ಗುರುವಾರ , ಜುಲೈ 7, 2022
22 °C

ವಾಯುಮಾಲಿನ್ಯ ನಿಯಂತ್ರಣಕ್ಕೆ ‘ರಿಸೆಟ್ ‌ವಿತ್ ‌ಸೈಕ್ಲಿಂಗ್‌’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಅವಧಿ ಮುಗಿದ ನಂತರವೂ, ನಗರದ ವಾಯುಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದಕ್ಕಾಗಿ ನಗರದ ಸೈಕ್ಲಿಂಗ್ ಪ್ರಿಯರು ‘ರಿಸೆಟ್‌ವಿತ್‌ಸೈಕ್ಲಿಂಗ್‌‘ ಅಭಿಯಾನ ಆರಂಭಿಸಿದ್ದಾರೆ.

ಕೋವಿಡ್‌ 19 ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿರುವ ಪರಿಣಾಮ ನಗರದಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು. ಹೀಗಾಗಿ ವಾಯುಮಾಲಿನ್ಯ ಪ್ರಮಾಣವೂ ತಗ್ಗಿತ್ತು. ಲಾಕ್‌ಡೌನ್‌ ನಂತರವೂ ಹೀಗೆ ಪರಿಸರವನ್ನು ಶುದ್ಧವಾಗಿಡುವುದಕ್ಕಾಗಿ ಕಾರು, ಬೈಕ್‌ನಲ್ಲಿ ಕಚೇರಿಗೆ ಹೋಗುವವರನ್ನು, ಸೈಕಲ್ ಬಳಸುವಂತೆ ಆಕರ್ಷಿಸಲು ಸೈಕ್ಲಿಂಗ್ ಪ್ರಿಯರು ಈ ಅಭಿಯಾನ ಅರಂಭಿಸಿದ್ದಾರೆ.

‘ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವುದು, ಒತ್ತಡ ನಿಯಂತ್ರಣ, ಉತ್ತಮ ಆರೋಗ್ಯ ಕಾಪಾಡುವುದು, ಗಾಳಿಯ ಗುಣಮಟ್ಟ ಸುಧಾರಣೆಗಾಗಿ ಬೈಸಿಕಲ್ ಬಳಸೋಣ’ ಎಂಬುದು ಈ ಅಭಿಯಾನದ ಧ್ಯೇಯ ವಾಕ್ಯ. ಸೈಕ್ಲಿಸ್ಟ್ ಮತ್ತು ಬೈಸಿಕಲ್ ಮೇಯರ್ ಎಂದೇ ಖ್ಯಾತರಾಗಿರುವ ಸತ್ಯ ಶಂಕರನ್, ಡಾ.ಅರವಿಂದ್ ಭತೇಜಾ ನೇತೃತ್ವದಲ್ಲಿ ಈ ಅಭಿಯಾನ ಆರಂಭವಾಗಿದ್ದು, ಆಸಕ್ತ ಸೈಕ್ಲಿಸ್ಟ್‌ಗಳೂ ಕೈ ಜೋಡಿಸಿದ್ದಾರೆ. ಈ ತಂಡದ ಸದಸ್ಯರು, ‘ನಿತ್ಯದ ಅಗತ್ಯಗಳಿಗೆ ಸೈಕಲ್‘ಬಳಸಿ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ವಿಷಯವನ್ನು ಜಾಲತಾಣಗಳ ಮೂಲಕವೂ ಹಂಚುತ್ತಿದ್ದಾರೆ. ‘ಅಷ್ಟೇ ಅಲ್ಲ, ಸೈಕಲ್‌ ಬಳಕೆಗೆ ಆದ್ಯತೆ ನೀಡಿ, ಪ್ರೋತ್ಸಾಹ ನೀಡಬೇಕು‘ ಎಂದು ಸರ್ಕಾರ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಅಭಿಯಾನಕ್ಕೆ ಬೆಂಬಲ ಸೂಚಿಸುವವರು ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ತಾವು ಸೈಕಲ್‌ ಬಳಸುತ್ತಿರುವ ಫೋಟೊವನ್ನು ಅಪ್‌ಲೋಡ್‌ ಮಾಡಿ #resetwithcycling ಎಂದು ಹ್ಯಾಷ್‌ಟ್ಯಾಗ್‌ ಬಳಸಬೇಕು. 

‘ಲಾಕ್‌ಡೌನ್‌‌ ತೆರವಾಗುತ್ತಿದ್ದಂತೆ ಪುನಃ ವಾಹನ ಸಂಚಾರ ಹೆಚ್ಚಾಗಿ ವಾಯುಮಾಲಿನ್ಯ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ಸರ್ಕಾರ ಸೈಕಲ್‌ ಸಂಚಾರಕ್ಕೆ ಪ್ರೋತ್ಸಾಹಿಸಬೇಕು. ಜನರೂ ಮುತುವರ್ಜಿಯಿಂದ ಈ ಅಭಿಯಾನಕ್ಕೆ ಕೈಜೋಡಿಸಿ, ತಮ್ಮ ಸ್ನೇಹಿತರು, ಕುಟುಂಬ ಸದಸ್ಯರಿಗೂ ಸೈಕಲ್‌ ಬಳಸುವಂತೆ ಉತ್ತೇಜಿಸಬೇಕು‘ ಎಂದು ಮನವಿ ಮಾಡುತ್ತಾರೆ ಮೇಯರ್ ಸತ್ಯ ಶಂಕರನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು