ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಸ್ತಬ್ಧಚಿತ್ರ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ
Last Updated 11 ಜನವರಿ 2019, 11:57 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನವನ್ನು ಪ್ರತಿಬಿಂಬಿಸುವ ರಾಜ್ಯದ ಸ್ತಬ್ಧಚಿತ್ರವು ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದೆ.

ಪ್ರತಿವರ್ಷವು ಗಣರಾಜ್ಯೋತ್ಸವ ದಿನದಂದು ವಿವಿಧ ರಾಜ್ಯಗಳು ತಮ್ಮ ಇಚ್ಛಾನುಸಾರ ಸ್ತಬ್ಧಚಿತ್ರಗಳನ್ನು ತಯಾರಿಸಿ, ಪ್ರದರ್ಶಿಸುತ್ತಿದ್ದವು. ಈ ವರ್ಷ ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ‘ಮಹಾತ್ಮಾ ಗಾಂಧಿ’ ಕುರಿತಾದ ಪರಿಕಲ್ಪನೆ ನೀಡಿ, ಸ್ತಬ್ಧಚಿತ್ರಗಳನ್ನು ರಚಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ದೇಶದ 30 ರಾಜ್ಯಗಳ ಪೈಕಿ 14 ರಾಜ್ಯಗಳಿಗೆ ಸ್ತಬ್ಧಚಿತ್ರ ರೂಪಿಸಲು ಅವಕಾಶ ದೊರೆತಿದೆ. ಇದರಲ್ಲಿ ಕರ್ನಾಟಕವೂ ಒಂದಾಗಿದೆ. ಸತತ ಎಂಟು ವರ್ಷಗಳಿಂದ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ದೊರೆತಂತಾಗಿದೆ. ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವು, ಬೆಳಗಾವಿಯ ಟಿಳಕವಾಡಿಯಲ್ಲಿ 1924ರ ಡಿಸೆಂಬರ್‌ 26ರಿಂದ ಎರಡು ದಿನಗಳ ಕಾಲ ನಡೆದಿತ್ತು. 30,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಅಧಿವೇಶನದ ವೇಳೆ ಪ್ರವೇಶ ದ್ವಾರದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯ ಮಾದರಿಯ ಗೋಪುರ ನಿರ್ಮಿಸಲಾಗಿತ್ತು. ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆ ಇದ್ದುದರಿಂದ ಸಮೀಪದಲ್ಲಿಯೇ ತಾತ್ಕಾಲಿಕ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಕುಡಿಯುವ ನೀರಿನ ಕೊರತೆಯಾಗಬಾರದೆಂದು ದೊಡ್ಡ ಪ್ರಮಾಣದ ಬಾವಿಯನ್ನು ತೊಡಲಾಗಿತ್ತು (ಈಗಲೂ ಇದು ಅಸ್ತಿತ್ವದಲ್ಲಿದ್ದು, ಇದನ್ನು ಕಾಂಗ್ರೆಸ್‌ ಬಾವಿ ಎಂದು ಜನರು ಕರೆಯುತ್ತಾರೆ). ಇವೆಲ್ಲ ಪ್ರಮುಖ ಅಂಶಗಳನ್ನು ಸೇರಿಸಿಕೊಂಡು ಸ್ತಬ್ಧಚಿತ್ರ ರಚಿಸಲಾಗುತ್ತಿದೆ.

ಹುಲಿಗೋಳ ನಾರಾಯಣರಾವ್‌ ಅವರು ಬರೆದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...’ ಗೀತೆಯನ್ನು ಮೊದಲ ಬಾರಿಗೆ ಅಧಿವೇಶನದಲ್ಲಿ ಹಾಡಲಾಗಿತ್ತು. ಇದರ ಜ್ಞಾಪಕಾರ್ಥವಾಗಿ ಗೀತೆಯ ವಾದ್ಯಸಂಗೀತವನ್ನು ಸ್ತಬ್ಧಚಿತ್ರ ಚಲಿಸುವ ವೇಳೆ ಹಿನ್ನೆಲೆಯಾಗಿ ಬಳಸಲು ತೀರ್ಮಾನಿಸಲಾಗಿದೆ.

ನವದೆಹಲಿಯಲ್ಲಿ ನಿರ್ಮಾಣ:ಸ್ತಬ್ಧಚಿತ್ರ ನಿರ್ಮಾಣದ ಹೊಣೆಯನ್ನು ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ವಹಿಸಿಕೊಂಡಿದೆ. ನವದೆಹಲಿಯಲ್ಲಿ ಸ್ತಬ್ಧಚಿತ್ರದ ನಿರ್ಮಾಣ ಭರದಿಂದ ಸಾಗಿದೆ. ರಾಜ್ಯದ ಪ್ರಮುಖ ಕಲಾನಿರ್ದೇಶಕ ಶಶಿಧರ ಅಡಪ ಅವರ ನೇತೃತ್ವದಲ್ಲಿ ಹಲವು ಕಲಾವಿದರು ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.

ಇದೇ ತಿಂಗಳ 20ರೊಳಗೆ ಸ್ತಬ್ಧಚಿತ್ರ ಪೂರ್ಣಗೊಳ್ಳಲಿದೆ. 22ರಂದು ರೆಹರ್ಸಲ್‌ದಲ್ಲಿ ಭಾಗವಹಿಸಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT