ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಮಾಧ್ಯಮಗಳ ಮೇಲೂ ಕಣ್ಗಾವಲು

24X7 ಕಣ್ಣಿಡಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ರಚನೆ
Last Updated 12 ಏಪ್ರಿಲ್ 2018, 11:00 IST
ಅಕ್ಷರ ಗಾತ್ರ

ತುಮಕೂರು: ‘ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯು ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣ, ರೇಡಿಯೋ, ಎಸ್.ಎಂ.ಎಸ್ ಗಳ ಮೇಲೆ ಚುನಾವಣಾ ನೀತಿ ಸಂಹಿತೆ ಮುಕ್ತಾಯದವರೆಗೂ ನಿಗಾ ಇಡಲಿದೆ’ ಎಂದು ಜಿಲ್ಲಾ ಮತದಾನ ಶಿಕ್ಷಣ ಮತ್ತು ಜಾಗೃತಿ ಸಮಿತಿ (ಸ್ವೀಪ್‌) ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ವಿಧಾನ ಸಭಾ ಚುನಾವಣೆ ಪ್ರಯುಕ್ತ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರಿಗೆ ಆಯೋಜಿಸಿದ್ದ ಮಾದರಿ ನೀತಿ ಸಂಹಿತೆ ಚುನಾವಣಾ ವೆಚ್ಚ ನಿರ್ವಹಣೆ, ಕಾಸಿಗಾಗಿ ಸುದ್ದಿ, ಮತಯಂತ್ರ, ಮತಖಾತ್ರಿ ಯಂತ್ರ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಧ್ಯಮಗಳಲ್ಲಿ ಪ್ರಕಟವಾಗುವ ಹಾಗೂ ಪ್ರಸಾರವಾಗುವ ಕಾಸಿಗಾಗಿ ಸುದ್ದಿಗಳನ್ನು (ಪೇಯ್ಡ್‌ ನ್ಯೂಸ್) ಹಾಗೂ ಅನಧಿಕೃತ ಜಾಹೀರಾತುಗಳನ್ನು ಪರಿಶೀಲಿಸುತ್ತದೆ’ ಎಂದು ಹೇಳಿದರು.

‘ಚುನಾವಣಾ ಆಯೋಗವು ತನ್ನ 2010 ಜೂನ್ 8ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿರುವ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಲೇಖನ, ಸುದ್ದಿ ರೂಪದಲ್ಲಿ ಯಾವುದೇ ಮಾಧ್ಯಮದಲ್ಲಿ ಪ್ರಕಟಗೊಂಡರೆ ಅಥವಾ ಪ್ರಸಾರವಾದರೆ ಅದನ್ನು ಪಾವತಿ ಸುದ್ದಿ ಎಂದು ಪರಿಗಣಿಸಲಾಗುವುದು’ ಎಂದು ಹೇಳಿದರು.

‘ಉಮೇದುವಾರರು ಎದುರಾಳಿ ಗಳನ್ನು ದೂಷಿಸುವ ರೀತಿಯ ಸುದ್ದಿ, ವರದಿಗಳನ್ನು ಏಕಪಕ್ಷೀಯವಾಗಿ ಪತ್ರಿಕೆಗಳು ಪ್ರಕಟಿಸಬಾರದು. ದೃಶ್ಯಮಾಧ್ಯಮಗಳು ಪ್ರಸಾರ ಮಾಡುವಂತಿಲ್ಲ. ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಕುರಿತು ಮತದಾರರಿಗೆ ಗೊಂದಲ ಮೂಡಿಸುವ ರೀತಿಯಲ್ಲಿ ಸುದ್ದಿಗಳು ಬಿತ್ತರವಾದರೆ ಅವುಗಳನ್ನು ಪಾವತಿ ಸುದ್ದಿ ಎಂದು ಪರಿಗಣಿಸಲಾಗುವುದು’ ಎಂದು ವಿವರಿಸಿದರು.

ಚುನಾವಣಾ ಮುಖ್ಯ ತರಬೇತಿದಾರ (ಮಾಸ್ಟರ್ ಟ್ರೇನರ್) ಡಾ.ಜಿ.ವಿ.ಗೋಪಾಲ್ ಮಾತನಾಡಿ, ‘ರಾಜಕೀಯ ಪಕ್ಷಗಳು ಪಕ್ಷದ ಶಾಸಕರು, ಮಂತ್ರಿಗಳು, ಸಂಸದರು ಹಾಗೂ ಇತರ ಸೆಲೆಬ್ರಿಟಿಗಳನ್ನು ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ತಾರಾ ಪ್ರಚಾರಕರನ್ನಾಗಿ ನೇಮಿಸಿಕೊಳ್ಳಲು ಅವಕಾಶವಿದೆ’ ಎಂದರು.

‘ಇಂತಹ ತಾರಾ ಪ್ರಚಾರಕರ ಹೆಸರು, ಹುದ್ದೆ, ಹಾಗೂ ಇತರೆ ವಿವರಗಳ ಜೊತೆಗೆ ಅವರು ಪ್ರಚಾರ ಮಾಡುವ ದಿನಾಂಕ, ವೇಳೆ ಹಾಗೂ ಸ್ಥಳ ಕುರಿತ ಮಾಹಿತಿಯನ್ನು ಆಯೋಗಕ್ಕೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು’ ಎಂದು ಅವರು ಹೇಳಿದರು.

‘ಮತದಾನ ಪ್ರಾರಂಭವಾಗಲು ನಿಗದಿಪಡಿಸಿರುವ ಸಮಯಕ್ಕೆ 48 ಗಂಟೆ ಅವಧಿಯೊಳಗೆ, ಮತದಾನ ನಡೆಯುವ ದಿನಾಂಕ, ಮತ ಎಣಿಕೆ ನಡೆಯುವ ದಿನಾಂಕಗಳಂದು ಸಾರ್ವಜನಿಕ ಸಭೆ ನಡೆಸುವಂತಿಲ್ಲ. ಮತಗಟ್ಟೆಯಿಂದ 100 ಮೀಟರ್‌ಗಳ ಅಂತರದ ಪ್ರದೇಶದ ಒಳಗೆ ಮತಕ್ಕಾಗಿ ಪ್ರಚಾರ ಮಾಡುವಂತಿಲ್ಲ. ಮತಗಟ್ಟೆಯ ಹತ್ತಿರ ರಾಜಕೀಯ ಪಕ್ಷಗಳ ಟೆಂಟ್‌ಗಳು ನಿಗದಿತ ಜಾಗ ಮತ್ತು ಅಳತೆಯಲ್ಲಿ ಇರಬೇಕು’  ಎಂದರು.

’ಮತಗಟ್ಟೆಗಳಿಗೆ ಮತದಾರರನ್ನು ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ವಾಪಸ್ ಕರೆದುಕೊಂಡು ಹೋಗುವಂತಿಲ್ಲ’ ಎಂದು ವಿವರಿಸಿದರು.‘ಮತದಾನ ನಡೆಯುವ ದಿನ ಅಭ್ಯರ್ಥಿ ತನಗಾಗಿ ಒಂದು ವಾಹನ ಹಾಗೂ ಇನ್ನೊಂದು ವಾಹನ ಅಭ್ಯರ್ಥಿ ಎಲೆಕ್ಷನ್ ಏಜೆಂಟ್ ಬಳಸಲು ಅವಕಾಶವಿದೆ. ಮತ್ತೊಂದು ವಾಹನವನ್ನು ಅಭ್ಯರ್ಥಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಬಳಸಲು ಅವಕಾಶವಿದೆ. ಆದರೆ, ಇದಕ್ಕೆ ಕೆಲ ಷರತ್ತುಗಳಿವೆ. ಈ ವಾಹನದಲ್ಲಿ ಚಾಲಕ ಸೇರಿ 5 ಜನರು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ವಿವಿಪ್ಯಾಟ್ ನೋಡಲ್ ಅಧಿಕಾರಿ ಗಾಯಿತ್ರಿ, ಮುಖ್ಯ ತರಬೇತಿದಾರ ರಿಜ್ವಾನ್ ಬಾಷಾ ಅವರು ವಿವಿ ಪ್ಯಾಟ್ ಕಾರ್ಯದ ಬಗ್ಗೆ ವಿವರಿಸಿದರು.

ಮಜ್ಜಿಗೆ, ಟೋಪಿ ಕೊಡಬಹುದು

ಅಭ್ಯರ್ಥಿಗಳು ಪ್ರಚಾರದ ಸಮಯದಲ್ಲಿ ಕುಡಿಯುವ ನೀರು, ಮಜ್ಜಿಗೆ, ಟೋಪಿ ಮತ್ತು ಮಫ್ಲರ್‌ಗಳನ್ನು ಮಾತ್ರ ನೀಡಬಹುದು. ಇದರ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲಾಗುವುದು ಎಂದು ಉಪಚುನಾವಣಾಧಿಕಾರಿ ಸೋಮಶೇಖರ್ ತಿಳಿಸಿದರು.

‘ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಯಾವುದೇ ವ್ಯಕ್ತಿಗೆ ಸೇರಿದ ಭೂಮಿ, ಕಟ್ಟಡ, ಕಾಂಪೌಂಡ್ ಗೋಡೆ ಮುಂತಾದವುಗಳನ್ನು ಆ ವ್ಯಕ್ತಿಯ ಲಿಖಿತ ಅನುಮತಿ ಪಡೆಯದೇ ಪ್ರಚಾರ ಸಾಮಗ್ರಿ ಪ್ರದರ್ಶಿಸುವಂತಿಲ್ಲ’ ಎಂದು ಹೇಳಿದರು.

‘ಸಾಮಾಜಿಕ ಜಾಲತಾಣ ಹಾಗೂ ಎಸ್.ಎಂ.ಎಸ್ ಗಳ ಮೇಲೆ ನಿಗಾ ಇಡುವುದು ಕಷ್ಟ ಸಾಧ್ಯವಾದರೂ ಚುನಾವಣಾ ನೀತಿ ಸಂಹಿತೆ ಮುಕ್ತಾಯದವರೆಗೆ ನಿಗಾ ಇಡಲಾಗುತ್ತಿದೆ’ ಎಂದು ಹೇಳಿದರು.

ಪದೇ ಪದೇ ಪ್ರಚಾರವೂ ಜಾಹೀರಾತು!

ಜಿಲ್ಲಾ ಉಪಚುನಾವಣಾಧಿಕಾರಿ ಸೋಮಶೇಖರ್ ಮಾತನಾಡಿ, ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಒಬ್ಬ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷವನ್ನು ಹೊಗಳುವ ಹಕ್ಕನ್ನು ಮಾಧ್ಯಮಕ್ಕೆ ನೀಡಿಲ್ಲ’ ಎಂದು ಹೇಳಿದರು.

‘ಯಾರಾದರೂ ಒಬ್ಬ ಉಮೇದುವಾರ ಅಥವಾ ಪಕ್ಷವನ್ನು ತೆಗಳಿದರೆ ಇತರ ಅಭ್ಯರ್ಥಿ ಅಥವಾ ಪಕ್ಷಕ್ಕೆ ಉತ್ತರ ನೀಡುವ ಹಕ್ಕನ್ನು ನೀಡಿ ಅವರಿಂದ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ಅಂದೇ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗವು 2010ಎ ಸೆಪ್ಟೆಂಬರ್ 23ರಂದು ಪ್ರಕಟಿಸಿದ ಆದೇಶದಲ್ಲಿ ವಿವರಿಸಿದೆ’ ಎಂದು ತಿಳಿಸಿದರು.

‘ಪದೇ ಪದೇ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕ್ರಮ ಚಟುವಟಿಕೆಗಳ ಸುದ್ದಿಗಳನ್ನು ಪುನರಾವರ್ತಿತವಾಗಿ ಮಾಧ್ಯಮಗಳಲ್ಲಿ ಪ್ರಚಾರವಾದಲ್ಲಿ ಅಭ್ಯರ್ಥಿಯ ಚಟುವಟಿಕೆಗಳನ್ನು ಜಾಹೀರಾತಿನಂತೆ ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಸದಸ್ಯ ಕಾರ್ಯದರ್ಶಿ ಡಿ.ಮಂಜುನಾಥ್ ಮಾತನಾಡಿ, ‘ಜಿಲ್ಲಾ ಚುನಾವಣಾಧಿಕಾರಿಗಳು ಪಾವತಿ ಸುದ್ದಿ ಅಥವಾ ಅನಧಿಕೃತ ಜಾಹೀರಾತು ಎಂದು ನಿರ್ಧರಿಸಿದರೆ 96 ಗಂಟೆಯೊಳಗೆ ಸಂಬಂಧಪಟ್ಟ ಪಕ್ಷಕ್ಕೆ ಅಥವಾ ಅಭ್ಯರ್ಥಿಯಿಂದ ಸ್ಪಷ್ಟೀಕರಣ ಪಡೆಯಲಾಗುವುದು’ ಎಂದು ತಿಳಿಸಿದರು.

‘ವೆಚ್ಚದ ವಿವರ ನೀಡಲು ಅಭ್ಯರ್ಥಿ ಅಥವಾ ಪಕ್ಷಕ್ಕೆ ನಿಗದಿತ ಸಮಯದಲ್ಲಿ ಉತ್ತರ ನೀಡಲು ನೋಟಿಸ್ ಜಾರಿ ಮಾಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT