ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸಾಧನೆ: ರಾಜ್ಯಪಾಲ ವಜುಭಾಯಿ ವಾಲಾ ಶ್ಲಾಘನೆ

Last Updated 27 ಜನವರಿ 2019, 5:05 IST
ಅಕ್ಷರ ಗಾತ್ರ

ಬೆಂಗಳೂರು: ‘ಹಲವು ಸವಾಲು, ಅಡಚಣೆಗಳ ನಡುವೆಯೂ ರಾಜ್ಯ ಸರ್ಕಾರ ಗುರಿ ಸಾಧನೆಯ ಹಾದಿಯಲ್ಲಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಶ್ಲಾಘಿಸಿದರು.

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಸಂದೇಶ ಭಾಷಣ ಮಾಡಿದ ಅವರು, ‘ನಾಲ್ಕು ವರ್ಷಗಳ ಹಿಂದೆ ಇದೇ ಸಮಾರಂಭದಲ್ಲಿ ತಾವು ಮಾತನಾಡಿದ ಸಾಲುಗಳನ್ನು ನೆನಪಿಸಿ, ‘ರಾಜ್ಯವು ಕೆಲವೊಂದು ಅಡಚಣೆ ಮತ್ತು ಸವಾಲುಗಳನ್ನು ಎದುರಿಸಿ ಪ್ರಗತಿ ಪಥದ ಕಡೆಗೆ ಸಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದೆ. ಆ ಮಾರ್ಗದಲ್ಲಿ ಸರ್ಕಾರ ಸಾಗುತ್ತಿದೆ’ ಎಂದು ಹೇಳಿದರು.

‘ಕಳೆದ ವರ್ಷ ಕೊಡಗು, ಮಲೆನಾಡು ಭಾಗಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಸ್ಪಂದಿಸಿವೆ. ರಸ್ತೆ, ಸೇತುವೆಯಂಥ ಮೂಲಸೌಕರ್ಯ ನಿರ್ಮಾಣವು ಕ್ಷಿಪ್ರಗತಿಯಲ್ಲಿ ಆಗುತ್ತಿದೆ’ ಎಂದ ಅವರು, ‘ರಾಜ್ಯದಲ್ಲಿ 156 ತಾಲ್ಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಅಲ್ಲಿ ಉದ್ಯೋಗ ಕಲ್ಪಿಸುವುದು, ನೀರು, ಮೇವು ಪೂರೈಕೆ ಸೇರಿದಂತೆ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ ರೈತರ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸಹಕಾರ ಬ್ಯಾಂಕ್‌ಗಳಲ್ಲಿ ಬಾಕಿಯಿರುವ ₹ 1 ಲಕ್ಷ ಸಾಲ, ವಾಣಿಜ್ಯ ಬ್ಯಾಂಕ್‌ಗಳ ₹ 2 ಲಕ್ಷ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ’ ಎಂದರು.

‘ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸಂಯೋಜಿಸಿ 1ರಿಂದ 12ನೇತರಗತಿವರೆಗೆ 176 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ’ ಎಂದರು.

‘ರಾಜ್ಯದಲ್ಲಿ ಹಸಿರು ಆವರಣ ಹೆಚ್ಚಿಸಲು ‘ಹಸಿರು ಕರ್ನಾಟಕ’ ಕಾರ್ಯಕ್ರಮವನ್ನು ಹಮ್ಮಿಕೊಂಡು 4.65 ಕೋಟಿ ಸಸಿಗಳನ್ನು ನೆಡಲಾಗಿದೆ. ಮಹಿಳಾ ಸುರಕ್ಷತೆಗಾಗಿ ಎಲ್ಲ ಪೊಲೀಸ್‌ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 5 ಮಹಿಳಾ ಠಾಣೆಗಳನ್ನು ಒನ್‌ ಸ್ಟಾಪ್‌ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT