ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಡೀಲ್‌: ರೆಡ್ಡಿಗೆ ಸಿಸಿಬಿ ಡ್ರಿಲ್

ಜನಾರ್ದನ ರೆಡ್ಡಿ ದಿಢೀರ್ ಪ್ರತ್ಯಕ್ಷ l ತಡರಾತ್ರಿವರೆಗೂ ವಿಚಾರಣೆ
Last Updated 10 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಇ.ಡಿ ಡೀಲ್’ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಜ್ಞಾತ ಸ್ಥಳದಲ್ಲಿದ್ದ ಗಾಲಿ ಜನಾರ್ದನ ರೆಡ್ಡಿ, ಶನಿವಾರ ಮಧ್ಯಾಹ್ನ ದಿಢೀರನೇ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಿ, ತಡರಾತ್ರಿಯವರೆಗೂ ವಿಚಾರಣೆ ಎದುರಿಸಿದರು.

‘ಪ್ರಕರಣದ ತನಿಖಾಧಿಕಾರಿಗಳಾದ ಡಿಸಿಪಿ ಎಸ್.ಗಿರೀಶ್ ಹಾಗೂ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಬದಲಾವಣೆ ಮಾಡಬೇಕು’ ಎಂದು ರೆಡ್ಡಿ ಪರ ವಕೀಲರು ಹೈಕೋರ್ಟ್‌ಗೆ ಶುಕ್ರವಾರವಷ್ಟೇ ಅರ್ಜಿ ಸಲ್ಲಿಸಿದ್ದರು. ಆದರೆ, ಅದೇ ಅಧಿಕಾರಿಗಳು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಸಮ್ಮುಖದಲ್ಲಿ ರೆಡ್ಡಿ ಅವರನ್ನು ಮಧ್ಯಾಹ್ನ 4 ಗಂಟೆಯಿಂದ ತಡರಾತ್ರಿಯವರೆಗೂ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ‘ಡ್ರಿಲ್’ ಮಾಡಿದರು.

‘ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್ ಜತೆ ಯಾವುದೇ ಡೀಲ್ ನಡೆಸಿಲ್ಲ. ಅವರು ಎಲ್ಲ ರಾಜಕಾರಣಿಗಳ ಜತೆಗೂ ಫೋಟೊ ತೆಗೆಸಿಕೊಂಡಂತೆಯೇ, ನನ್ನೊಂದಿಗೂ ತೆಗೆಸಿಕೊಂಡಿದ್ದರು. ಅದೊಂದೇ ಕಾರಣಕ್ಕೆ ನನ್ನನ್ನು ಆರೋಪಿ ಎನ್ನುವುದು ಸರಿಯಲ್ಲ. ದಾನ–ಧರ್ಮ ಮಾಡಿಕೊಂಡು ಬರುತ್ತಿರುವ ನಮ್ಮ ಕುಟುಂಬಕ್ಕೆ ₹20 ಕೋಟಿ ಯಾವ ಲೆಕ್ಕವೂ ಅಲ್ಲ’ ಎಂದು ರೆಡ್ಡಿ ಹೇಳಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

‘ಬೆಂಗಳೂರಿನಲ್ಲಿರುವ ರೆಡ್ಡಿ ಸಮಾಜದ ಮುಖಂಡರೊಬ್ಬರು, ಜನವರಿಯಲ್ಲಿ ಫರೀದ್ ಅವರನ್ನು ನನಗೆ ಪರಿಚಯ ಮಾಡಿಸಿದ್ದರು. ಅದೇ ವೇಳೆ ಅವರು ನನ್ನೊಂದಿಗೆ ಫೋಟೊ ತೆಗೆಸಿಕೊಂಡಿದ್ದರು. ಅದಾದ ನಂತರ ಭೇಟಿಯಾಗಿರಲಿಲ್ಲ. ವ್ಯಕ್ತಿಗತವಾಗಲೀ, ವ್ಯವಹಾರಿಕವಾಗಲೀ ಅವರ ಜತೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿಲ್ಲ. ಚುನಾವಣೆ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದನ್ನು ನೋಡಿದರೆ, ಇದು ರಾಜಕೀಯ ಷಡ್ಯಂತ್ರವಲ್ಲದೇ ಮತ್ತೇನೂ ಅಲ್ಲ. ಯಾರಿಗೋ ಹೆದರಿ ಫರೀದ್ ನನ್ನ ವಿರುದ್ಧ ಹೇಳಿಕೆ ಕೊಟ್ಟಿರಬಹುದು’ ಎಂದು ರೆಡ್ಡಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಫೋಟೊ ತಿರುಚಲಾಗಿದೆ: ‘ತಾಜ್‌ ವೆಸ್ಟೆಂಡ್ ಹೋಟೆಲ್‌ನಲ್ಲಿ ನಾನು ಕೊಠಡಿಯೊಂದನ್ನು ಬಾಡಿಗೆ ಪಡೆದಿದ್ದೇನೆ. ಬೆಂಗಳೂರಿನಲ್ಲಿ ನನ್ನ ಮನೆ ಬಿಟ್ಟರೆ, ಆ ಹೋಟೆಲ್‌ನಲ್ಲೇ ತಂಗುತ್ತೇನೆ. ಇದೇ ಮಾರ್ಚ್‌ನಲ್ಲಿ ಒಂದು ದಿನ ಅಲ್ಲೇ ಉಳಿದುಕೊಂಡಿದ್ದೆ. ಆಗ ನನ್ನ ಆಪ್ತ ಸಹಾಯಕನನ್ನು ಸಂಪರ್ಕಿಸಿ ಫರೀದ್, ಅವರ ಸ್ನೇಹಿತ ಬ್ರಿಜೇಶ್ ರೆಡ್ಡಿ ಹಾಗೂ ಪುತ್ರ ಅಫಕ್ ಅವರು ಹೋಟೆಲ್‌ಗೆ ಬಂದರು. ನನ್ನನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ ಅವರು, ಸನ್ಮಾನ ಕೂಡ ಮಾಡಿದ್ದರು. ಆಗ ತೆಗೆದಿದ್ದ ಫೋಟೊಗಳನ್ನೇ ತಿರುಚಿ ‘ಡೀಲ್‌’ ಕತೆ ಕಟ್ಟಲಾಗಿದೆ’ ಎಂದು ರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಫರೀದ್‌ಗೆ ಬುಲಾವ್‌: ‘ರೆಡ್ಡಿ ಹಾಗೂ ಆಲಿಖಾನ್‌ ಅವರನ್ನು ಅಧಿಕಾರಿಗಳು, ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಅವರಿಬ್ಬರ ಹೇಳಿಕೆಯಲ್ಲಿ ಗೊಂದಲವಿದ್ದಿದ್ದರಿಂದ, ಪ್ರಕರಣದ ಮತ್ತೊಬ್ಬ ಆರೋಪಿ ಫರೀದ್‌ನನ್ನು ಕಚೇರಿಗೆ ಕರೆಸಿ ಮೂವರನ್ನು ಒಟ್ಟಿಗೆ ವಿಚಾರಣೆಗೆ ಒಳಪಡಿಸಿದರು’ ಎಂದು ಮೂಲಗಳು ಹೇಳಿವೆ.

‘ಆ್ಯಂಬಿಡೆಂಟ್ ಕಂಪನಿ ವಿರುದ್ಧದ ವಂಚನೆ ಪ್ರಕರಣದ ತನಿಖೆಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದಾಗಿ ಫರೀದ್ ಅವರಿಂದ ₹ 20 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಪಡೆದ ಆರೋಪದ ಬಗ್ಗೆಯೂ ಅಧಿಕಾರಿಗಳು ರೆಡ್ಡಿ ಹಾಗೂ ಆಲಿಖಾನ್‌ ಅವರನ್ನು ಪ್ರಶ್ನಿಸಿದರು. ಅವರ ವಿಚಾರಣೆಯನ್ನು ಸಿಸಿಬಿ ಸಿಬ್ಬಂದಿ, ಹ್ಯಾಂಡಿಕ್ಯಾಮ್‌ನಲ್ಲಿ ಚಿತ್ರೀಕರಿಸಿಕೊಂಡರು.

ಆದೇಶಕ್ಕೆ ಶಿರಬಾಗಿದ ರೆಡ್ಡಿ: ರೆಡ್ಡಿ ಪರ ವಕೀಲರು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ಜಾಮೀನು ನೀಡಲು ನಿರಾಕರಿಸಿದ್ದ ನ್ಯಾಯಾಲಯ, ‘ಹೀಗೆ ಪೊಲೀಸ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡು ಓಡಾಡಿದರೆ ಹೇಗೆ. ವಿಚಾರಣೆಗೆ ಹಾಜರಾಗಲು ಹೇಳಿ’ ಎಂದು ರೆಡ್ಡಿ ಪರ ವಕೀಲರಿಗೆ ಹೇಳಿತ್ತು.

ಕೋರ್ಟ್ ಸೂಚನೆ ಬಳಿಕವೂ ಅಜ್ಞಾತವಾಗಿದ್ದರೆ, ಪೊಲೀಸರು ಅದೇ ವಿಷಯದಡಿ ಆಕ್ಷೇಪಣೆ ಸಲ್ಲಿಸಬಹುದು ಎಂಬ ಲೆಕ್ಕಚಾರದಲ್ಲಿ ರೆಡ್ಡಿ ಶನಿವಾರವೇ ವಿಚಾರಣೆಗೆ ಹಾಜರಾದರುಎನ್ನಲಾಗುತ್ತಿದೆ.

**

ರಾಜಕಾರಣಿ ಮನೆಯಲ್ಲಿದ್ದರಾ ರೆಡ್ಡಿ?

‘ರೆಡ್ಡಿ ರಾಜ್ಯದ ಗಡಿ ಭಾಗದಲ್ಲಿರುವ ಆಂಧ್ರಪ್ರದೇಶದ ರಾಜಕೀಯ ನಾಯಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗುತ್ತಿದೆ. ಆ ವಿಷಯ ಗೊತ್ತಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳ ತಂಡ, ಶನಿವಾರ ರಾತ್ರಿ ಆ ನಾಯಕರ ಮನೆಗೆ ಹೋಗಿ ರೆಡ್ಡಿಯನ್ನು ಕರೆತರಲು ಮುಂದಾಗಿತ್ತು. ಅದು ಗೊತ್ತಾಗುತ್ತಿದ್ದಂತೆ, ರೆಡ್ಡಿಯೇ ಸಿಸಿಬಿ ಕಚೇರಿಗೆ ಬಂದಿದ್ದಾರೆ’ ಎಂದು ಮೂಲಗಳು ಹೇಳಿವೆ.

ಆ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, ‘ನಾನು ಎಲ್ಲಿಗೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೆ. ಕರೆಯದೇ ಎಲ್ಲಿಗೂ ಹೋಗಬಾರದು. ಶುಕ್ರವಾರವಷ್ಟೇ ನೋಟಿಸ್‌ ಬಂತು. ಇವತ್ತೇ ಸಿಸಿಬಿ ಕಚೇರಿಗೆ ಬಂದೆ. ಇದನ್ನು ಬಿಟ್ಟು ಉಳಿದೆಲ್ಲಾ ವಿಷಯ ಸುಳ್ಳು’ ಎಂದರು.

**

ಕಾದಿದ್ದಕ್ಕೆ ಕಾಯಿಸಿದರು!

‘ಈಗ ಸಿಸಿಬಿ ಕಚೇರಿಗೆ ಹೋಗುತ್ತೇನೆ’ ಎಂದು ರೆಡ್ಡಿ, ಮಧ್ಯಾಹ್ನ 2.30ಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಹರಿಬಿಟ್ಟಿದ್ದರಿಂದ ಅಲೋಕ್‌ ಕುಮಾರ್ ಹಾಗೂ ಡಿಸಿಪಿ ಗಿರೀಶ್, ತಕ್ಷಣ ಕಚೇರಿಗೆ ದೌಡಾಯಿಸಿದರು. ಒಂದು ತಾಸು ಕಾದರೂ ರೆಡ್ಡಿ ಬಾರದಿದ್ದಾಗ ಅಧಿಕಾರಿಗಳು, ಕಚೇರಿಯಿಂದ ಹೊರಟು ಹೋದರು. 3.45ಕ್ಕೆ ವಕೀಲರ ಜತೆ ರೆಡ್ಡಿ ಬಂದಾಗ ಸಿಬ್ಬಂದಿ ಅಧಿಕಾರಿಗಳಿಗೆ ಕರೆ ಮಾಡಿದರು. ಅರ್ಧ ತಾಸಿನ ಬಳಿಕ ಅಲೋಕ್‌ಕುಮಾರ್ ಹಾಗೂ ಗಿರೀಶ್‌, ಕಚೇರಿಗೆ ವಾಪಸಾದರು. ನಂತರವೇ ವಿಚಾರಣೆ ಶುರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT