ಭಾನುವಾರ, ಜನವರಿ 26, 2020
23 °C
ಕಲ್ಕುಳಿ ವಿಠಲ ಹೆಗ್ಡೆಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ: ಸಚಿವ ಸಿ.ಟಿ.ರವಿ ವಿರೋಧ

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿವಾದಕ್ಕೆ ತಿರುಗಿದೆ. ಸಮ್ಮೇಳನಕ್ಕೆ ಅನುದಾನ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ನಿರಾಕರಿಸಿದೆ.

ಶೃಂಗೇರಿಯಲ್ಲಿ ಇದೇ 10 ಮತ್ತು 11ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದೆ. ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಆಯ್ಕೆಗೆ ಪರ–ವಿರೋಧ ವ್ಯಕ್ತವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡದಂತೆ ತಡೆಯೊಡ್ಡಿದ್ದಾರೆ.

‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರಿಗೆ ಮನವಿ ಮಾಡಿದೆವು. ಸಮ್ಮೇಳನವನ್ನು ಮುಂದೂಡಲು ಅವರು ಸೂಚಿಸಿದರು. ಸಿದ್ಧತೆ ಮಾಡಿಕೊಂಡಿರುವುದನ್ನು ಗಮನಕ್ಕೆ ತಂದೆವು. ಜಿಲ್ಲಾ ಉಸ್ತುವಾರಿ ಸಚಿ
ವರಿಂದ ಪತ್ರ ತಂದರೆ ಮಾತ್ರ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು. ಇದೇ ಮೊದಲ ಬಾರಿಗೆ ಇಂತಹ ಷರತ್ತು ವಿಧಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮ್ಮೇಳನಕ್ಕೆ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಕಾರ್ಯಕಾರಿಣಿ ನಿರ್ಧಾರ. ಇದಕ್ಕೆ ಸಾರ್ವಜನಿಕರ, ಸಚಿವರ ಅಭಿಪ್ರಾಯ ಕೇಳಬೇಕಿಲ್ಲ. ಆಯ್ಕೆಗೆ ಬದ್ಧರಾಗಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅನುದಾನ ನೀಡದಿದ್ದರೂ ಸ್ಮರಣಿಕೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವೆಚ್ಚ ತಗ್ಗಿಸಿ ಸರಳವಾಗಿ ಸಮ್ಮೇಳನ ಮಾಡಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಸಮ್ಮೇಳನ ಮುಂದೂಡಲು ಸೂಚಿಸಿದ್ದೆ’

‘ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪರ–ವಿರೋಧ ವ್ಯಕ್ತವಾಗಿದೆ. ಸರ್ವಾನುಮತದ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಿಗೆ ತಿಳಿಸಿದ್ದೆ. ವಿವಾದ ತಿಳಿಯಾಗುವವರೆಗೆ ಸಮ್ಮೇಳನ ಮುಂದೂಡಿ ಎಂದು ಹೇಳಿದ್ದೆ. ಹೀಗಾಗಿ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈಗ ಆಯ್ಕೆ ಮಾಡಿರುವವರನ್ನೇ ಮುಂದುವರಿಸಿದರೆ ಸಮ್ಮೇಳನಕ್ಕೂ ಬರಲ್ಲ, ಸಹಕಾರ ನೀಡಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನೂ ಹಾಕಬೇಡಿ ಎಂದೂ ಹೇಳಿದ್ದೆ. ಆದರೂ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ದಾರೆ. ಸಮ್ಮೇಳನಕ್ಕೆ ಹೋಗುವುದಿಲ್ಲ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅನುದಾನ ಬಿಡುಗಡೆ ಮಾಡಬಾರದೆಂದು ಸೂಚನೆ ನೀಡಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷರಿಗೆ ಈ ವಿಷಯ ತಿಳಿಸಿದ್ದೇನೆ ಎಂದು ಪರಿಷತ್ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು