೆ ಅದನ್ನು ನಾನು ಮಾಡಿಕೊಡುತ್ತೇನೆ. ಇಲ್ಲವಾದಲ್ಲಿ, ಸೌಹಾರ್ದತೆಯಿಂದ ಪರಸ್ಪರ ಒಂದಷ್ಟು ಬಿಟ್ಟುಕೊಡುವ ಮೂಲಕ ನಾವೇ ಹೊಂದಾಣಿಕೆ ಮೂಲಕ ಸಾಗೋಣ’ ಎಂದರು.

‘ಇಲಾಖೆಯ ಮುಖ್ಯಗುರಿ ಮಕ್ಕಳ ಸರ್ವತೋಮುಖ ಬೆಳವಣಿಗೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿ ಕೇಂದ್ರಿತ ಕಾರ್ಯಚಟುವಟಿಕೆಗಳು ಇರುತ್ತವೆಯೇ ಹೊರತು, ಶಿಕ್ಷಕರ ಕೇಂದ್ರಿತ ಕಾರ್ಯಕ್ರಮಗಳು ಆಗಬಾರದು. ಅದು ಇಲಾಖೆಗೆ ಅಪಾಯ. ಹೀಗಾಗಿ ಇದಕ್ಕೆ ಪೂರಕ ಕಾರ್ಯಕ್ರಮಗಳು ಇಲಾಖೆಯಲ್ಲಿ ಆಗಬೇಕು’ ಎಂದು ಮಹೇಶ್ ಹೇಳಿದರು.

‘ಕಡ್ಡಾಯ ಶಿಕ್ಷಣ ಹಕ್ಕು ಮಕ್ಕಳಿಗೆ ಇದೆ. ಆದರೆ ಗುಣಾತ್ಮಕ ಶಿಕ್ಷಣ ಪಡೆಯುವುದು ಮಗುವಿನ ಹಕ್ಕು ಅಲ್ಲದಿದ್ದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅದು ನಮ್ಮ ಕರ್ತವ್ಯ ಎಂದೇ ಭಾವಿಸಬೇಕಿದೆ. ಶಿಕ್ಷಕರು ಬದಲಾಗಬೇಕು. ಗುಣಾತ್ಮಕ, ಕ್ರಿಯಾತ್ಮಕವಾಗಿ ಪಾಠ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಅವರ 32 ಬೇಡಿಕೆಗಳ ಸುದೀರ್ಘ ಪಟ್ಟಿಯನ್ನು ಸಚಿವರು ನೀಡಿ, ‘ಪರಸ್ಪರ ವರ್ಗಾವಣೆಗೆ ಯಾವುದೇ ಷರತ್ತು ವಿಧಿಸಬಾರದು. ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಬೇಕು. 1ನೇ ತರಗತಿಗೆ ದಾಖಲಾಗುವ ಮಗುವಿನ ವಯಸ್ಸು 5 ವರ್ಷಕ್ಕೆ ಮಿತಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು. 22ಸಾವಿರ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮುಖ್ಯೋಪಾಧ್ಯಾಯರನ್ನು ನೇಮಿಸಬೇಕು. ಶಿಕ್ಷಕರಿಗೆ ಹೊರೆ ಹೆಚ್ಚಾಗಿದ್ದು, ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಕರನ್ನು ಪಾಠ ಮಾಡಲು ಮಾತ್ರ ಬಳಸಿಕೊಳ್ಳುವಂತಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಗುರಿಕಾರ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಕೆ.ರಾಮದುರ್ಗ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !