ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಗೆಳೆಯನನ್ನು ನೆನೆದು ಕಣ್ಣೀರಿಟ್ಟ ಜ್ಯೂಲಿ ಲಕ್ಷ್ಮಿ

Last Updated 25 ನವೆಂಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಬರೀಷ್‌ ಅವರ ಮೊದಲ ಭೇಟಿ ಈಗಲೂ ನೆನಪಿದೆ. ‘ಅಂತ’ ಸಿನಿಮಾದಲ್ಲಿ ಅವರ ಜೊತೆಗೆ ಪಾತ್ರ ಮಾಡಬೇಕೆಂದು ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದರು. ಅದಕ್ಕೆ ಮುಂಚೆಯೇ ಪ್ರೀಮಿಯರ್ ಸ್ಟುಡಿಯೋದಲ್ಲಿ ನಾನು ಒಂದು ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾಗ ಅಂಬರೀಷ್‌ ಅಲ್ಲಿಗೆ ಇನ್ಯಾವುದೋ ಕೆಲಸಕ್ಕೆಂದು ಬಂದಿದ್ದರು. ನನ್ನನ್ನು ನೋಡಿ ನಮಸ್ಕಾರ.. ಎಂದು ಗಟ್ಟಿ ಧ್ವನಿಯಲ್ಲಿ ಹೇಳಿ ಹೋದರು. ನನಗೆ ಅವರು ಯಾರು ಎಂದು ಗೊತ್ತಿಲ್ಲ. ಯಾರ್ರೀ ಇವರು, ಅಲ್ಲಿಂದ ಬಂದು ನಮಸ್ಕಾರ ಅಂತ ಹೇಳಿ ಹೋದರು ಎಂದು ಪಕ್ಕದವರನ್ನು ಕೇಳಿದೆ. ಅವರೇ ಅಂಬರೀಷ್‌ ಮೇಡಂ ಎಂದರವರು. ನಾನು ಯಾರೂಂತ ಕೇಳ್ತೀರೇನ್ರೀ.. ನಾನು ಅಂಬರೀಷ್‌ ಅಂತ ನಾನೇ ಹೇಳ್ಳಿಲ್ವಾ.. ಎಂದು ದೂರದಿಂದಲೇ ಅವರು ಕೂಗಿದರು! ಅಪ್ಪಾ ಎಷ್ಟೊಂದು ಫ್ರೆಂಡ್ಲೀ ಮನುಷ್ಯ ಎಂದು ಆಗಲೇ ಅಂದುಕೊಂಡೆ.

– ಅಂಬರೀಷ್‌ ಅವರ ಹಲವು ವರ್ಷಗಳ ಗೆಳೆತನವನ್ನು ನಟಿ ಜ್ಯೂಲಿ ಲಕ್ಷ್ಮಿ ಹನಿಗಣ್ಣಾಗಿ ವಿವರಿಸಿದ್ದು ಹೀಗೆ. ತಮ್ಮ ಗೆಳೆತನದ ‘ನಾನು ಮೈಸೂರಿಗೆ ಹೋದಾಗ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದುದು. ಬೇರೆ ಕಡೆ ಉಳಿದುಕೊಳ್ಳಲು ಅವರು ಬಿಡುತ್ತಲೇ ಇರಲಿಲ್ಲ. ಯಾರಿಗೂ ನೋಯಿಸುವ ಮನುಷ್ಯ ಅವರಲ್ಲ. ಏನೇ ಕೆಲಸ ಇದ್ದರೂ ಎಲ್ಲರ ನೆರವಿಗೂ ಬರುತ್ತಿದ್ದವರು.

ಒಮ್ಮೆ ತಡರಾತ್ರಿ ನಾನು, ಅಂಬರೀಷ್‌, ವಿಷ್ಣು, ಶಂಕರ್‌ನಾಗ್‌, ಆರುಂಧತಿ ನಾಗ್‌, ವಿಜಯಲಕ್ಷ್ಮಿ ಸಿಂಗ್‌ ಎಲ್ಲರೂ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆ ಪಕ್ಕದ ಚೈನೀಸ್‌ ಹೋಟೆಲಲ್ಲಿ ಊಟ ಮಾಡಿ ನಡೆದುಕೊಂಡು ಹೋಗುತ್ತಿದ್ದೆವು. ಪೊಲೀಸರು ತಡೆದು ಏನ್ರೀ ಇಷ್ಟುಹೊತ್ತಿಗೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅಂಬರೀಷ್‌ ನನ್ನ ಮುಖವನ್ನು ಆ ಪೊಲೀಸರಿಗೆ ತೋರಿಸಿ ಇವರನ್ನು ನೋಡಿದ್ರೆ ನಿಮಗೆ ಹೇಗೆ ಕಾಣಿಸುತ್ತಿದೆ? ಇವರು ಹೀಗೆ ಸುತ್ತಾಡುವವರೇನ್ರೀ, ಊಟ ಮುಗಿಸಿ ಬರುತ್ತಿದ್ದೇವಪ್ಪಾ.. ಎಂದು ರೋಪ್‌ ಹಾಕಿದರು. ಅದನ್ನೆಲ್ಲ ನೆನೆಸಿಕೊಂಡರೆ ಈಗಲೂ ನಗು ಬರುತ್ತೆ. ಯಾವಾಗ್ಲೂ ಹುಡುಗಾಟ ಅವರದ್ದು.

‘ಭಾನುವಾರ ನಡೆಯುವ ಕಲಾವಿದರ ಸಂಘದ ಸಭೆಗೆ ಬರಲಿಲ್ಲಾಂದ್ರೆ ನೋಡು ಎಂದು ಫೋನ್‌ನಲ್ಲಿ ನನಗೆ ಮೊನ್ನೆ ಜೋರು ಮಾಡಿದ್ದರು. ಖಂಡಿತಾ ಬರ್ತೀನಿ ಎಂದಿದ್ದೆ. ಏನ್ಮಾಡ್ತಿದ್ದೀರಿ ಎಂದು ಕೇಳಿದಾಗ ಸಿಗರೇಟ್‌ ಸೇದ್‌ತಿದೀನಿ ಎಂದರು. ಅಯ್ಯೊ ಮೈ ಹುಷಾರಿಲ್ಲ ಆದ್ರೂ ಸಿಗರೇಟ್ ಏಕೆ ಸೇದುತ್ತಿದ್ದೀರಿ.. ಎಂದು ಕೇಳಿದರೆ, ಏನ್‌ ಇದನ್ನು ಬಿಟ್ರೆ ಇನ್ನೆರಡು ವರ್ಷ ಹೆಚ್ಚು ಬದುಕಬಹುದು ಅಷ್ಟೇ ತಾನೆ. ಎಲ್ಲ ಕೆಲಸಗಳನ್ನೂ ಬೇಗನೇ ಮುಗಿಸಿದ್ದೀನಿ.. ಎಂದು ನನಗೇ ಜೋರು ಮಾಡಿದರು.’

‘ಅವರು ಹೋಗಿದ್ದಾರೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಅವರು ಕರ್ನಾಟಕವನ್ನು ಬಿಟ್ಟು ಹೋಗುವುದಿಲ್ಲ. ಸುಮಲತಾಳನ್ನು ರಾಣಿ ತರಹ ನೋಡಿಕೊಂಡರು. ಅವರು ಈ ದುಃಖವನ್ನು ಹೇಗೆ ಸಹಿಸುತ್ತಾರೋ? ರಾಕ್‌ಲೈನ್‌ ತಮ್ಮನ ತರಹ ಇದ್ದರು. ಅವರು ಹೇಗೆ ದುಃಖವನ್ನು ತಡೆದುಕೊಳ್ತಾರೋ? ನನಗಂತೂ ಒಳ್ಳೆಯ ಗೆಳೆಯ. ಒಂದು ಸಲ ರಾತ್ರಿ ಒಂಬತ್ತು ಗಂಟೆಗೆ ನನ್ನ ಚೆನ್ನೈ ಫ್ಲೈಟ್‌ ಇತ್ತು. ನನ್ನ ಕಾರು ರಾಮನಗರ ಬಳಿ ಕೆಟ್ಟುನಿಂತಿತು. ಆಗ ಮೊಬೈಲ್ ಇರಲಿಲ್ಲ. ಅಲ್ಲೇ ಇದ್ದ ಸಣ್ಣ ಹೋಟೆಲ್ಲಿಗೆ ಹೋಗಿ ಅಂಬರೀಷ್‌ ಅವರಿಗೆ ಫೋನ್‌ ಮಾಡಬೇಕು ಎಂದೆ. ಅವರು ಯಾರೋ, ತಕ್ಷಣ ಫೋನ್‌ ಮಾಡಿದರು. ಅರ್ಧ ಗಂಟೆಯಲ್ಲಿ ಕಾರಿನಲ್ಲಿ ಅಂಬರೀಷ್‌ ಮತ್ತು ಬಾಬು ಬಂದರು. ಅದ್ಯಾವ ವೇಗದಲ್ಲಿ ಕಾರು ಓಡಿಸಿದರೋ.. ನಾನಂತೂ ಹಿಂದಿನ ಸೀಟಿನಲ್ಲಿ ಕಣ್ಣು ಮುಚ್ಚಿ ಕುಳಿತಿದ್ದೆ. ಸರಿಯಾದ ಸಮಯಕ್ಕೆ ನನ್ನನ್ನು ಏರ್‌ಪೋರ್ಟ್‌ಗೆ ತಲುಪಿಸಿದರು.’

ಮಾತನಾಡುತ್ತಾ ಲಕ್ಷ್ಮಿ ಗದ್ಗದಿತರಾಗುತ್ತಿದ್ದರು. ‘ಅಂಬಿ ಎಲ್ಲಿ ಹೋದೆ? ಯಾಕೆ ಹೋದೆ.. ಇಲ್ಲ ನನಗೆ ಹೆಚ್ಚು ಮಾತನಾಡಲು ಕಷ್ಟವಾಗುತ್ತದೆ’ ಎಂದು ಮಾತು ನಿಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT