ಮಾತುಕತೆ ಮೂಲಕ ಪರಿಹಾರ: ದೇವೇಗೌಡ

7
‘ಅಧ್ಯಕ್ಷರು– ಸದಸ್ಯರ ನೇಮಕ ವಿಷಯದಲ್ಲಿ ಸಣ್ಣಪುಟ್ಟ ಸಮಸ್ಯೆ ಇದೆ’

ಮಾತುಕತೆ ಮೂಲಕ ಪರಿಹಾರ: ದೇವೇಗೌಡ

Published:
Updated:

ಬೆಂಗಳೂರು:  ನಿಗಮ, ಮಂಡಳಿಗಳ ಹಂಚಿಕೆ ವಿಷಯದಲ್ಲಿ ಮಿತ್ರ ಪಕ್ಷಗಳ ನಡುವೆ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ. ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಾಗುವುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕುಳಿತು ಚರ್ಚೆ ಮಾಡಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂಪುಟದಲ್ಲಿ ನಮ್ಮ ಪಾಲಿನ ಎರಡು ಸ್ಥಾನಗಳು ಖಾಲಿ ಇವೆ. 1/2ರಷ್ಟು ನಿಗಮ– ಮಂಡಳಿಗಳಿವೆ. ಮೂರ್ನಾಲ್ಕು ನಿಗಮ–ಮಂಡಳಿಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಡುವುದಾಗಿ ರಾಜ್ಯದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಭರವಸೆ ನೀಡಿದ್ದಾರೆ. ನಮಗೆ ಒಂದು ಕೋಟಿ, ಎರಡು ಕೋಟಿ ಚಿಲ್ಲರೆ ಬಜೆಟ್‌ ಇರುವ ನಿಗಮ, ಮಂಡಳಿಗಳನ್ನು ಬಿಟ್ಟುಕೊಡಲಾಗಿದೆ. ಅದನ್ನೂ ಒಪ್ಪಿಕೊಳ್ಳಲು ಕಾರ್ಯಕರ್ತರು ತಯಾರಿದ್ದಾರೆ’ ಎಂದು ನುಡಿದರು.

ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಅತ್ಯಂತ ಸೂಚ್ಯವಾಗಿ ಪ್ರಸ್ತಾಪಿಸಿದ ದೇವೇಗೌಡರು, ‘ಜೆಡಿಎಸ್‌ಗೆ ಒಂದು ಸ್ಥಾನ ಬಂದಿದೆ; ಎರಡು ಸ್ಥಾನ ಬಂದಿದೆ ಎಂಬ ಚರ್ಚೆಗೆ ಹೋಗದೆ, ನಮಗೆ ಶಕ್ತಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಗಮನಕ್ಕೆ ತೆಗೆದುಕೊಂಡು ಸೀಟು ಹಂಚಿಕೆ ಮಾಡಬೇಕು’ ಎಂದು ಕಾಂಗ್ರೆಸ್‌ ನಾಯಕರಿಗೆ ಕಿವಿಮಾತು ಹೇಳಿದರು.

‘ಕಾಂಗ್ರೆಸ್‌ ನಾಯಕರು ನಿಮಗೆ ಕೇಳಿದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡದಿದ್ದರೆ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸುವುದೇ’ ಎಂಬ ಪ್ರಶ್ನೆಗೆ, ‘ಅತಿರೇಕದ ತೀರ್ಮಾನಗಳನ್ನು ಮಾಡದೆ ತಾಳ್ಮೆಯಿಂದ ಕಾಯುತ್ತೇವೆ’ ಎಂದು ಅವರು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !