ಬುಧವಾರ, ಜನವರಿ 22, 2020
16 °C

ಈಜಿಪ್ಟ್‌, ಟರ್ಕಿಯಿಂದ ಬೆಂಗಳೂರಿಗೆ ಬಂತು ಈರುಳ್ಳಿ: ಈಗ ಬೆಲೆ ಎಷ್ಟು ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಳೆದ ವಾರ ಕೆ.ಜಿಗೆ ₹ 200 ತಲುಪಿದ್ದ ಈರುಳ್ಳಿ ದರ ಸೋಮವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ಸೋಮವಾರ ಉತ್ಕಷ್ಟ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 140ಕ್ಕೆ ಮಾರಾಟವಾಗಿದೆ.

ಬೆಳಿಗ್ಗೆ 8ಗಂಟೆವರೆಗೆ ಮಾರುಕಟ್ಟೆಗೆ ಸುಮಾರು 60 ಸಾವಿರ ಚೀಲ ಈರುಳ್ಳಿ ಬಂದಿದೆ. ಇದರಲ್ಲಿ ಈಜಿಪ್ಟ್‌, ಟರ್ಕಿ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಗಳ ಈರುಳ್ಳಿ ಸೇರಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿಗೆ ಕ್ವಿಂಟಲ್‌ಗೆ ₹ 8 ಸಾವಿರದಿಂದ ₹ 12 ಸಾವಿರದವರೆಗೆ ಮಾರಾಟವಾಗಿದೆ.

ಅತ್ಯಲ್ಪ ಪ್ರಮಾಣದ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಈರುಳ್ಳಿ ಮಾತ್ರ ಕ್ವಿಂಟಲ್‌ಗೆ ₹ 14 ಸಾವಿರಕ್ಕೆ ಮಾರಾಟವಾಗಿದೆ. ಈಜಿಪ್ಟ್‌ ಹಾಗೂ ಟರ್ಕಿ ಈರುಳ್ಳಿ ಕ್ವಿಂಟಲ್‌ಗೆ ₹ 8ರಿಂದ 9ಸಾವಿರದವರೆಗೆ ಹರಾಜಾಗಿದೆ ಎಂದು ಎಪಿಎಂಪಿ ಮಾರುಕಟ್ಟೆಯ ಈರುಳ್ಳಿ ಮತ್ತು ಆಲೂಗೆಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ. ಉದಯಶಂಕರ್‌ ತಿಳಿಸಿದರು.

ಶನಿವಾರದವರೆಗೂ ಈರುಳ್ಳಿ ಆವಕ ಕಡಿಮೆ ಇತ್ತು. ಸೋಮವಾರ ಬೆಳಿಗ್ಗೆ 8ರವರೆಗೆ 60 ಸಾವಿರ ಚೀಲ ಬಂದಿದೆ. ಇದರಲ್ಲಿ 35 ಕೆ.ಜಿ ಹಾಗೂ 50 ಕೆ.ಜಿ ಚೀಲಗಳು ಸೇರಿವೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತಿದೆ. ಆವಕ ಹೆಚ್ಚಾದರೆ ಬೆಲೆಯೂ ತಗ್ಗಲಿದೆ ಎಂದು ವಿವರಿಸಿದರು.

ಮಾರುಕಟ್ಟೆಗೆ ಈ ಸಮಯದಲ್ಲಿ 1ರಿಂದ 1.25ಲಕ್ಷ ಚೀಲ ಈರುಳ್ಳಿ ಬರುತ್ತಿತ್ತು. ಮಳೆ ಹಾಗೂ ಪ್ರವಾಹದ ಕಾರಣಕ್ಕೆ ಈರುಳ್ಳಿ ಬೆಳೆ ಹಾಳಾಗಿದೆ. ಹೀಗಾಗಿ ಬೆಲೆ ದುಬಾರಿಯಾಗಿದೆ. ಜನವರಿವರೆಗೂ ಈರುಳ್ಳಿ ಧಾರಣೆಯಲ್ಲಿ ಏರಿಳಿತ ಇರುತ್ತದೆ. ಆನಂತರ ಕಡಿಮೆ ಆಗಬಹುದು ಎಂಬ ಅಭಿಪ್ರಾಯವನ್ನು ಉದಯ ಶಂಕರ್‌ ವ್ಯಕ್ತಪಡಿಸಿದರು.

ಈರುಳ್ಳಿ ಬೆಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರವೂ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಲೋಕಾಯುಕ್ತ ಸಂಸ್ಥೆಯೂ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು