ಶನಿವಾರ, ಮಾರ್ಚ್ 6, 2021
32 °C
ಪ್ರತಿ ಮನೆಗೆ ₹10 ಲಕ್ಷ ವೆಚ್ಚ, ಮಾದರಿ ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಧಾರ

ಕೊಡಗು ಮರುನಿರ್ಮಾಣ: ತಿಂಗಳಲ್ಲಿ ನಿರಾಶ್ರಿತರಿಗೆ ಶಾಶ್ವತ ಸೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಡಿಕೇರಿ: ಭೂಕುಸಿತ, ಪ್ರವಾಹದಿಂದ ನೆಲೆ ಕಳೆದುಕೊಂಡವರಿಗೆ ಮಾದರಿ ಮನೆ ನಿರ್ಮಿಸಿಕೊಡಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ.

ಸರ್ಕಾರವು ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಪ್ರತಿ ಮನೆಗೆ ನೀಡುವ ₹ 6 ಲಕ್ಷ ಹಾಗೂ ಸಂಘ– ಸಂಸ್ಥೆಗಳ ದೇಣಿಗೆಯನ್ನು ಒಟ್ಟುಗೂಡಿಸಿ ₹10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ.

ಸಂಕಷ್ಟಕ್ಕೀಡಾದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸಂಘ, ಸಂಸ್ಥೆ, ದಾನಿಗಳನ್ನು ಕೋರಲಾಗಿತ್ತು. ಈಗ ಈ ವಿಚಾರ ಕೈಬಿಟ್ಟು ಸಾರ್ವಜನಿಕರ ಹಣವನ್ನೂ ಮನೆ ನಿರ್ಮಾಣಕ್ಕೆ ಬಳಕೆಮಾಡಿಕೊಳ್ಳಲು ನಿರ್ಧರಿಸಲಾಗಿದೆ.

‘ಬೆಂಗಳೂರಿನ ಕೆಂಗೇರಿ ಬಳಿಯ ಸೊಸೈಟಿ ಫಾರ್‌ ಡೆವಲಪ್‌ಮೆಂಟ್‌ ಅಂಡ್‌ ಕಾಂಪೋಸಿಟ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಸೂಕ್ತ ಜಾಗ ನೀಡಿದರೆ ಆಧುನಿಕ ತಂತ್ರಜ್ಞಾನ ಬಳಸಿ ತಿಂಗಳಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಎಂಜಿನಿಯರ್‌ ಭರವಸೆ ನೀಡಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಮಾದಾಪುರ, ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣಿಯಲ್ಲಿ ನಿವೇಶನ ಸಮತಟ್ಟು ಕಾರ್ಯ ಪ್ರಗತಿಯಲ್ಲಿದೆ’ ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದರು.

ಜಿಲ್ಲೆಯ ಪರಿಸರಕ್ಕೆ ಹೊಂದಾಣಿಕೆ ಆಗುವಂತೆ ಮನೆ ವಿನ್ಯಾಸ ಮಾಡಲಾಗಿದೆ. ಒಪ್ಪಿದ ಸಂತ್ರಸ್ತರಿಗೆ ಬಹುಬೇಗ ಮನೆ ಕಟ್ಟಿಕೊಡಲಾಗುವುದು. ಪ್ರತಿ ಮನೆಯಲ್ಲೂ ಎರಡು ಬೆಡ್‌ರೂಂ, ಹಾಲ್, ಅಡುಗೆ ಕೋಣೆ ಇರಲಿದೆ. ವಿಪರೀತ ಮಳೆಗೆ ಮಣ್ಣು ಮೃದುವಾಗಿದೆ. ತಂತ್ರಜ್ಞಾನ ಅಳವಡಿಸಿ ದೀರ್ಘಕಾಲ ಬಾಳಿಕೆ ಬರುವಂತಹ ಮನೆ ಕಟ್ಟಲಾಗುವುದು ಎಂದರು.

ಮಾಲೀಕರ ನೆರವು: ‘ತೋಟದ ಮಾಲೀಕರು ತಮ್ಮದೇ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿದ್ದು ಅವರಿಗೆ ನಿಗದಿತ ನೆರವು ನೀಡಲಾಗುವುದು. ಜಿಲ್ಲೆಯಲ್ಲಿ 4 ಸಾವಿರ ಎಕರೆ ಕಾಫಿ ತೋಟ ನಾಶವಾಗಿದ್ದು, ಜಾಗ ಕಳೆದುಕೊಂಡವರಿಗೆ ಪರಿಹಾರ ನೀಡುವ ವಿಚಾರ ಚರ್ಚೆಯ ಹಂತದಲ್ಲಿದೆ. ಸಮೀಕ್ಷೆ ಪೂರ್ಣವಾದ ಬಳಿಕ ಸರ್ಕಾರವೇ ತೀರ್ಮಾನಿಸಲಿದೆ’ ಎಂದು ಪರಿಹಾರ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಹೇಳುತ್ತಾರೆ.

ಸಮೀಕ್ಷೆಯ ಬಳಿಕ ನೆರವು: ಕೊಡಗಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಸಮೀಕ್ಷೆಗೆ ಕೇಂದ್ರ ತಂಡ ಶೀಘ್ರವೇ ಜಿಲ್ಲೆಗೆ ಭೇಟಿ ನೀಡಲಿದೆ. ಆ ವರದಿಯು ಕೇಂದ್ರಕ್ಕೆ ತಲುಪಿದ ಬಳಿಕ ನೆರವು ಘೋಷಿಸಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

‘ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ 1,709 ಮನೆಗಳಿಗೆ ₹ 5.45 ಕೋಟಿ ನೆರವು ವಿತರಿಸಲಾಗಿದೆ. ಜತೆಗೆ, ಕಾಫಿ ಬೆಳೆಗಾರರು ವಿವಿಧ ಬ್ಯಾಂಕ್‌ಗಳಲ್ಲಿ ಪಡೆದುಕೊಂಡಿದ್ದ ₹ 1,400 ಕೋಟಿ ಸಾಲವನ್ನೂ ಮನ್ನಾ ಮಾಡಬೇಕು. ಭೂಕುಸಿತದಿಂದ ಕಾಫಿ ತೋಟ ನಾಶವಾಗಿದ್ದು ಅಂತಹ ಬೆಳೆಗಾರರಿಗೂ ರಾಜ್ಯ ಸರ್ಕಾರ ಪರಿಹಾರ ನೀಡಬೇಕು’ ಆಗ್ರಹಿಸಿದರು.

**

ಕಬ್ಬಿಣದ ಶೆಡ್‌: ಸಂತ್ರಸ್ತರ ವಿರೋಧ

ಮಡಿಕೇರಿ: ಸಂತ್ರಸ್ತರಿಗೆ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವವರೆಗೂ ತಾತ್ಕಾಲಿಕ ಶೆಡ್‌ನಲ್ಲಿ ಆಶ್ರಯ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಶೆಡ್‌ನ ಮಾದರಿಯನ್ನು ಗಾಂಧಿ ಮೈದಾನದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ವಿರೋಧ ವ್ಯಕ್ತವಾಗಿದೆ.

ಒಂದು ಕೊಠಡಿಯುಳ್ಳ ಕಬ್ಬಿಣದ ಶೆಡ್‌ಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಅದರಲ್ಲಿ ವಾಸಿಸಲು ಸಾಧ್ಯವಿಲ್ಲ. ಕಿಟಕಿ ಇಲ್ಲದೆ ಗಾಳಿ, ಬೆಳಕು ಬರುವುದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. 

ಜಿಲ್ಲಾಡಳಿತದ ಫೇಸ್‌ಬುಕ್‌ ಖಾತೆಯಲ್ಲಿ ಶೆಡ್‌ನ ಮಾದರಿಯನ್ನು ಪೋಸ್ಟ್ ಮಾಡಲಾಗಿತ್ತು. ಅದನ್ನು ಗಮನಿಸಿದ ಸಂತ್ರಸ್ತರು, ಸಾರ್ವಜನಿಕರು ವಿರೋಧಿಸಿದ್ದರು. ವಿರೋಧ ವ್ಯಕ್ತವಾದ ಕಾರಣ ಶೆಡ್‌ ನಿರ್ಮಾಣ ಕಾರ್ಯವನ್ನು ಜಿಲ್ಲಾಡಳಿತ ಕೈಬಿಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು