ಶಿಶುವಿನಹಾಳದಲ್ಲಿ ‘ತಾತ್ವಿಕ ತೋಟ’ ನಿರ್ಮಾಣಕ್ಕೆ ಚಿಂತನೆ

7
ಶರೀಫರ ಜಯಂತ್ಯುತ್ಸವ ದ್ವಿ ಶತಮಾನೋತ್ಸವ ಆಚರಣೆ ಇಂದಿನಿಂದ

ಶಿಶುವಿನಹಾಳದಲ್ಲಿ ‘ತಾತ್ವಿಕ ತೋಟ’ ನಿರ್ಮಾಣಕ್ಕೆ ಚಿಂತನೆ

Published:
Updated:

ಹಾವೇರಿ: ಸಂತ ಶಿಶುವಿನಹಾಳ ಶರೀಫರ ಜಯಂತ್ಯುತ್ಸವದ ದ್ವಿಶತಮಾನೋತ್ಸವ ಆಚರಣೆ ಜುಲೈ 3ರಿಂದ ಆರಂಭಗೊಳ್ಳಲಿದ್ದು, ಶರೀಫಗಿರಿಯನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ತಾತ್ವಿಕ ತೋಟ’ ನಿರ್ಮಾಣಕ್ಕೆ ಯೋಜನೆ ರೂಪುಗೊಳ್ಳುತ್ತಿದೆ.

ಶರೀಫರ ಜೀವನ ಹಾಗೂ ಬೋಧಿಸಿದ ತತ್ವಗಳ ಸಮಗ್ರ ಚಿತ್ರಣ ನೀಡುವ ಈ ತೋಟದಲ್ಲಿ, ಅಂದಾಜು 20 ಅಡಿಗೊಂದರಂತೆ ಕಲ್ಲು ನೆಟ್ಟು, ಅದರ ಮೇಲೆ ಶರೀಫರ ತತ್ವಪದಗಳನ್ನು ಕೆತ್ತಲಾಗುವುದು ಹಾಗೂ ಅದರ ಕೆಳಗೆ  ತತ್ವಪದದ ಸಾರವನ್ನೂ ಸಂಕ್ಷಿಪ್ತವಾಗಿ ನೀಡಲಾಗುವುದು. ಶರೀಫ ಶಿವಯೋಗಿಗಳ ತೆಪ್ಪೋತ್ಸವ ನಡೆಯುವ ಕೆರೆಯ ಸಮೀಪದಲ್ಲಿ ‘ಬಯಲು ವಸ್ತು ಸಂಗ್ರಹಾಲಯ’ ನಿರ್ಮಿಸುವ ಹಾಗೂ ಕೆರೆಯ ಸುತ್ತ ಉದ್ಯಾನ ಅಭಿವೃದ್ಧಿ ಯೋಜನೆಯಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉದ್ಯಾನದ ನಡುವೆ ಶರೀಫರು ಹಾಗೂ ಗುರುಗೋವಿಂದ ಭಟ್ಟರ ಜೀವನದ ಸನ್ನಿವೇಶಗಳನ್ನು ಆಧರಿಸಿದ ಉಬ್ಬುಶಿಲ್ಪ, ಸಿಮೆಂಟ್ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದರು.

ಶಿಶುವಿನಹಾಳದ ಸಂಪರ್ಕ ರಸ್ತೆ ಅಭಿವೃದ್ಧಿ, ಯಾತ್ರಿ ನಿವಾಸ ನಿರ್ಮಾಣ, ಗುರು ಗೋವಿಂದ ಭಟ್ಟರು ಹಾಗೂ ಶರೀಫರ ಮೂರ್ತಿ ಸ್ಥಾಪನೆ, ಗದ್ದುಗೆಗಳ ನವೀಕರಣ, ಮಹಾದ್ವಾರದ ನಿರ್ಮಾಣ, ಸುತ್ತಲ ಆವರಣದ ಅಭಿವೃದ್ಧಿ, ಕಮಲ ಹೂವಿನ ಮಾದರಿಯ ಪ್ರಾರ್ಥನಾ ಮಂದಿರ ಹಾಗೂ ಅದರಲ್ಲಿ ಶರೀಫರು ಮತ್ತು ಗುರು ಗೋವಿಂದ ಭಟ್ಟರ ಜೀವನದ ದರ್ಶನ ನೀಡುವ ಉಬ್ಬು ಚಿತ್ರಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಕಳೆದೊಂದು ದಶಕದಿಂದ ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ‘ತಾತ್ವಿಕ ತೋಟ’ ತಲೆ ಎತ್ತಲಿದೆ ಎಂದರು.

ಸವಣೂರ–ಶಿಗ್ಗಾವಿ ಸರ್ಕ್ಯೂಟ್: ಸವಣೂರ ಮತ್ತು ಶಿಗ್ಗಾವಿ ತಾಲ್ಲೂಕುಗಳಲ್ಲಿನ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ‘ಸರ್ಕ್ಯೂಟ್’ ರೂಪಿಸಲಾಗುವುದು. ಹಾವೇರಿ ಅಥವಾ ಹುಬ್ಬಳ್ಳಿಯಿಂದ ಬರುವ ಪ್ರವಾಸಿಗರು ಬಂಕಾಪುರದ ನವಿಲು ಧಾಮ, ಬಾಡದ ಕನಕರ ಅರಮನೆ, ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಶರೀಫಗಿರಿ, ಸವಣೂರಿನಲ್ಲಿ ಗೋಕಾಕ ಭವನ, ನವಾಬರ ಅರಮನೆ, ಸತ್ಯಬೋಧ– ವಿಷ್ಣು ತೀರ್ಥ ಹಾಗೂ ಹನಿ ನೀರಾವರಿ ಮತ್ತಿತರ ಯೋಜನೆಗಳನ್ನು ನೋಡಿಕೊಂಡು ಬರಬಹುದು. ಈ ನಿಟ್ಟಿನಲ್ಲಿ ಪೂರಕ ಸಿದ್ಧತೆಗಳು ನಡೆಯುತ್ತಿವೆ.

‘ಶರೀಫರ ತತ್ವ ಪ್ರಚಾರ ಹಾಗೂ ಸಂಶೋಧನೆಯ ಹಿನ್ನೆಲೆಯಲ್ಲಿ ಬೃಹತ್ ಸಭಾಂಗಣ ನಿರ್ಮಿಸುವ ಯೋಜನೆಯನ್ನೂ ಸಮಿತಿ ಹಾಕಿಕೊಂಡಿದೆ. ಶರೀಫರ ‘ಪ್ರಭುಲಿಂಗ ಲೀಲೆ’ ಹಸ್ತಪ್ರತಿ ದೊರೆತಿದ್ದು, ಅದನ್ನು ಪ್ರಕಟಿಸುವ ಯೋಜನೆ ಇದೆ. ಭಾಮಿನಿ ಷಟ್ಪದಿಯಲ್ಲಿರುವ ‘ಶಿವರಾತ್ರಿ ಕತೆ’ಯೂ ದೊರಕಿದೆ’ ಎಂದು ಧರ್ಮದರ್ಶಿ
ಎಸ್‌.ಬಿ. ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ದ್ವಿಶತಮಾನೋತ್ಸವ ಸಂಭ್ರಮ

ಶರೀಫರ 199ನೇ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಮಂಗಳವಾರ (ಜುಲೈ 3) ಬೆಳಿಗ್ಗೆ 6ಕ್ಕೆ ಶರೀಫಗಿರಿಯಲ್ಲಿ ಪಾದುಕೆ ಪೂಜೆ, ಬಳಿಕ ಗುರು ನಮನ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ದ್ವಿಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿಮಠದ ಟ್ರಸ್ಟ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶರೀಫರ ಜಯಂತಿ ಮತ್ತು ಪುಣ್ಯತಿಥಿಗಳೆರಡೂ ಒಂದೇ ದಿನವಾಗಿದೆ. 1819ರಲ್ಲಿ ಜನಿಸಿದ ಶರೀಫರು 1889ರಂದು ನಿಧನರಾಗಿದ್ದರು. ಕಳಸದ ಗುರುಗೋವಿಂದ ಭಟ್ಟರ ಶಿಷ್ಯರಾದ ಅವರು, ಗಾಂವ್‌ ಠಾಣಾ (ಹಿಂದಿನ ಹಳ್ಳಿಗಳ ಶಾಲೆ) ಶಿಕ್ಷಕರಾಗಿದ್ದರು.

‘ಬೋಧ ಒಂದೇ, ಬ್ರಹ್ಮನಾದ ಒಂದೇ, ಶಿಶುನಾಳಧೀಶನ ಭಾಷೆ ಒಂದೇ’ ಎಂದು ಶರೀಫರು ಪ್ರತಿಪಾದಿಸಿದ್ದರು. ಕರ್ನಾಟಕದ ಕಬೀರ, ಭಾವೈಕ್ಯದ ಹರಿಕಾರ, ಜಾನಪದ ಸಂತ ಕವಿ ಎಂದೇ ಖ್ಯಾತಿ ಪಡೆದಿದ್ದು, ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿರುವ ಅವರ ಅನುಭವ ಮತ್ತು ಅನುಭಾವ ಅಪಾರ. ಹೀಗಾಗಿ ಅವರನ್ನು ‘ಚರಮೂರ್ತಿ’ ಎಂದೇ ಕರೆಯಲಾಗುತ್ತದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !