ಬಡ್ತಿ: ‘ಸುಪ್ರೀಂ’ ಗೆ ಶೀಘ್ರ ಅರ್ಜಿ

7
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ– ಪರಮೇಶ್ವರ

ಬಡ್ತಿ: ‘ಸುಪ್ರೀಂ’ ಗೆ ಶೀಘ್ರ ಅರ್ಜಿ

Published:
Updated:

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆ ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಿಂದ ಹಿಂಬಡ್ತಿ ಆತಂಕ ಎದುರಿಸುತ್ತಿರುವ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ತಂದಿರುವ ಕಾಯ್ದೆ ಅನುಷ್ಠಾನ ಮಾಡಲು ಅವಕಾಶ ನೀಡಬೇಕು ಅಥವಾ ಈ ಪ್ರಕರಣದ ಅಂತಿಮ ತೀರ್ಪು‌ ಶೀಘ್ರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ವಿಷಯದ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಬುಧವಾರ ಉನ್ನತ ಮಟ್ಟದ ಸಭೆ ನಡೆಯಿತು. ಸಚಿವ ಸಂಪುಟ ಸಭೆ ಗುರುವಾರ ನಡೆಯಲಿದೆ.

‘ಬಡ್ತಿ ಮೀಸಲು ಪ್ರಕರಣ ಇದೇ 14ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ಕಾಯಲು ಸಾಧ್ಯವಿಲ್ಲ. ಈ ಬಗ್ಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು. 

‘ಕೋರ್ಟ್‌ ನೀಡಿದ ತೀರ್ಪು ಅನುಷ್ಠಾನಗೊಳಿಸಿದ ಪರಿಣಾಮ ಕೆಲವರು ಈಗಾಗಲೇ ಹಿಂಬಡ್ತಿ ಪಡೆದಿದ್ದಾರೆ. ಯಾವುದೇ ಇಲಾಖೆಯಲ್ಲಿ ಹಿಂಬಡ್ತಿ ಹಾಗೂ ಮುಂಬಡ್ತಿ ನೀಡದಂತೆ ಮುಖ್ಯಮಂತ್ರಿ ಮತ್ತೊಮ್ಮೆ ಆದೇಶ ನೀಡಿದರೆ ಪರಿಶಿಷ್ಟ ವರ್ಗದ ನೌಕರರಲ್ಲಿರುವ ಆತಂಕ ದೂರ ಆಗಲಿದೆ’ ಎಂದೂ ಪರಮೇಶ್ವರ ಹೇಳಿದರು.

‘ಕಾಯ್ದೆ ಜಾರಿಗೊಳಿಸಿ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು’ ಎಂದು ಪರಿಶಿಷ್ಟ ಸಮುದಾಯದ ನೌಕರರ ಸಂಘಟನೆಗಳ ಮುಖಂಡರು ಒತ್ತಾಯಿಸಿದಾಗ, ‘ನೀವು ಹೇಳಿದಂತೆ ಮಾಡಲು ಸಾಧ್ಯವಿಲ್ಲ. ಕೋರ್ಟ್‌ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ತೀರ್ಪು ಬರುವರೆಗೆ ಕಾಯುವುದೇ ಒಳಿತು. ಕಾಯ್ದೆ ಜಾರಿಗೊಳಿಸಿದ ಬಳಿಕ ಕೋರ್ಟ್‌ ವ್ಯತಿರಿಕ್ತ ತೀರ್ಪು ನೀಡಿದರೆ ಮತ್ತೊಂದು ಸಮಸ್ಯೆ ಸೃಷ್ಟಿಯಾಗಲಿದೆ’ ಎಂದು ಮುಖ್ಯಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಮ್ಮ ಪಾಲಿಗೆ ನೀವೇ ನಾಯಕರು. ಹೀಗಾಗಿ ಕಾಯ್ದೆ ಜಾರಿಗೊಳಿಸುವ ಮೂಲಕ ಸಂಕಷ್ಟ ಸ್ಥಿತಿಯಲ್ಲಿರುವ ನೌಕರರ ನೆರವಿಗೆ ಬರಬೇಕು. ಅಷ್ಟೇ ಅಲ್ಲ, ಹಿಂಬಡ್ತಿ–ಮುಂಬಡ್ತಿ ಗೊಂದಲದಲ್ಲಿ ಕೆಲವು ಅಧಿಕಾರಿಗಳಿಗೆ ನಾಲ್ಕು ತಿಂಗಳುಗಳಿಂದ ವೇತನ ಸಿಕ್ಕಿಲ್ಲ’ ಎಂದು ದಲಿತ ಸಂಘಟನೆಗಳ ನಾಯಕರು ಪರಮೇಶ್ವರ ಅವರ ಗಮನಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವೇತನ ನೀಡುವಂತೆ ನಿರ್ದೇಶನ‌ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಸಚಿವ ಕೃಷ್ಣ ಬೈರೇಗೌಡ, ಶಿಕ್ಷಣ ಸಚಿವ ಎನ್. ಮಹೇಶ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಕಾನೂನು ಕಾರ್ಯದರ್ಶಿ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ್ ಸಭೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !