ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಸಂಸ್ಕೃತಿಯ ಅನಾವರಣ

ಯೋಧರ ಶೌರ್ಯ–ಧೈರ್ಯ ಪ್ರದರ್ಶನ l ಅಂಬೇಡ್ಕರ್‌ ಸ್ಮರಣೆ l ಪೌರಕಾರ್ಮಿಕರಿಂದಲೂ ಕವಾಯತು
Last Updated 26 ಜನವರಿ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಪಥಸಂಚಲನದಲ್ಲಿ ವಿದ್ಯಾರ್ಥಿನಿಯರಿದ್ದ ತುಕಡಿಗಳು ಸ್ತ್ರೀ ಸಬಲತೆ ಸಂಕೇತಿಸಿದರೆ,ಅಷ್ಟೇ ಹೆಮ್ಮೆಯಿಂದ ಪೌರಕಾರ್ಮಿಕರು ಹೆಜ್ಜೆ ಹಾಕಿದ್ದು, ಸಂವಿಧಾನ ಒದಗಿಸಿದ ಸಮಾನ ಅವಕಾಶಗಳನ್ನು ಸಾಕ್ಷೀಕರಿಸಿದಂತಿತ್ತು.

ಶೌರ್ಯದ ಪ್ರತಿರೂಪವಾಗಿ ಯೋಧರು ಮೋಟಾರು ಸೈಕಲ್‌ನಲ್ಲಿ ಸಾಹಸ ಪ್ರದರ್ಶಿಸಿದರೆ, ಗರುಡ ಪಡೆಯ ಅಣಕು ಪ್ರದರ್ಶನ ಧೈರ್ಯದ ಪ್ರತೀಕವಾಗಿತ್ತು. ಇನ್ನು, ಆತ್ಮವಿಶ್ವಾಸದ ಪ್ರತಿನಿಧಿಗಳಂತೆ ಹೆಜ್ಜೆ ಹಾಕಿದ್ದು ಸಮರ್ಥನಂ ಶಾಲೆಯ ಅಂಧ ಮಕ್ಕಳು.

ನಗರದಲ್ಲಿ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಭಾನುವಾರ 71ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ಪಥಸಂಚಲನದಲ್ಲಿ ಬಹುಸಂಸ್ಕೃತಿ ಅನಾವರಣಗೊಂಡಿದ್ದು ಹೀಗೆ... ಧ್ವಜಾರೋಹಣದ ನಂತರ ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರ ಎದುರು 44 ತುಕಡಿಗಳ 1,750 ಮಂದಿ ಪಥಸಂಚಲನ ನಡೆಸಿದರು.

ಸಂವಿಧಾನ ಶಿಲ್ಪಿಗೆ ನಮನ: ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭಾರತ ಭಾಗ್ಯ ವಿಧಾತ’ ನೃತ್ಯರೂಪಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಭೆ ಅನಾವರಣಗೊಳಿಸುವ ಜೊತೆಗೆ, ಸಂವಿಧಾನ ರೂಪುಗೊಂಡ ಸಂದರ್ಭ ಮತ್ತು ಅದರ ಆಶಯಗಳನ್ನು ಸಾದರಪಡಿಸುವಲ್ಲಿ ಯಶಸ್ವಿಯಾಯಿತು. ಅಂಬೇಡ್ಕರ್‌ ಅವರ ಪ್ರತಿಕೃತಿಯಲ್ಲದೆ, ಬುದ್ಧ ಪ್ರತಿಕೃತಿ ಪ್ರದರ್ಶಿಸಿದ್ದೂ ಧರ್ಮಸಹಿಷ್ಣುತೆಯ ಸಂಕೇತದಂತಿತ್ತು.

ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಸರ್ಕಾರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯವಾಗಿ ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಕಲ್ಯಾಣ ಕ್ರಾಂತಿಯ ಕಹಳೆ: ಕಲ್ಯಾಣ ಕ್ರಾಂತಿಯ ಕುರಿತು ಚಾಮರಾಜಪೇಟೆ, ಪಾದರಾಯನಪುರ ಹಾಗೂ ಕಸ್ತೂರಬಾ ನಗರದ ಬಿಬಿಎಂಪಿ ಪ್ರೌಢಶಾಲೆಗಳ 600ಕ್ಕೂ ಹೆಚ್ಚು ಮಕ್ಕಳು ನೃತ್ಯರೂಪಕ ಪ್ರದರ್ಶಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಸಾರಿದರು.

ಮೈನವಿರೇಳಿಸಿದ ಬೈಕ್‌ ಸಾಹಸ:ದಿ ಆರ್ಮಿ ಸರ್ವಿಸ್‌ ಕ್ರಾಪ್ಸ್‌ನ ‘ಟಾರ್ನೆಡೊ’ ಯೋಧರು ಕ್ಯಾಪ್ಟನ್‌ ಶಿವಂ ಸಿಂಗ್‌ ನೇತೃತ್ವದಲ್ಲಿ ಪ್ರದರ್ಶಿಸಿದ ಬೈಕ್‌ ಸಾಹಸ ನೋಡುಗರ ಮೈನವಿರೇಳಿಸಿತು.ಸೀಜರ್ ಕ್ರಾಸಿಂಗ್, ಡೈಮಂಡ್ ಕ್ರಾಸಿಂಗ್, ಒನ್ ಲೆಗ್ ರೈಡಿಂಗ್, ಸೈಡ್ ಬ್ಯಾಲೆನ್ಸಿಂಗ್‌ನಂತಹ ಕಸರತ್ತು ಪ್ರದರ್ಶಿಸಿದರು. ಬೈಕ್‌ ಓಡಿಸುತ್ತಲೇ ದಿನಪತ್ರಿಕೆ ಓದಿದಸುಬೇದಾರ್ ಎಸ್.ಎಸ್. ಪ್ರದೀಪ್, ಬೈಕ್‌ ಮೇಲೆ ಏಣಿ ಏರಿ ನಿಂತ ಸುಬೇದಾರ್‌ ಮಲ್ಲಿಕಾರ್ಜುನ್‌ ಗಮನ ಸೆಳೆದರು.

ಬಿಗಿ ಭದ್ರತೆ: ಮೈದಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. 1,200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಮೈದಾನದ ಸುತ್ತ–ಮುತ್ತ 70 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮೈದಾನದ ನಾಲ್ಕೂ ದ್ವಾರಗಳಲ್ಲೂ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ ಸಾರ್ವಜನಿಕರ ಚಟುವಟಿಕೆಯ ಮೇಲೆ ನಿಗಾ ಇಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT