ಶುಕ್ರವಾರ, ಜೂನ್ 5, 2020
27 °C
ಕುರಿಗಾಹಿಗಳ ಜತೆ ಕುರುಬರ ಬೀಗತನ ಮಾಡಿದ್ದಾರಾ: ಕಾರಜೋಳ ಪ್ರಶ್ನೆ

ಅರ್ಹರಿಗೆ ಸಿಗದ ಮೀಸಲಾತಿ: ವಿಧಾನ ಪರಿಷತ್‌ನಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ನಿಜವಾಗಿಯೂ ತಲುಪಬೇಕಾದವರಿಗೆ ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ ಎಂಬ ಚರ್ಚೆ ಸಾಮಾಜಿಕ ನ್ಯಾಯದ ವಿವಿಧ ಆಯಾಮಗಳ ಚರ್ಚೆಗೆ ದಾರಿ ಮಾಡಿಕೊಟ್ಟಿತು.

ವಿಧಾನಪರಿಷತ್ತಿನಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ನ ಎಚ್.ಎಂ. ರೇವಣ್ಣ, ಕರ್ನಾಟಕದಲ್ಲಿ ಮೀಸಲಾತಿ ನೀಡಿದ ಕ್ರಾಂತಿಕಾರಕ ನಿರ್ಣಯಗಳ ಬಗ್ಗೆ ಪ್ರಸ್ತಾಪಿಸಿದರು. ಇವತ್ತು ಹಿಂದುಳಿದವರು, ಪರಿಶಿಷ್ಟ ಜಾತಿ/ ಪಂಗಡದವರು ಪರಿಷತ್ತಿನಲ್ಲಿ ಬಂದು ಕುಳಿತುಕೊಳ್ಳಬೇಕಾದರೆ ದೇವರಾಜ ಅರಸು ತಂದ ಮೀಸಲಾತಿಯೇ ಕಾರಣ ಎಂದು ಪ್ರತಿಪಾದಿಸಿದರು.

ಮಾತಿನ ಮಧ್ಯೆ, ‘ಕೆನೆಪದರ ಎಂಬ ಪದ್ಧತಿ ತಂದು ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಸೀಮಿತಗೊಳಿಸಿದ್ದಾರೆ. ಕರ್ನಾಟಕದಲ್ಲಿ ಪ್ರವರ್ಗವಾರು ಮೀಸಲಾತಿ ಇದ್ದಂತೆ ಕೇಂದ್ರ ಸರ್ಕಾರವೂ ಜಾರಿಗೆ ತರಬೇಕು. ಲೋಕಸಭೆ, ವಿಧಾನಸಭೆಯಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕು’ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ‘ಮೀಸಲಾತಿ ದಕ್ಕಿಸಿಕೊಳ್ಳಲು ಉಪಜಾತಿಗಳು ದೇಶದ ಉದ್ದಗಲಕ್ಕೂ ಹೋರಾಟ ನಡೆಸುತ್ತಲೇ ಇವೆ. ಆದರೆ, ಒಂದು ಸಮುದಾಯದ ಮೀಸಲಾತಿ ಅಲ್ಲಿನ ಮೇಲುಸ್ತರದವರಿಗೆ ಸಿಕ್ಕಿದೆ ವಿನಃ ನಿಜವಾಗಿ ಸಿಗಬೇಕಾದವರಿಗೆ ಇನ್ನೂ ಸಿಕ್ಕಿಲ್ಲ’ ಎಂದರು.

‘ಕುರುಬರು ಈಗ ಪರಿಶಿಷ್ಟ ಪಂಗಡಕ್ಕೆ ಸೇರಬೇಕು ಎಂದು ಹೋರಾಟ ಮಾಡುತ್ತಿದ್ದೀರಿ’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಕುಟುಕಿದರು. 

‘ಕುಲಶಾಸ್ತ್ರ ಅಧ್ಯಯನದ ಪ್ರಕಾರ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಬೇಕು. ಕುರಿಗಾಹಿಗಳು ಅಲೆಮಾರಿ ಜೀವನವನ್ನೇ ನಡೆಸುತ್ತಿದ್ದಾರೆ. ನಮ್ಮ ಸಮುದಾಯದ ಹಸಿವು, ಕಷ್ಟ ಕಾರ್ಪಣ್ಯ ನಿಮಗೇನು ಗೊತ್ತು ’ ಎಂದು ರೇವಣ್ಣ ಎದಿರೇಟು ಕೊಟ್ಟರು.

‘ನಮ್ಮ ಸಮಾಜದಲ್ಲಿ ಉಪಜಾತಿ ಇಲ್ಲ. ಕುರುಬರಿಗೆ ಒಂದೇ ದೇವರು, ಒಂದೇ ಮಠ, ಒಂದೇ ಸಂಘ ಇರುವುದು’ ಎಂದು ಬಿಜೆಪಿಯ ರಘುನಾಥರಾವ್ ಮಲ್ಕಾಪುರೆ ಧ್ವನಿಗೂಡಿಸಿದರು.

ಇದಕ್ಕೆ ಆಕ್ಷೇಪಿಸಿದ ಕಾರಜೋಳ, ‘ಕುರುಬ ಸಮುದಾಯದವರು ಕುರಿದೊಡ್ಡಿಯನ್ನು ನಡೆಸುವ, ಕುರುಗಾಹಿಗಳ ಜತೆ ಎಂದು ರಕ್ತ ಸಂಬಂಧ, ಬೀಗತನ ಎಂದು ಮಾಡಿದ್ದೀರಿ? ನೀವು ಸಾಕ್ಷ್ಯ ಕೊಡಿ. ನಮ್ಮ ಸಮಾಜದಲ್ಲಿ 10 ಉಪಜಾತಿಗಳಿವೆ. ಪಾಯಿಖಾನೆ ತೊಳೆಯುವ(ಸ್ಕ್ಯಾವೆಂಜರ್ಸ್) ಸಮುದಾಯವರ ಜತೆ ಬೀಗತನ ಮಾಡಿಲ್ಲ. ಬೆಂಗಳೂರಿನ ಪೌರಕಾರ್ಮಿಕ ಕುಟುಂಬದವರ ಜತೆ ಮದುವೆ ಸಂಬಂಧವನ್ನು ಯಾರು ಮಾಡಿದ್ದೇವೆ ಹೇಳಿ’ ಎಂದು ಪ್ರಶ್ನಿಸಿದರು.

ಈ ಮಧ್ಯೆ ಮಾತನಾಡಿದ ಬಿಜೆಪಿಯ ಕೆ.ಪಿ. ನಂಜುಂಡಿ, ‘ರೇವಣ್ಣನವರೇ ಹಿಂದುಳಿದವರ ಬಗ್ಗೆ ನೀವು ಹೇಳಿ’ ಎಂದರು.

ಆಗ ಹೊರಟ್ಟಿ, ‘ನೀನು ಸಾವಿರ ಕೋಟಿ ಒಡೆಯ. ನೀನ್ಯಾವ ಹಿಂದುಳಿದವನು?’ ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ನಂಜುಂಡಿ, ‘ನಿಮಗೆ ಹೋಲಿಸಿದರೆ ನಾನು ಅತ್ಯಂತ ಬಡವ. ನೀವೇ ಅತ್ಯಂತ ಶ್ರೀಮಂತರು’ ಎಂದು ಹೊರಟ್ಟಿಗೆ ತಿವಿದರು.

ಮೊದಲ ಪಂಕ್ತಿಯಲ್ಲಿ ಕುಳಿತವರು ಎದ್ದೇಳಿ: ಆಯನೂರು

‘ಮೀಸಲಾತಿ ಯಾರಿಗೆ ತಲುಪಬೇಕಿತ್ತೋ ಅವರಿಗೆ ಇನ್ನೂ ತಲುಪಿಲ್ಲ. ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತವರು ಹೊಟ್ಟೆ ತುಂಬಾ ಉಂಡ ಮೇಲೂ ಪಂಕ್ತಿ ಬಿಟ್ಟು ಮೇಲೇಳದೇ ಇರುವುದೇ ಇದಕ್ಕೆ ಕಾರಣ’ ಎಂದು ಬಿಜೆಪಿಯ ಆಯನೂರು ಮಂಜುನಾಥ್‌ ಹೇಳಿದರು.

‘ಒಮ್ಮೆ ಮೀಸಲಾತಿ ಪಡೆದವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಹೀಗಾದಲ್ಲಿ ಎರಡು–ಮೂರನೇ ಪಂಕ್ತಿಯವರಿಗೆ ಊಟ ಎಲ್ಲಿ ಸಿಕ್ಕಿತು. ಸೌಲಭ್ಯ ಪಡೆದವರು ತಮ್ಮ ಸಮುದಾಯದ ತಳಸ್ತರದವರಿಗೆ ಬಿಟ್ಟುಕೊಡುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಜಾತಿ ಗಣತಿ ವರದಿ ಸ್ವೀಕರಿಸಿ : ಎಚ್.ಎಂ. ರೇವಣ್ಣ

ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ)ವರದಿಯನ್ನು ಸರ್ಕಾರ ಸ್ವೀಕರಿಸದೇ ಇದ್ದರೆ ಸಾಮಾಜಿಕ ನ್ಯಾಯವನ್ನೇ ಕೊಲೆ ಮಾಡಿದಂತೆ ಆಗುತ್ತದೆ ಎಂದು ಕಾಂಗ್ರೆಸ್‌ನ ಎಚ್.ಎಂ. ರೇವಣ್ಣ ಹೇಳಿದರು.

‘ಮೀಸಲಾತಿ ಸೌಲಭ್ಯ ಎಷ್ಟರಮಟ್ಟಿಗೆ ತಲುಪಿದೆ, ಇನ್ನೂ ಎಷ್ಟು ಜನರು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂಬುದರ ಪತ್ತೆಗೆ ₹198 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ವರದಿ ಎಲ್ಲಿದೆ? ಅದು ಕಸದಬುಟ್ಟಿಗೆ ಸೇರಿದೆಯೇ ಎಂಬುದನ್ನು ಸದನಕ್ಕೆ ತಿಳಿಸಬೇಕು.ವರದಿ ಒಪ್ಪುವುದು ಬಿಡುವುದು ನಂತರದ ವಿಷಯ. ಮೊದಲು ಸ್ವೀಕರಿಸುವ ಕೆಲಸ ಮಾಡಿ’ ಎಂದು ಸರ್ಕಾರಕ್ಕೆ ಸಲಹೆ ಇತ್ತರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು