ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಪ್ರಕಟಿಸದಂತೆ ನಿರ್ಬಂಧ ಕೋರಿ ಅರ್ಜಿ

Last Updated 9 ಏಪ್ರಿಲ್ 2019, 14:22 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದಲ್ಲಿ ಸಂಭವಿಸಿದ ಕಟ್ಟಡ ದುರಂತಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು, ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ಬಂಧ ಆದೇಶ ನೀಡಬೇಕು ಎಂದು ಕೋರಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಇಲ್ಲಿನ ಪ್ರಧಾನ ಮುನ್ಸಿಫ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವೃತ್ತ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು, ಫೇಸ್‌ಬುಕ್‌, ಯು ಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಒಳಗೊಂಡು ವಿವಿಧ 41 ಮಾಧ್ಯಮಗಳನ್ನು ಅರ್ಜಿಯಲ್ಲಿ ಎದುರುಗಾರರನ್ನಾಗಿ ಹೆಸರಿಸಲಾಗಿದೆ.

‘ಅರ್ಜಿದಾರರು ಸಮಾಜದಲ್ಲಿ ಓರ್ವ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಘನತೆ ಬೆಳೆಸಿಕೊಂಡಿದ್ದಾರೆ. ಸದ್ಯ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ರಾಜಕೀಯ ವಿರೋಧಿಗಳು ಕಟ್ಟಡ ದುರಂತವನ್ನು ಬಳಸಿಕೊಂಡು ಅವರ ಗೌರವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಮಾಹಿತಿ ಹರಡುತ್ತಿದ್ದಾರೆ. ಇಂಥಸುಳ್ಳು ಮಾಹಿತಿ ಆಧಾರದ ಮೇಲೆ ಮಾಧ್ಯಮಗಳು ಸುದ್ದಿ ಪ್ರಕಟಿಸುತ್ತಿವೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೇಣುಕಾದೇವಿ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆ ಪಾಲುದಾರಿಕೆ ಸಂಸ್ಥೆಯಾಗಿದ್ದು, ದುರಂತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಪಾಲುದಾರರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ನಡೆಯುತ್ತಿದೆ. ಪಾಲುದಾರರ ಪೈಕಿ ಒಬ್ಬರಾಗಿರುವ ಗಂಗಪ್ಪ ಶಿಂತ್ರಿ ಅರ್ಜಿದಾರರ ಮಾವ ಆಗಿರುವುದನ್ನೇ ಬಳಸಿಕೊಂಡು ರಾಜಕೀಯ ವಿರೋಧಿಗಳು ಅರ್ಜಿದಾರರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುದ್ದಿ ಹರಡುತ್ತಿದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲಿಸದೆ ಮಾಧ್ಯಮಗಳು ಅವುಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ ಚುನಾವಣಾ ಸಂದರ್ಭದಲ್ಲಿ ಅರ್ಜಿದಾರರ ಘನತೆಗೆ ಕುಂದುಂಟಾಗುವುದಲ್ಲದೇ, ಚುನಾವಣೆಯಲ್ಲೂ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸುಳ್ಳು, ಮಾನಹಾನಿಕರ, ಗೌರವಕ್ಕೆ ಧಕ್ಕೆ ತರುವಂಥ ಸುದ್ದಿಗಳನ್ನು ಪ್ರಕಟಿಸದಿರುವಂತೆ ನಿರ್ಬಂಧ ಹೇರಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶೆ ವಿಜಯಲಕ್ಷ್ಮಿ ಘಾಣಾಪುರ ಆದೇಶ ಕಾಯ್ದಿರಿಸಿದರು. ಬುಧವಾರ ಆದೇಶ ಪ್ರಕಟವಾಗಲಿದೆ. ಅರ್ಜಿದಾರರ ಪರ ಕೆ.ಎಸ್‌.ಪಾಟೀಲ ವಕಾಲತ್ತುವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT