ಬುಧವಾರ, ಆಗಸ್ಟ್ 4, 2021
26 °C
ಸಿ.ಎಂ. ಬಳಿ ಶಿಕ್ಷಕರ ನಿಯೋಗ ಕರೆದುಕೊಂಡು ಹೋಗಲು ನಿರ್ಧಾರ

ಆನ್ ಲೈನ್ ಶಿಕ್ಷಣ, ತಜ್ಞರ ಸಮಿತಿ ವರದಿಯೇ ಅವೈಜ್ಞಾನಿಕ: ಡಾ.ಕುಬೇರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಎಲ್‌ಕೆಜಿಯಿಂದಲೇ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಬೇಕು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಮಾಡಿದ ಶಿಫಾರಸು ಸಂಪೂರ್ಣ ಅವೈಜ್ಞಾನಿಕ ಹಾಗೂ ಅಪ್ರಾಯೋಗಿಕವಾಗಿದೆ ಎಂದು ಕೆ.ಪಿ.ಸಿ.ಸಿ ಶಿಕ್ಷಕರು ಹಾಗೂ ಪದವೀಧರರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಟೀಕಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಮೊಬೈಲ್‌ ನೆಟ್‌ವರ್ಕ್‌ ಸಿಗುವುದಿಲ್ಲ. ಒಂದೊಂದು ಕುಟುಂಬಗಳಲ್ಲಿ ಮೂರ್ನಾಲ್ಕು ಜನ ಮಕ್ಕಳಿದ್ದರೆ ಅವರೆಲ್ಲರಿಗೂ ಆ್ಯಂಡ್ರ್ಯಾಯ್ಡ್‌ ಮೊಬೈಲ್‌ ಕೊಡಿಸಲು ಹೇಗೆ ಸಾಧ್ಯ? ತಜ್ಞರು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಳ್ಳದ ವರದಿ ತಯಾರಿಸಿಲ್ಲ. ಈ ವರದಿಯನ್ನು ಸರ್ಕಾರ ಜಾರಿ ಮಾಡಬಾರದು’ ಎಂದು ಒತ್ತಾಯಿಸಿದರು.

ಬಹಳಷ್ಟು ಗ್ರಾಮ ಪಂಚಾಯ್ತಿಗಳಲ್ಲಿಯೇ ಈಗ ಕಂಪ್ಯೂಟರ್‌, ಇಂಟರ್ನೆಟ್‌ ಸೌಲಭ್ಯಗಳಿಲ್ಲ. ಇನ್ನು ಹಳ್ಳಿಗಳ ಮಕ್ಕಳಿಗೆ ಈ ಸೌಲಭ್ಯಗಳೆಲ್ಲವೂ ಸಿಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು ತಜ್ಞರ ಸಮಿತಿ ವರದಿ ಮೇಲೆ ನಿರ್ಧಾರ ತೆಗೆದುಕೊಳ್ಳುವ ಬದಲು, ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಬೇಕು. ಶಿಕ್ಷಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು.

ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆದ ಕುಬೇರಪ್ಪ ರಾಜ್ಯದಲ್ಲಿ ನಿರುದ್ಯೋಗಿ ಪದವೀಧರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸರ್ಕಾರದಲ್ಲಿಯೂ ಅನೇಕ ಹುದ್ದೆಗಳು ಖಾಲಿಯಿವೆ. ಆದ್ದರಿಂದ ಸರ್ಕಾರ ಅವರಿಗೆ ಉದ್ಯೋಗ ಕೊಡಬೇಕು ಎಂದರು.

ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಬೇಕು, ಕೇಂದ್ರ ಸರ್ಕಾರ ಘೋಷಿಸಿದ ₹20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಅತಿಥಿ ಉಪನ್ಯಾಸಕರಿಗೆ ನಯಾಪೈಸೆಯೂ ಕೊಟ್ಟಿಲ್ಲ. ಅವರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದರು.

ರಾಜ್ಯ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ವೇದಿಕೆಯ ಕಾರ್ಯದರ್ಶಿ ಟಿ.ಬಿ. ದೇಸಾಯಿ, ಪದಾಧಿಕಾರಿಗಳಾದ ಪ್ರಕಾಶ ಹಳಿಯಾಳ, ಪಿ.ಎಂ. ಬಾಚಲಾಪುರ, ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್‌. ಶಿರೋಳ ಇದ್ದರು.

‘ಶೂನ್ಯ ವರ್ಷ’ ಘೋಷಿಸಲು ಆಗ್ರಹ

ಕೊರೊನಾ ಸೋಂಕಿನ ಅಪಾಯದಿಂದ ಮಕ್ಕಳು ಮನೆಬಿಟ್ಟು ಹೊರ ಬರಲಾಗದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ 2020–21ರ ಶೈಕ್ಷಣಿಕ ವರ್ಷವನ್ನು ‘ಶೂನ್ಯ ವರ್ಷ’ ಎಂದು ಘೋಷಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಕೈ ಬಿಡಬೇಕು. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುರಕ್ಷಿತವಾಗಿರುತ್ತಾರೆ ಎಂದು ಕುಬೇರಪ್ಪ ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಚಟುವಟಿಕೆಗಳನ್ನು ಆರಂಭಿಸಬೇಕು, ನೌಕರಿಗಳಿಗೆ ನೇಮಕಾತಿ ಮಾಡುವಾಗ ಶೂನ್ಯ ವರ್ಷವನ್ನು ಪರಿಗಣಿಸದೆ ವಯೋಮಿತಿ ಸಡಿಲಿಕೆ ಕೊಡಬೇಕು. ಇದರ ಬಗ್ಗೆ ಚರ್ಚಿಸಲು ಶಿಕ್ಷಕರನ್ನು ಒಳಗೊಂಡ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು