ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ನಿರಾಶ್ರಿತರ ಪರಿಹಾರ ಕೇಂದ್ರ: ಅಂದು ಭಿಕ್ಷುಕರು; ಇಂದು ಅನ್ನದಾತರು

ರಾಗಿ, ಟೊಮೆಟೊ, ಮೆಣಸಿನಕಾಯಿ ಬೆಳೆದ ನಿರಾಶ್ರಿತರು
Last Updated 26 ಅಕ್ಟೋಬರ್ 2018, 20:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಒಪ್ಪೊತ್ತಿನ ಊಟಕ್ಕೂ ಮತ್ತೊಬ್ಬರ ಎದುರು ಕೈಚಾಚುತ್ತಿದ್ದವರು ಕೃಷಿಯಲ್ಲಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರಾಗಿ, ಟೊಮೆಟೊ ಬೆಳೆದು ಸರ್ಕಾರಕ್ಕೆ ಲಕ್ಷಗಟ್ಟಲೆ ಆದಾಯ ತರುತ್ತಿದ್ದಾರೆ. ಜೀವನಕ್ಕೆ ಅಗತ್ಯವಾದ ಆಹಾರ ಧಾನ್ಯ, ತರಕಾರಿಯನ್ನು ತಾವೇ ಬೆಳೆದುಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಹೋ.ಚಿ. ಬೋರಯ್ಯ ಬಡಾವಣೆಯ ನಿರಾಶ್ರಿತರ ಪರಿಹಾರ ಕೇಂದ್ರವು ಭಿಕ್ಷುಕರು, ನಿರಾಶ್ರಿತರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುತ್ತಿದೆ. ಇದು ಹಲವರಿಗೆ ಸ್ಫೂರ್ತಿ ತುಂಬುತ್ತಿದ್ದು, ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಉತ್ಸುಕರಾಗಿದ್ದಾರೆ.

14 ಎಕರೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಎರಡು ವರ್ಷಗಳಿಂದ ಕೃಷಿ, ಹೈನುಗಾರಿಕೆ ಆರಂಭಿಸಲಾಗಿದೆ. ಕಳೆದ ವರ್ಷ 12 ಕ್ವಿಂಟಲ್‌ ರಾಗಿ ಬೆಳೆದಿದ್ದ ನಿರಾಶ್ರಿತರು, ಈ ಬಾರಿ ಇತರ ಬೆಳೆಗಳಿಗೂ ಕೈಹಾಕಿದ್ದಾರೆ. ಹಸಿ ಮೆಣಸಿನ ಕಾಯಿ ಬೆಳೆದು ತಿಂಗಳ ಹಿಂದೆ ಸರ್ಕಾರಕ್ಕೆ ₹ 1.09 ಲಕ್ಷ ಅದಾಯ ಸಂದಾಯ ಮಾಡಿದ್ದಾರೆ. ಟೊಮೆಟೊ, ರಾಗಿ ಹಾಗೂ ಹುರುಳಿ ಬೆಳೆಗಳು ಜಮೀನಿನಲ್ಲಿ ನಳನಳಿಸುತ್ತಿವೆ.

ಪುರುಷರು ಮತ್ತು ಮಹಿಳೆಯರು ಸೇರಿ 256 ನಿರಾಶ್ರಿತರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ. ಬೆಳಿಗ್ಗೆ 6ಕ್ಕೆ ಪ್ರಾರ್ಥನೆ, ಯೋಗದೊಂದಿಗೆ ಆರಂಭವಾಗುವ ದಿನಚರಿ ರಾತ್ರಿ 8ಕ್ಕೆ ಭಜನೆಯ ಮೂಲಕ ಮುಕ್ತಾಯವಾಗುತ್ತದೆ.

‘ಕುರುಚಲು ಗಿಡ, ಕಲ್ಲುಗಳಿಂದ ತುಂಬಿದ್ದ ಬೆಟ್ಟವನ್ನು ಯಂತ್ರಗಳ ನೆರವಿನಿಂದ ಸಮತಟ್ಟು ಮಾಡಲು ವರ್ಷಗಳೇ ಹಿಡಿದವು. ಎರಡು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಸಿಕ್ಕಿತು. ನಿರಾಶ್ರಿತರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿದರೆ ಮಾನಸಿಕ ಆರೋಗ್ಯ ಸರಿಹೋಗ
ಬಹುದು ಅನಿಸಿತು. ಈ ಪ್ರಯೋಗ ಯಶಸ್ವಿಯೂ ಆಯಿತು’ ಎನ್ನುತ್ತಾರೆ ಕೇಂದ್ರದ ಅಧೀಕ್ಷಕ ಎಂ. ಮಹದೇವಯ್ಯ.

ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್‌ ಸೇರಿ ವಿವಿಧ ರಾಜ್ಯದ ನಿರಾಶ್ರಿತರು ಇಲ್ಲಿದ್ದಾರೆ. ಕೆಲವರಿಗೆ ಕೃಷಿ ಮಾಡಿದ ಅನುಭವಗಳೂ ಇವೆ. ಜಮೀನು, ಕೊಳವೆ ಬಾವಿ, ಬೆಳೆಯನ್ನು ಕಂಡು ಸಂತಸದಿಂದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

20 ಕುರಿ, 9 ಮೇಕೆ ಹಾಗೂ 4 ಹಸುಗಳು ಕೂಡ ಕೇಂದ್ರದಲ್ಲಿವೆ. ಇವುಗಳ ಪೋಷಣೆ ಮಾಡುವ ಜವಾಬ್ದಾರಿಯನ್ನು ನಿರಾಶ್ರಿತರು ವಹಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

* ನಿರಾಶ್ರಿತರ ಪರಿಹಾರ ಕೇಂದ್ರದಿಂದ ಸ್ವಾವಲಂಬಿ ಬದುಕು

* 256 ನಿರಾಶ್ರಿತರಿಗೆ ಆಶ್ರಯ

* ಹೈನುಗಾರಿಕೆಯೂ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT