ಶುಕ್ರವಾರ, ಫೆಬ್ರವರಿ 28, 2020
19 °C
ಸಚಿವ ಅಂಗಡಿ ಅಭಿಯಾನ ನಡೆಸಿದ್ದ ಬಡಾವಣೆಯ ಮನೆಗಳ ಮುಂದೆ ಅಂಟಿಸಲಾಗಿದೆ

ಬೆಳಗಾವಿ| ಸಿಎಎ, ಎನ್‌ಆರ್‌ಸಿ ತಿರಸ್ಕರಿಸಿ ಸ್ಟಿಕ್ಕರ್‌

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರು ಕೆಲ ದಿನಗಳ ಹಿಂದೆ ಜಾಗೃತಿ ಅಭಿಯಾನ ನಡೆಸಿದ್ದ ಇಲ್ಲಿನ ಕೆಲವು ಬಡಾವಣೆಗಳಲ್ಲಿ ಈಗ ಸಿಎಎ ವಿರೋಧಿ ಸ್ಟಿಕ್ಕರ್‌ಗಳು ರಾರಾಜಿಸುತ್ತಿವೆ!

‘ಭಾರತದ ಪ್ರಜೆಗಳಾದ ನಾವು ಸಿಎಎ (ಪೌರತ್ವ (ತಿದ್ದುಪಡಿ) ಕಾಯ್ದೆ), ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯೆ ನೋಂದಣಿ) ಮತ್ತು ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ತಿರಸ್ಕರಿಸುತ್ತೇವೆ’ ಎಂಬ ಇಂಗ್ಲಿಷ್‌ ಒಕ್ಕಣೆ ಇರುವ ಸ್ಟಿಕ್ಕರ್‌ಗಳಿವೆ. ಇವನ್ನು ಮುಸ್ಲಿಂ ಬಾಹುಳ್ಯದ ಅಜಂ ನಗರದ ಅನ್ನಪೂರ್ಣವಾಡಿ, ಬಸವ ಕಾಲೊನಿಯ ಭಾಗಶಃ ಪ್ರದೇಶ, ಶಾಹೂನಗರದ ಮಾರುತಿ ಕಾಲೊನಿ‌, ಅಜಂನಗರ ಮುಖ್ಯರಸ್ತೆಯ ಸುತ್ತಮುತ್ತಲಿನ ಮುಸ್ಲಿಮರ ಮನೆಗಳ ಗೋಡೆ, ಗೇಟು, ಅಂಗಡಿಯಲ್ಲಿ ಸ್ಟಿಕ್ಕರ್‌ ಹಚ್ಚಲಾಗಿದೆ.

ಸುರೇಶ ಅಂಗಡಿ ಅವರು ಈ ಪ್ರದೇಶಗಳಲ್ಲಿ ಕೆಲವೆಡೆ ಕಾಯ್ದೆ ಬಗ್ಗೆ  ಜಾಗೃತಿ ಮೂಡಿಸುವ ಯತ್ನ ಮಾಡಿದ್ದರು. ಪ್ರಚಾರ ಸಾಮಗ್ರಿಯನ್ನು ಸಹ ಹಂಚಿದ್ದರು. ಈಗ ಅದೇ ಬಡಾವಣೆಯ ಜನರು ಕಾಯ್ದೆ ತಿರಸ್ಕರಿಸುವುದಾಗಿ ಸ್ಟಿಕ್ಕರ್‌ ಅಂಟಿಸಿದ್ದಾರೆ. ಇವುಗಳನ್ನು ಪೂರೈಸಿದವರು ಯಾರು ಎಂಬ ಮಾಹಿತಿ ಇಲ್ಲ.

‘ಕೆಲವು ಮುಖಂಡರು ಬಂದು ಸ್ಟಿಕ್ಕರ್‌ ಅಂಟಿಸಿದರು. ಬಿಜೆಪಿ ಸರ್ಕಾರವು ನಮ್ಮನ್ನು ದೇಶದಿಂದ ಓಡಿಸಲು, ಇಲ್ಲಸಲ್ಲದ ದಾಖಲೆ ಕೇಳಲಾಗುತ್ತದೆ. ನೀವು ಸಿಎಎಯನ್ನು ವಿರೋಧಿಸಬೇಕು ಎಂದರು. ನಾವು ಇಲ್ಲಿಯೇ ಹುಟ್ಟಿ ಬದುಕು ಕಂಡುಕೊಂಡಿದ್ದೇವೆ. ಸೌಹಾರ್ದದಿಂದ ಇದ್ದೇವೆ. ನಮಗೂ ದೇಶಾಭಿಮಾನವಿದೆ. ಆದರೆ, ನಮ್ಮನ್ನು ಅನುಮಾನದಿಂದ ನೋಡುತ್ತಿರುವುದು ಸರಿಯಲ್ಲ’ ಎಂದು ಅನ್ನಪೂರ್ಣವಾಡಿಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದರು.

‘ನಾವೂ ಭಾರತೀಯರೇ. ನಾವು ಯಾರಿಗೂ ತೊಂದರೆ ಕೊಟ್ಟವರಲ್ಲ. ಆದರೆ, ಏನೇನೋ ನೆಪಗಳನ್ನು ಒಡ್ಡಿ ಮುಸ್ಲಿಮರನ್ನು ಟಾರ್ಗೆಟ್‌ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಿಎಎ, ಎನ್‌ಪಿಆರ್‌ ಹಾಗೂ ಎನ್‌ಆರ್‌ಸಿಗೆ ನನ್ನ ವಿರೋಧವಿದೆ. ಗಣತಿಗೆ ಬಂದರೆ ಸಹಕರಿಸುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಜಂನಗರದ ನಿವಾಸಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು