ಸೋಮವಾರ, ಆಗಸ್ಟ್ 26, 2019
22 °C
ಜನಜೀವನ ಅಸ್ತವ್ಯಸ್ತ

ರೆಡ್‌ ಅಲರ್ಟ್: ಮಳೆಯ ಅಬ್ಬರ, 7ರಂದು ಶಾಲಾ ಕಾಲೇಜುಗಳಿಗೆ ರಜೆ

Published:
Updated:
Prajavani

ಉಡುಪಿ: ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 100ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ನೂರಾರು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದರಿಂದ ಇಡೀ ಜಿಲ್ಲೆ ಹಲವು ತಾಸು ಕತ್ತಲಲ್ಲಿ ಕಳೆಯುವಂತಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಬಂದ್‌: ಹೆಬ್ರಿ ಬಳಿಯ ಸೀತಾನದಿ ಮೈದುಂಬಿ ಹರಿಯುತ್ತಿದ್ದು ಉಡುಪಿ–ತೀರ್ಥಹಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ನೀರಿನಿಂದ ಜಲಾವೃತಗೊಂಡಿತ್ತು. ಸುಮಾರು ಮೂರು ತಾಸು ವಾಹನಗಳು ಸಂಚರಿಸಲಿಲ್ಲ. 

ಭಾರಿ ಮಳೆಗೆ ಜಿಲ್ಲೆಯಲ್ಲಿ 142 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ₹ 22 ಲಕ್ಷಕ್ಕೂ ಹೆಚ್ಚಿನ ಹಾನಿ ಸಂಭವಿಸಿದೆ. 6.68 ಕಿ.ಮೀ ವಿದ್ಯುತ್ ತಂತಿ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಬ್ರಹ್ಮಾವರದಲ್ಲಿ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ. ಹೆಬ್ರಿಯ ಶಿವಪುರದ ನಾಯರಕೋಡು ಬಳಿ ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದಿದೆ. ಮಕ್ಕಳಿಗೆ ಅಪಾಯವಾಗಿಲ್ಲ. ಬೈಂದೂರಿನಲ್ಲಿ ಸೌಪರ್ಣಿಕಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನದಿತೀರದ ನಿವಾಸಿಗಳು ಆತಂಕದಲ್ಲಿದ್ದಾರೆ.

ಪಡುಬಿದ್ರಿಯಲ್ಲಿ ಕಾಡಿಪತ್ನದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಸಮುದ್ರದಲ್ಲಿ ದೈತ್ಯ ಅಲೆಗಳು ಎದ್ದೇಳುತ್ತಿವೆ.  ಉಡುಪಿಯ ಅಜ್ಜರಕಾಡು ಬಳಿ ದೈತ್ಯ ಮರಗಳು ಬಿದ್ದು 4 ಗೂಡಂಗಡಿಗಳು ಸಂಪೂರ್ಣ ಹಾನಿಯಾಗಿವೆ.

Post Comments (+)