ಗುರುವಾರ , ನವೆಂಬರ್ 14, 2019
22 °C

ರಿಯಲ್‌ ಎಸ್ಟೇಟ್‌; ಉಡುಗಿದ ಉತ್ಸಾಹ

Published:
Updated:
Prajavani

ಬೆಂಗಳೂರು: ‌ಆರ್ಥಿಕತೆಯಲ್ಲಿ ಕಂಡು ಬಂದಿರುವ ಮಂದಗತಿ ಪ್ರಗತಿ ಹಾಗೂ ಬೇಡಿಕೆ ಕುಸಿತದ ಲಕ್ಷಣಗಳು ರಾಜ್ಯದ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ವಸತಿ ನಿರ್ಮಾಣ (ರಿಯಲ್‌ ಎಸ್ಟೇಟ್‌) ವಲಯದಲ್ಲಿ ಮಾರಾಟ ಮತ್ತು ಖರೀದಿ ಕುಸಿತದ ಆತಂಕ ಮೂಡಿಸಿವೆ.

ನೋಟು ರದ್ದತಿ, ಜಿಎಸ್‌ಟಿ ಜಾರಿ ಮತ್ತು ರಿಯಲ್‌ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ –2016 (ರೇರಾ) ನಿಬಂಧನೆಗಳ ಪ್ರಭಾವದಿಂದ ಹೊರ ಬಂದು ಚೇತರಿಕೆಯ ಹಾದಿಗೆ ಮರಳುತ್ತಿರುವ ಹಂತದಲ್ಲಿಯೇ ಈ ಬಿಕ್ಕಟ್ಟು ಎದುರಾಗಿದೆ. ಇದು ವಸತಿ ನಿರ್ಮಾಣ ಚಟುವಟಿಕೆಗಳನ್ನೇ ನೆಚ್ಚಿಕೊಂಡಿರುವ ಸಿಮೆಂಟ್‌, ಪೇಂಟ್ಸ್‌, ಹಾರ್ಡ್‌ವೇರ್‌, ಸ್ನಾನದ ಮನೆ ಪರಿಕರ ಮತ್ತಿತರ ಪೂರಕ ವಲಯಗಳ ವಹಿವಾಟಿನ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಹೊಸ ವಸತಿ ಯೋಜನೆಗಳ ನಿರ್ಮಾಣ ಚಟುವಟಿಕೆ ಮತ್ತು ಖರೀದಿ ನಿರ್ಧಾರಗಳು ಕಡಿಮೆಯಾಗಿವೆ.

ಇದನ್ನೂ ಓದಿ: ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

ಒಟ್ಟಾರೆ ವ್ಯವಸ್ಥೆಯಲ್ಲಿನ ನಿರುತ್ಸಾಹದ ಮನಸ್ಥಿತಿಯು ವಸತಿ ಯೋಜನೆಗಳ ಮಾರಾಟ ಮತ್ತು ಖರೀದಿ ವಹಿವಾಟಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಫ್ಲ್ಯಾಟ್‌ ಖರೀದಿದಾರರಲ್ಲಿ ಅನಿಶ್ಚಿತ ಮನೋಭಾವನೆ ಮನೆ ಮಾಡಿದೆ. ಮನೆ ಖರೀದಿಗೆ ಖರ್ಚು ಮಾಡುವ ಧೈರ್ಯ ತೋರುತ್ತಿಲ್ಲ. ಆತ್ಮವಿಶ್ವಾಸ ಕುಸಿದಿದೆ. ಖರೀದಿ ಉತ್ಸಾಹ ಉಡುಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟು ದೇಶದಾದ್ಯಂತ ವಸತಿ ಯೋಜನೆಗಳ ನಿರ್ಮಾಣ ಚಟುವಟಿಕೆಗಳನ್ನು ನಿಧಾನಗೊಳಿಸಿದೆ. ಬೆಂಗಳೂರಿನ ಮಾರುಕಟ್ಟೆಯೂ ಇದಕ್ಕೆ ಹೊರತಾಗಿಲ್ಲ.

ಅರ್ಥ ವ್ಯವಸ್ಥೆಯಲ್ಲಿನ ವಿವಿಧ ವಲಯಗಳಲ್ಲಿನ ನಿಧಾನ ಪ್ರಗತಿ ಮತ್ತು ಬೇಡಿಕೆ ಕುಸಿತವು ಸಹಜವಾಗಿಯೇ ಈ ವಲಯದಲ್ಲಿಯೂ ಪ್ರತಿಫಲನಗೊಂಡಿದೆ. ನಗದುತನ ಕೊರತೆಗೆ ಹೊಸ ಯೋಜನೆಗಳ ಆರಂಭ ನಿಧಾನಗೊಂಡಿದೆ.

‘ಉದ್ದಿಮೆಯಲ್ಲಿ ನಗದುತನ ಅಲಭ್ಯತೆ ಸಮಸ್ಯೆ ಇರುವುದು ನಿಜ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್‌ಬಿಎಫ್‌ಸಿ) ಉದ್ಭವಿಸಿರುವ ಸಾಲ ಮರುಪಾವತಿಸದ ಬಿಕ್ಕಟ್ಟಿನಿಂದ ರಿಯಲ್‌ ಎಸ್ಟೇಟ್‌ ವಹಿವಾಟು ಖಂಡಿತವಾಗಿಯೂ ಬಾಧಿತವಾಗಿದೆ. ಹೊಸ ವಸತಿ ಯೋಜನೆಗಳನ್ನು ಆರಂಭಿಸಲು ಸಾಲವು ಸುಲಭವಾಗಿ ಸಿಗುತ್ತಿಲ್ಲ. ಇಡೀ ಉದ್ದಿಮೆಯು ನಗದು ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದೆ. ಉದಾಹರಣೆಗೆ ₹ 100 ಕೋಟಿ ವೆಚ್ಚದ ಯೋಜನೆಗೆ ₹ 70 ಕೋಟಿಗಳಿಂದ ₹ 80 ಕೋಟಿವರೆಗೆ ‘ಎನ್‌ಬಿಎಫ್‌ಸಿ’ ಸಾಲ ನೆಚ್ಚಿಕೊಳ್ಳಲಾಗಿರುತ್ತದೆ. ಈ ಸಾಲ ಈಗ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ನಿರ್ಮಾಣ ಸಂಸ್ಥೆಗಳು ಹೊಸ ಯೋಜನೆಗಳನ್ನು ಆರಂಭಿಸುವುದನ್ನು ನಿಧಾನ ಮಾಡಿವೆ.

‘ಫ್ಲ್ಯಾಟ್‌ ಖರೀದಿಸಲು ಆರಂಭಿಕ ಹೂಡಿಕೆಗೆ ಅಗತ್ಯ ಇರುವಷ್ಟು ಹಣ ಜನರ ಬಳಿ ಇದೆ. ಆದರೆ, ಅದನ್ನು ವೆಚ್ಚ ಮಾಡಲು ಅವರು ಹಿಂದೇಟು ಹಾಕುತ್ತಿದ್ದಾರೆ. ಮುಂಬರುವ ದಿನಗಳು ಹೇಗಿರಲಿವೆ ಎನ್ನುವ ಆತಂಕ ಅವರಲ್ಲಿ ಮನೆ ಮಾಡಿದೆ. ಕೆಲಸದ ಅಭದ್ರತೆ, ವೇತನ ಹೆಚ್ಚಳದ ಅನಿಶ್ಚಿತತೆಯ ಕಾರಣದಿಂದ ಖರೀದಿ ನಿರ್ಧಾರ ಮುಂದೂಡುತ್ತಿದ್ದಾರೆ. ಇದು ಫ್ಲ್ಯಾಟ್‌ಗಳ ಮಾರಾಟವನ್ನು ಸಹಜವಾಗಿಯೇ ತಗ್ಗಿಸಿದೆ’ ಎಂದು ಭಾರತೀಯ ರಿಯಲ್‌ ಎಸ್ಟೇಟ್ ನಿರ್ಮಾಣಗಾರರ ರಾಷ್ಟ್ರೀಯ ಒಕ್ಕೂಟದ (ಕ್ರೆಡಾಯ್‌) ಬೆಂಗಳೂರು ಘಟಕದ ಸಾರ್ವಜನಿಕ ಸಂಪರ್ಕ ಸಮಿತಿ ಸದಸ್ಯ ಆದರ್ಶ ನರಹರಿ ಅವರು ಅಭಿಪ್ರಾಯಪಟ್ಟಿದ್ದಾರೆ.

‘2011 ರಿಂದ 2015ರವರೆಗೆ ಬೆಂಗಳೂರಿನಲ್ಲಿ ಪ್ರತಿ ವರ್ಷ 40 ಸಾವಿರದಿಂದ 50 ಸಾವಿರ ಹೊಸ ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯ ಇರುತ್ತಿದ್ದವು. ನಂತರದ ವರ್ಷಗಳಲ್ಲಿ ಈ ಪ್ರಮಾಣ 30 ಸಾವಿರಕ್ಕೆ ಇಳಿದಿದೆ. ಹೊಸ ಯೋಜನೆಗಳು ಕಡಿಮೆಯಾಗಿರುವುದನ್ನು ಇದು ಸೂಚಿಸುತ್ತದೆ.

‘ಬೆಂಗಳೂರು ಮಾರುಕಟ್ಟೆಯ ಇನ್ನೊಂದು ವಿಶೇಷತೆ ಏನೆಂದರೆ, ಇಲ್ಲಿ ಐ.ಟಿ, ಬಿ.ಟಿ, ಸ್ಟಾರ್ಟ್‌ಅಪ್‌ ಸೇರಿದಂತೆ ಸೇವಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿವೆ. ಫ್ಲ್ಯಾಟ್‌ ಖರೀದಿದಾರರು ಬ್ಯಾಂಕ್‌ ಸಾಲಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುತ್ತಾರೆ. ಹೀಗಾಗಿ ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣ ನಿರಾಶಾದಾಯಕವಾಗಿಲ್ಲ. ಫ್ಲ್ಯಾಟ್‌ಗಳ ಮಾರಾಟ ಕುಸಿದಿದ್ದರೂ, ಅದು ದೇಶದಾದ್ಯಂತ ಇರುವ ಪರಿಸ್ಥಿತಿಗೆ ಭಿನ್ನವಾಗಿದೆ’ ಎಂದೂ ಹೇಳಲು ಅವರು ಇಷ್ಟಪಡುತ್ತಾರೆ.

‘ನಗದು ಪೂರೈಕೆ ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬ್ಯಾಂಕ್‌ಗಳಿಗೆ ಪುನರ್ಧನದ ನೆರವು ಒದಗಿಸುತ್ತಿದೆ. ರೆಪೊ ಬಡ್ಡಿ ದರ ಆಧಾರಿತ ಗೃಹ ಸಾಲ ನೀಡಲು ಬ್ಯಾಂಕ್‌ಗಳು ಮುಂದಾಗಿವೆ. ಇದರಿಂದ ಗೃಹ ಸಾಲ ಮತ್ತು ‘ಇಎಂಐ’ ಅಗ್ಗವಾ
ಗಲಿವೆ. ಮಾರುಕಟ್ಟೆಯಲ್ಲಿ ಫ್ಲ್ಯಾಟ್‌ಗಳ ಲಭ್ಯತೆಯೂ ಹೆಚ್ಚಿದೆ. ಹೀಗಾಗಿ ಫ್ಲ್ಯಾಟ್ ಖರೀದಿಸಲು ಇದು ಸಕಾಲವಾಗಿದೆ’ ಎಂದೂ ಅವರು ಹೇಳುತ್ತಾರೆ.

ಗರಿಷ್ಠ ಕಚೇರಿ ಸ್ಥಳಾವಕಾಶ

‘ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ಸ್ಥಳಾವಕಾಶದ (office space) ಬಳಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇದೆ. ಪ್ರತಿ ವರ್ಷ ಸರಾಸರಿ 1.5 ಕೋಟಿ ಚದರ ಅಡಿಗಳಷ್ಟು ಕಚೇರಿ ಸ್ಥಳಾವಕಾಶವನ್ನು ಇಲ್ಲಿ ಪ್ರತಿ ವರ್ಷ ಹೊಸದಾಗಿ ಗುತ್ತಿಗೆಗೆ ನೀಡಲಾಗುತ್ತಿದೆ. ಕಚೇರಿ ಆರಂಭಿಸುವ ಸೇವಾ ವಲಯದ ವಿವಿಧ ಕಂಪನಿಗಳಿಂದಾಗಿ ಪ್ರತಿ ವರ್ಷ ಸರಾಸರಿ 2 ಲಕ್ಷದಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯು ಶೀಘ್ರದಲ್ಲಿಯೇ ಚೇತರಿಕೆಯ ಹಾದಿಗೆ ಮರಳಲಿದೆ ಎಂಬುದು ಇದರರ್ಥವಾಗಿದೆ’ ಎಂದು  ಆದರ್ಶ ನರಹರಿ ಅವರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)